ಚಿತ್ತಾಪುರ: ನೀರು ಪೂರೈಕೆಗೆ ಸಮರ್ಪಕ ವ್ಯವಸ್ಥೆ ಹಾಗೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಭಣಿಸದಂತೆ ಮುನ್ನೆಚ್ಚರಿಕೆ ವಹಿಸದೆ ಕಡೆಗಣಿಸಿದ್ದರಿಂದ ತಾಲ್ಲೂಕಿನ ಇವಣಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೊಲದಲ್ಲಿನ ತೆರೆದ ಬಾವಿಯಲ್ಲಿ ಬಿಸಿಲಿನ ತಾಪ ಮತ್ತು ಮರಳು ಗಣಿಗಾರಿಕೆ ದುಷ್ಪರಿಣಾಮದಿಂದ ದಿನೇ ದಿನೇ ನೀರು ಕಡಿಮೆಯಾಗುತ್ತಿದೆ. ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಒಂದೇ ಮೇಲ್ಮಟ್ಟದ ಜಲಸಂಗ್ರಹಗಾರದಿಂದ ನೀರು ಪೂರೈಕೆ ಕಷ್ಟವಾಗುತ್ತಿದೆ. ಟ್ಯಾಂಕ್ ಹತ್ತಿರ ಇರುವ ನಳ ಮತ್ತು ಅಗಸಿ ಹತ್ತಿರ ಮಠದ ಗೋಡೆಗೆ ಅಳವಡಿಸಿದ ನಳಗಳೇ ಗ್ರಾಮಕ್ಕೆ ನೀರಿನ ಆಧಾರವಾಗಿದೆ. ಸಮಸ್ಯೆ ಪರಿಹಾರಕ್ಕೆ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಿತ್ಯ ಬೆಳಗಾದರೆ ಜನ ಸುಡುವ ಬಿಸಿಲನ್ನೂ ಲೆಕ್ಕಿಸದೆ ಕುಡಿಯಲು ಮತ್ತು ದೈನಂದಿನ ಬಳಕೆಗಾಗಿ ನೀರು ತರಲು ಖಾಲಿ ಕೊಡ ಹಿಡಿದುಕೊಂಡು ಗ್ರಾಮದಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ.
ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಾಡಬೇಕು ಎಂದು ಮಹಿಳೆಯರು ಖಾಲಿ ಕೊಡದೊಂದಿಗೆ ಬುಧವಾರ ಗ್ರಾಮ ಪಂಚಾಯಿತಿಗೆ ಹೋಗಿ ಪಿಡಿಒ ಅವರನ್ನು ಮನವಿ ಮಾಡಿದ್ದಾರೆ. ಆದರೆ, ಪಿಡಿಒ ಅವರು ಮಹಿಳೆಯರನ್ನೇ ಹೆದರಿಸಿ, ‘ಅಧ್ಯಕ್ಷರೇ ಬರುವುದಿಲ್ಲ. ನಾವೇನು ಮಾಡಬೇಕು’ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮದ ಮಹೆಬೂಬ್ ಕೂಡಿ, ಹುಸೇನಸಾಬ್ ಭಾಗೋಡಿ, ಭರಮಣ್ಣಾ ಮಡಿವಾಳ, ಆಕಾಶ ಅವರು ಗುರುವಾರ ಪ್ರಜಾವಾಣಿಗೆ ತಿಳಿಸಿದರು.
ಗ್ರಾಮದ ದ್ಯಾವಣ್ಣಾ ನಾಟಿಕಾರ ಮತ್ತು ಮಹೆಬೂಬ್ ಸಾಬ್ ಅವದಾನ ಅವರು ತೋಟದಲ್ಲಿನ ನೀರನ್ನು ಉಚಿತವಾಗಿ ನೀಡುತ್ತಿದ್ದು ಗ್ರಾಮಸ್ಥರಿಗೆ ಅನುಕೂಲವಾಗಿದೆ.
ಸಮೀಪದ ಬೆಳಗುಂಪಾ, ಭಾಗೋಡಿ, ದಂಡೋತಿ ಹಾಗೂ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿಯಲ್ಲಿರುವ ತೆಂಗಳಿ ಕ್ರಾಸ್ ಸಮೀಪದ ಹಬಿಪುರ ದರ್ಗಾದ ಹತ್ತಿರವಿರುವ ಕೊಳವೆ ಬಾವಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿಯಿದೆ. ಬೈಕ್, ಎತ್ತಿನ ಗಾಡಿ ಇದ್ದವರು ತರುತ್ತಾರೆ ನಾವೇನು ಮಾಡಬೇಕು ಎಂದು ಮಾಶಾಬಿ, ಹನೀಫಾ, ಲಾಲಾಹ್ಮದ್ ಅವರು ಪ್ರಶ್ನಿಸುತ್ತಿದ್ದಾರೆ.
