
ಕಲಬುರಗಿ: ಅಲ್ಲಿ ನೂರಾರು ಮಂದಿ ಸೇರಿದ್ದರು. ಅವರೆಲ್ಲರ ಮೊಗದಲ್ಲಿ ಮಂದಸ್ಮಿತ ನಗು; ಮನದಲ್ಲಿ ಮೌನ ಪ್ರಾರ್ಥನೆ. ಹೊಸಬಟ್ಟೆ ತೊಟ್ಟಿದ್ದ ಮಕ್ಕಳಲ್ಲಿ ಇತ್ತಿಂದತ್ತ–ಅತ್ತಿಂದಿತ್ತ ಓಡಾಟದ ಸಡಗರ. ಎಲ್ಲರೂ ಸೇರಿ ಶ್ರದ್ಧೆಯಿಂದ ‘ಪರಲೋಕ ಪ್ರಭು’ವನ್ನು ಪ್ರಾರ್ಥಿಸಿದರು. ‘ಮೇರಿ ಕ್ರಿಸ್‌ಮಸ್’, ‘ಹ್ಯಾಪಿ ಕ್ರಿಸ್‌ಮಸ್’ ಎನ್ನುವ ಶುಭಾಶಯಗಳ ವಿನಿಮಯ ಮಾಡಿಕೊಂಡರು...
ನಗರದ ಎಸ್.ಬಿ. ಟೆಂಪಲ್ ರಸ್ತೆಯ ಸೇಂಟ್ ಮೇರಿ ಚರ್ಚ್, ಜೆಸ್ಕಾಂ ಕಚೇರಿ ಎದುರಿನ ಹಿಂದೂಸ್ಥಾನ್ ಕವನೆಂಟ್ ಚರ್ಚ್, ವಿಜಯ ವಿದ್ಯಾಲಯ ಬಳಿಯ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಗುರುವಾರ ಕ್ರಿಸ್‌ಮಸ್ ಅಂಗವಾಗಿ ಕಂಡನೋಟವಿದು...
ಜಿಲ್ಲೆಯಾದ್ಯಂತ ‘ಕರುಣಾಮಯಿ’ ಯೇಸು ಕ್ರಿಸ್ತ್‌ನ ಜನ್ಮದಿನವನ್ನು ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ಚರ್ಚ್‌ಗಳಲ್ಲಿ ಆರಾಧನಾ ಸಡಗರ, ಚರ್ಚ್‌ಗಳ ಸುತ್ತಲೂ ಜಾತ್ರೆಯ ವೈಭವ ಕಂಡುಬಂತು. ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಫಾದರ್‌ಗಳು ವಿಶ್ವಶಾಂತಿ, ಸೌಹಾರ್ದ, ಭ್ರಾತೃತ್ವ ಹಾಗೂ ಸಕಲ ಮನುಕುಲದ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಕ್ರಿಸ್‌ಮಸ್ ಟ್ರೀ, ಕ್ರಿಯಾತ್ಮಕ ಗೋದಲಿ, ತರಹೇವಾರಿ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದ ಚರ್ಚ್‌ಗಳ ಆವರಣಗಳು ಗುರುವಾರ ಭಕ್ತರಿಂದ ತುಂಬಿ ಹೋಗಿದ್ದವು. ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ ಕ್ರೈಸ್ತ ಬಾಂಧವರು, ಕುಟುಂಬ ಸಮೇತರಾಗಿ ಚರ್ಚ್‌ಗಳಿಗೆ ಬೆಳಿಗ್ಗೆಯೇ ಲಗ್ಗೆಯಿಟ್ಟರು. ‘ಪರಲೋಕ ಪ್ರಭು’ ಯೇಸುವನ್ನು ಮನದಾಳದಿಂದ ಪ್ರಾರ್ಥಿಸಿದರು.
ಕ್ರೈಸ್ತ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಸಭಾಪಾಲಕ ಫಾದರ್ ಎಸ್.ಮನೋಶಾಂತ ಅವರು ಕ್ರಿಸ್‌ಮಸ್ ಹಬ್ಬದ ಮುಖ್ಯ ಪ್ರಾರ್ಥನೆ ನಡೆಸಿಕೊಟ್ಟರು. ಅವರಿಗೆ ಸಹ ಸಭಾಪಾಲಕರಾದ ಏಬ್ನೇಜರ್ ಪ್ರಸನ್ನಕುಮಾರ್ ಹಾಗೂ ವಿನ್ಸೆಂಟ್ ವಿನಯಕುಮಾರ್ ಸಾಥ್ ನೀಡಿದರು. ಸಾವಿರಾರು ಮಂದಿ ಕ್ರೈಸ್ತ ಬಾಂಧವರು ಪಾಲ್ಗೊಂಡು ಯೇಸುವಿನ ಆರಾಧನೆ ಮಾಡಿದರು.
