
ಚಿತ್ತಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು ಆಕರ್ಷಕ ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ
ಚಿತ್ತಾಪುರ: ತಿಂಗಳಿಡೀ ಹಗ್ಗಜಗ್ಗಾಟ, ವಾದ–ಪ್ರತಿವಾದ, ಹಲವು ‘ತಿರುವು’ಗಳಿಗೆ ಸಾಕ್ಷಿಯಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಭಾನುವಾರ ಪಟ್ಟಣದಲ್ಲಿ ‘ಶಾಂತಿಯುತ’ವಾಗಿ ಸಂಪನ್ನಗೊಂಡಿತು.
ಪಥಸಂಚಲನ ಹೊರಡುವ ಪಟ್ಟಣದ ಬಜಾಜ್ ಕಲ್ಯಾಣ ಮಂಟಪ ಆವರಣದಲ್ಲಿ 300 ಗಣವೇಷಧಾರಿಗಳು, 50 ‘ಘೋಷ್’ ವಾದ್ಯದವರಿದ್ದರೆ, ಹೊರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರು, ನೂರಾರು ಸಾರ್ವಜನಿಕರು ಜಮಾಯಿಸಿದ್ದರು.
ಮಧ್ಯಾಹ್ನ 3.45ಕ್ಕೆ ಆರಂಭವಾದ ಗಣವೇಷಧಾರಿಗಳ ಪಥಸಂಚಲನವು ನಿಗದಿತ ಮಾರ್ಗದಲ್ಲಿ ನಡೆಯಿತು. ಬಳಿಕ ವೇದಿಕೆ ಕಾರ್ಯಕ್ರಮ ‘ಬೌದ್ಧಿಕ’ ಜರುಗಿತು.
ಬೌದ್ದಿಕ್‌ನಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ, ‘100 ವರ್ಷಗಳಲ್ಲಿ ಸಂಘವು ಏನು ಮಾಡಿದೆ’ ಎಂಬ ಟೀಕೆಗೆ ಉತ್ತರಿಸಲು ಪ್ರಯತ್ನ ಮಾಡಿದರು.
‘ಹಿಂದೂಗಳಲ್ಲಿ ಹಿಂದುತ್ವದ ಜಾಗೃತಿ ತರಲು, ಅವರನ್ನು ಸಂಘಟಿಸಲು ಕೆ.ಬಿ.ಹೆಡಗೆವಾರ್ 17 ತರುಣರೊಂದಿಗೆ 1925ರಲ್ಲಿ ಆರ್‌ಎಸ್‌ಎಸ್ ಆರಂಭಿಸಿದರು. ಕಳೆದ 100 ವರ್ಷಗಳಲ್ಲಿ ಸಂಘವು ಮಾಡಿದ ನರೇಟಿವ್ ‘ಹಿಂದೂ’. ಇದೀಗ ದೇಶದಲ್ಲಿ 3,700ಕ್ಕೂ ಹೆಚ್ಚು ಪ್ರಚಾರಕರು ಸಂಘದಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದ 70 ಸಾವಿರಕ್ಕೂ ಅಧಿಕ ಊರುಗಳಲ್ಲಿ ಸಂಘದ ಶಾಖೆ, 30 ಸಾವಿರದಷ್ಟು ಊರುಗಳಲ್ಲಿ ಸಂಘದ ಮಂಡಳಿ ಇವೆ. ಒಂದು ಲಕ್ಷ ಗ್ರಾಮಗಳಲ್ಲಿ ಸಂಘದ ಕೆಲಸ ನಡೆಯುತ್ತಿದೆ. 6.50 ಲಕ್ಷ ಹಳ್ಳಿಗಳಲ್ಲಿ ಸಂಘದ ಚಟುವಟಿಕೆ ಯಾವುದೇ ಒಡಕಿಲ್ಲದೇ ಸಾಗಿವೆ’ ಎಂದು ವಿವರಿಸಿದರು.