ಕಳೆದ 2021–22ನೇ ಸಾಲಿನಲ್ಲಿ ಎಸ್.ಡಿ.ಪಿ ಯೋಜನೆಯಡಿ ₹25 ಲಕ್ಷ ಅನುದಾನದಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣ ಮಾಡಿ ಆರೇಳು ತಿಂಗಳಾಯಿತು. ಉಪಯೋಗಕ್ಕೆ ಬಾರದ್ದಾಗಿದೆ. ಬೆಳಗುಂಪಾ ರಸ್ತೆ ಮಾರ್ಗದ ಹಳ್ಳದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಉತ್ತಮ ನೀರು ಲಭ್ಯವಾಗಿದೆ. ಕೊಳವೆ ಬಾವಿಯಿಂದ ಜಲಸಂಗ್ರಹಗಾರಕ್ಕೆ ಪೈಪುಗಳ ಜೋಡಣೆ ಕಾಮಗಾರಿ ಮಾಡಿಸದೆ ಕಡೆಗಣಿಸಿದ್ದರಿಂದ ನೀರಿನ ಸಮಸ್ಯೆ ಪರಿಹಾರ ಕಾಣದೆ ಗಂಭೀರ ಸಮಸ್ಯೆಯಾಗಿದೆ.
ಗ್ರಾಮಸ್ಥರು ಕೊಡ ನೀರಿಗಾಗಿ ಬಿಸಿಲಿನಲ್ಲಿ ತೀವ್ರ ಪರದಾಡುತ್ತಿದ್ದಾರೆ. ನಿಮ್ಮೂರಲ್ಲಿ ಕೇಳುವವರು, ಹೇಳುವವರು ಯಾರೂ ಇಲ್ಲವೆ ಎಂದು ಊರಿಗೆ ಬಂದ ಬೀಗರು, ನೆಂಟರು ನಮ್ಮನ್ನೆ ಬೈಯ್ಯುತ್ತಿದ್ದಾರೆ ಎಂದು ಗ್ರಾಮದ ಹಿರಿಯರಾದ ಮರೆಪ್ಪ, ಶಿವರಾಯ, ನಾಗಪ್ಪ, ಅಜ್ಮೀರ್, ಆಕಾಶ ಅವರು ಆಕ್ರೋಶ ವ್ಯಕ್ತ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯೆಗಾಗಿ ಗ್ರಾಮಪಂಚಾಯಿತಿ ಪಿಡಿಒ ಅವರನ್ನು ಸಂಪರ್ಕಿಸಲು ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಎಂದು ಹೇಳುತ್ತಿತ್ತು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿ. ಯಾವುದೇ ಸಮಸ್ಯೆಯಿರಲಿ ನೆಪ ಹೇಳುವಂತ್ತಿಲ್ಲ. ತಕ್ಷಣ ಸಮಸ್ಯೆ ಪರಿಹರಿಸಿ ಗ್ರಾಮಸ್ಥರಿಗೆ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆನಾಗಯ್ಯ ಹಿರೇಮಠ ತಹಶೀಲ್ದಾರ್
ಹೊಸದಾಗಿ ನಿರ್ಮಾಣ ಮಾಡಿರುವ ಮೇಲ್ಮಟ್ಟದ ಜಲಸಂಗ್ರಹಗಾರಕ್ಕೆ ಹಳ್ಳದಲ್ಲಿ ಹೊಸದಾಗಿ ಕೊರೆಸಿದ ಕೊಳವೆ ಬಾವಿಯಿಂದ ನೀರು ಪೂರೈಸಲು ಪೈಪ್ ಅಳವಡಿಸುವ ಕೆಲಸ ಎರಡು ದಿನದಲ್ಲಿ ಕೈಗೊಂಡು ನೀರಿನ ಸಮಸ್ಯೆ ಪರಿಹಾರ ಮಾಡಲಾಗುವುದುರಾಜಕುಮಾರ ಅಕ್ಕಿ ಎಇಇ ಗ್ರಾಮೀಣ ನೀರು ಸರಬರಾಜು ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.