ಎಸ್.ಬಿ. ಟೆಂಪಲ್ ರಸ್ತೆಯ ದೈವಾನುಗ್ರಹ ಮಾತೆಯ ಪ್ರಧಾನಾಲಯದಲ್ಲೂ ಗುರುವಾರ ದಿನವಿಡೀ ಕ್ರಿಸ್‌ಮಸ್ ಸಡಗರ ಮನೆ ಮಾಡಿತ್ತು. ಬುಧವಾರ ತಡರಾತ್ರಿಯೇ ಕಲಬುರಗಿ ಧರ್ಮಪೀಠದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡಾ ಹಬ್ಬದ ಪ್ರಧಾನ ಪ್ರಾರ್ಥನೆ ಮಾಡಿ, ಪ್ರವಚನ ನೀಡಿದರು. ಕ್ರೈಸ ಬಾಂಧವರು ಬೆಳಿಗ್ಗೆಯಿಂದ ಸಂಜೆ ತನಕ ಚರ್ಚ್‌ಗೆ ಭೇಟಿ ಕೊಟ್ಟು ಯೇಸುವಿನ ಆಶೀರ್ವಾದ ಪಡೆದರು.
ಜಿಲ್ಲಾ ಕೋರ್ಟ್ ರಸ್ತೆಯ ಹಿಂದೂಸ್ಥಾನ್ ಕವನೆಂಟ್ ಚರ್ಚ್‌ನಲ್ಲಿ ರೆವರೆಂಡ್ ಸಾಮ್ಯುವೆಲ್ ಭಾಲೇಕರ್ ಕ್ರಿಸ್‌ಮಸ್ ಪ್ರಾರ್ಥನೆ ನಡೆಸಿಕೊಟ್ಟರು. ಇಲ್ಲಿಯೂ ನೂರಾರು ಭಕ್ತರು ಪಾಲ್ಗೊಂಡು ಯೇಸುವನ್ನು ಆರಾಧಿಸಿದರು.
ಆರಾಧನೆ ಸಂಭ್ರಮ; ಆತಿಥ್ಯದ ಸಡಗರ’
‘ನಮ್ಮ ಪಾಲಿಗೆ ಕ್ರಿಸ್‌ಮಸ್ ಎಂಬುದು ಹೊಸಬಟ್ಟೆ ಯೇಸುವಿನ ಆರಾಧನೆಯ ಸಂಭ್ರಮ ಒಂದೆಡೆಯಾದರೆ ನೆಂಟರು ಸ್ನೇಹಿತರನ್ನು ಧರ್ಮಾತೀತವಾಗಿ ಮನೆಗೆ ಆಹ್ವಾನಿಸಿ ಆತಿಥ್ಯದ ಸಡಗರ ಮತ್ತೊಂದೆಡೆ. ಈ ಹಬ್ಬಕ್ಕಾಗಿ ನಾವು ಮೊದಲೇ ನಾಲ್ಕೈದು ಬಗೆಯ ಸಿಹಿತಿನಿಸುಗಳು ಬಗೆ–ಬಗೆಯ ಕುರುಕಲು ತಿಂಡಿಗಳು ಜೊತೆಗೆ ಕೇಕ್ ಸಿದ್ಧಪಡಿಸಿ ಇಟ್ಟುಕೊಳ್ಳುತ್ತೇವೆ. ಹಬ್ಬದ ದಿನ ಹೋಳಿಗೆ ಬಿರಿಯಾನಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸುತ್ತೇವೆ. ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. ಬಳಿಕ ನೆರೆ ಹೊರೆಯವರಿಗೆ ಸಿಹಿತಿನಿಸು ಮಕ್ಕಳಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ’ ಎನ್ನುತ್ತಾರೆ ಕುವೆಂಪು ನಗರದ ನಿವಾಸಿ ಸುಷ್ಮಾ ಅಬ್ರಹಾಂ ‘ದಸರಾ–ದೀಪಾವಳಿಯಲ್ಲಿ ಹಿಂದೂಗಳು ರಂಜಾನ್ ಬಕ್ರೀದ್‌ಗಳಲ್ಲಿ ಮುಸ್ಲಿಮರು ನಮ್ಮನ್ನು ಆಹ್ವಾನಿಸಿ ಆತಿಥ್ಯಕೊಟ್ಟಿರುತ್ತಾರೆ. ನಾವೂ ಕ್ರಿಸ್‌ಮಸ್‌ಗೆ ಮನೆಗೆ ಆಹ್ವಾನಿಸಿ ಅವರಿಗೆ ಆತಿಥ್ಯ ಮಾಡುತ್ತೇವೆ. ನಮ್ಮ ಕ್ರಿಸ್‌ಮಸ್ ಸಂಭ್ರಮ ಹೊಸ ವರ್ಷದ ತನಕವೂ ಒಂದಿಲ್ಲ ಒಂದು ಬಗೆಯಲ್ಲಿ ಮುಂದುವರಿದಿರುತ್ತದೆ’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.