‘ಸಂಘವು ಶೈಕ್ಷಣಿಕ ವಿಭಾಗದಲ್ಲಿ ಎಬಿವಿಪಿ, ವಿದ್ಯಾಭಾರತಿ ಕೆಲಸ ಮಾಡುತ್ತಿವೆ. ಸುರಕ್ಷಾ ವಿಭಾಗದಲ್ಲಿ ಹಿಂದೂ ಜಾಗರಣ ವೇದಿಕೆ, ಸೀಮಾ ಸುರಕ್ಷಾ ಪರಿಷತ್ ಶ್ರಮಿಸುತ್ತಿವೆ. ಆರ್ಥಿಕ ಕ್ಷೇತ್ರದಲ್ಲಿ ಸ್ವದೇಶಿ ಜಾಗರಣ ಮಂಚ್, ಸಹಕಾರ ಭಾರತಿ ಸಕ್ರಿಯವಾಗಿವೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್, ವನವಾಸಿ ಕಲ್ಯಾಣಾಶ್ರಮ ದುಡಿಯುತ್ತಿವೆ. ವೈಚಾರಿಕ ಕ್ಷೇತ್ರದಲ್ಲಿ ಭಾರತೀಯ ಶಿಕ್ಷಣ ಮಂಡಲವಿದೆ. ಹೀಗೆ ಆರ್‌ಎಸ್‌ಎಸ್ ಮಾತ್ರವಲ್ಲದೇ ಆರು ಸಂಕುಲಗಳಾಗಿ, 36 ಸಂಘಟನೆಗಳು ಕೆಲಸ ಮಾಡುತ್ತಿವೆ. ಜೊತೆಗೆ ರಾಷ್ಟ್ರ ಸೇವಿಕಾ ಸಮಿತಿಯು ಹೆಣ್ಣು ಮಕ್ಕಳಿಗಾಗಿ ಕೆಲಸ ಮಾಡುತ್ತಿದೆ. ಇದರೊಂದಿಗೆ ಜಗತ್ತಿನ 40 ರಾಷ್ಟ್ರಗಳಲ್ಲಿ ಹಿಂದುತ್ವವನ್ನೇ ಗುರಿಯಾಗಿಟ್ಟುಕೊಂಡಿದ್ದು, ಜಗತ್ತಿಗೆ ಒಳ್ಳೆಯದಕ್ಕಾಗಿ ಸಂಘ ದುಡಿಯುತ್ತಿದೆ’ ಎಂದರು.
‘ಸಂಘವನ್ನು ಟೀಕಿಸುವವರು ಸಂಘವನ್ನು ಹತ್ತಿರದಿಂದ ಬಂದು ನೋಡಬೇಕು. ಸಂಘವನ್ನು ಅರಿತುಕೊಳ್ಳಬೇಕು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ಸಂಘದ ಅಂತಿಮ ಗುರಿ. ಟೀಕೆ, ಟಿಪ್ಪಣಿಗಳಿಗೆ ಉತ್ತರ ಒಂದೇ. ಟೀಕಿಸುವವರನ್ನೂ ನಾವು ಬಿಡಲ್ಲ. ಅವರೂ ನಮ್ಮ ಅಣ್ಣ–ತಮ್ಮಂದಿರೇ. ಅವರನ್ನೂ ಭೇಟಿಯಾಗುತ್ತೇವೆ. ಇಂದು ಅಲ್ಲದಿದ್ದರೂ ಮುಂದಿನ 10 ವರ್ಷಗಳಲ್ಲಿ ಅವರನ್ನೂ ಈ ಹಿಂದುತ್ವದ ಪ್ರವಾಹದಲ್ಲಿ ಕರೆದೊಯ್ಯುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಟೀಕಾಕಾರರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಉದ್ಯಮಿ ಭೀಮರೆಡ್ಡಿ ಕುರಾಳ ಅತಿಥಿಯಾಗಿ ಪಾಲ್ಗೊಂಡಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಚಂದ್ರಶೇಖರ ಅವಂಟಿ, ರವೀಂದ್ರ ಸಜ್ಜಶೆಟ್ಟಿ, ಪ್ರಹ್ಲಾದ ವಿಶ್ವಕರ್ಮ, ವಿಠ್ಠಲ ವಾಲ್ಮೀಕಿ ನಾಯಕ, ಬಸವರಾಜ ಬೆಣ್ಣೂರಕರ, ನಾಗರಾಜ ಬಂಕಲಗಿ, ಅಂಬರೀಷ ಸುಲೇಗಾವ, ಸಂತೋಷ ಹಾವೇರಿ, ಶಶಿಕಾಂತ ಪಾಟೀಲ ಬೆಳಗುಂಪಿ, ಸುರೇಶ ರಾಠೋಡ, ಗೋಪಾಲ ರಾಠೋಡ, ಅಶೋಕ ನಿಪ್ಪಾಣಿ, ಮಲ್ಲಿಕಾರ್ಜುನ ಎಮ್ಮೆನೋರ, ವೀರಣ್ಣ ಯಾರಿ, ಮಲ್ಲು ಇಂದೂರ ಕಮರವಾಡಿ, ಪ್ರಸಾದ ಅವಂಟಿ, ಬಾಲಾಜಿ ಬುರಾಬುರೆ, ನಾಗರಾಜ ಹೂಗಾರ, ಕೋಟೇಶ್ವರ ರೇಷ್ಮಿ, ಅರುಣ ಪೋದ್ದಾರ್, ಮೇಘರಾಜ್ ಗುತ್ತೇದಾರ ಹಾಗೂ ದುರ್ಗಾವಾಹಿನಿಯ ಮಹಿಳೆಯರು ಇದ್ದರು.
ಪೊಲೀಸರ ನಿಗಾ; ನೂಕಾಟ ತಳ್ಳಾಟ
ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸಹೋದರ ಜಿ.ಕೆ.ಪಾಟೀಲ ಸೇರಿದಂತೆ ಹಲವರು ಗಣವೇಷ ಧರಿಸಿ ಪಟ್ಟಣಕ್ಕೆ ಬಂದಿದ್ದರು. 300 ಮಂದಿಯ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಪೊಲೀಸರು ಪಥಸಂಚಲನ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿದರು. ಆಗ ತಳ್ಳಾಟ–ನೂಕಾಟ ಜರುಗಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಬೈಕ್ ಕಾರುಗಳಲ್ಲಿ ಬಂದ ತಾಲ್ಲೂಕಿನ ವಿವಿಧೆಡೆಯ ಗಣವೇಷಧಾರಿಗಳನ್ನು ಪೊಲೀಸರು ಲಾಡ್ಜಿಂಗ್ ವೃತ್ತದಲ್ಲಿ ತಡೆದು ತಪಾಸಣೆಗೆ ಒಳಪಡಿಸಿ ಮುಂದೆ ಹೋಗಲು ಬಿಡುತ್ತಿದ್ದರು. ಚಿತ್ತಾಪುರದ ಹೊರಗಿನ ಜನರ ವಾಹನಗಳನ್ನು ಬಜಾಜ್ ಕಲ್ಯಾಣ ಮಂಟಪದ ಎದುರಿನ ರಸ್ತೆಯಿಂದ ಚಲಿಸಲು ಅವಕಾಶ ನೀಡದೇ ಅವರಿಗೆ ‘ಪರ್ಯಾಯ’ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು.
ಚಿತ್ತಾಪುರ ಹೆಸರು ದೇಶದಲ್ಲಿ ಅನೇಕರಿಗೆ ತಿಳಿರಲಿಲ್ಲ. ದೇಶದಲ್ಲಿ ಕೋರ್ಟ್ ಕಟಕಟೆ ಏರಿ ಪಥಸಂಚಲನಕ್ಕೆ ಅನುಮತಿ ಪಡೆದಿದ್ದರಿಂದ ಚಿತ್ತಾಪುರ ಖ್ಯಾತಿಗಳಿಸಿದೆ. ಅದಕ್ಕೆ ಕಾರಣವಾದವರಿಗೆ ಧನ್ಯವಾದಗಳು–ಭೀಮರೆಡ್ಡಿ ಕುರಾಳ, ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.