ADVERTISEMENT

ಘತ್ತರಗಿ: ನಿವೇಶನ ಕೊರತೆ; ಬಳಕೆಯಾಗದ ಅನುದಾನ

ಗ್ರಾಮ ಪಂಚಾಯಿತಿಗಿಲ್ಲ ಸ್ವಂತ ಕಟ್ಟಡ; ನೀರಿನ ಯೋಜನೆ ಅಪೂರ್ಣ

ಶಿವಾನಂದ ಹಸರಗುಂಡಗಿ
Published 23 ಜನವರಿ 2020, 14:50 IST
Last Updated 23 ಜನವರಿ 2020, 14:50 IST
ಅಫಜಲಪುರ ತಾಲ್ಲೂಕಿನ ಘತ್ತರಿಗಿಯ ಅಂಬೇಡ್ಕರ್ ನಗರದಲ್ಲಿ ಹಾಳಾಗಿರುವ ರಸ್ತೆ
ಅಫಜಲಪುರ ತಾಲ್ಲೂಕಿನ ಘತ್ತರಿಗಿಯ ಅಂಬೇಡ್ಕರ್ ನಗರದಲ್ಲಿ ಹಾಳಾಗಿರುವ ರಸ್ತೆ   

ಅಫಜಲಪುರ: ತಾಲ್ಲೂಕಿನ ಘತ್ತರಗಿ ಗ್ರಾಮವು ಭಾಗ್ಯವಂತಿ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದೆ. ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಅದನ್ನು ಬಳಸಿಕೊಳ್ಳಲು ನಿವೇಶನ ಕೊರತೆ ಇರುವುದರಿಂದ ಅನುದಾನ ಸರ್ಕಾರಕ್ಕೆ ವಾಪಸ್ಸಾಗುತ್ತಿದೆ.

ಭೀಮಾನದಿಯ ದಡದಲ್ಲಿರುವ ಈ ಗ್ರಾಮದ ಜನಸಂಖ್ಯೆ ಸುಮಾರು 6000 ಇದೆ. ಘತ್ತರಗಿಯು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಘತ್ತರಗಿ, ಹಾವಳಗಾ, ಕೊಳ್ಳೂರು ಗ್ರಾಮಗಳು ಸೇರಿ ಒಟ್ಟು 16 ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಆದರೆ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡ ಇಲ್ಲದೆ ಸರ್ಕಾರದ ನಿರೀಕ್ಷಣಾ ಮಂದಿರದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ನಡೆಯುತ್ತಿದೆ

ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಕೋಣೆ ಕಟ್ಟಲಾಗಿದೆ. ದೇವಸ್ಥಾನ ಸಮಿತಿಯವರು ಜಾಗ ಖಾಲಿ ಮಾಡಲು ಶಿಕ್ಷಣ ಇಲಾಖೆಗೆ ತಿಳಿಸಿದ್ದು, ಹೆಚ್ಚಿನ ಕೋಣೆಗಳನ್ನು ಕಟ್ಟಲು ಅನುಮತಿ ನೀಡುತ್ತಿಲ್ಲ. ಹೀಗಾಗಿ ಅನುದಾನ ಸರ್ಕಾರಕ್ಕೆ ಮರಳಿ ಹೋಗುತ್ತಿದೆ. ಗ್ರಾಮ ಪಂಚಾಯಿತಿ ಕಟ್ಟಡ ಕಟ್ಟಡ ಕಟ್ಟಲು ಸರ್ಕಾರ ₹1 ಕೋಟಿ ನೀಡಲು ಸಿದ್ಧವಿದೆ, ನಿವೇಶನ ಕೊಡಿ ಎಂದು ಕೇಳುತ್ತಾರೆ ಎಂದು ಆ ಭಾಗದ ತಾಲ್ಲೂಕು ಪಂಚಾಯಿತಿ ಸದಸ್ಯ ವಿಠ್ಠಲ ನಾಟೀಕರ್ ಹೇಳುತ್ತಾರೆ.

ADVERTISEMENT

ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗ್ರಾಮವು ಬೆಳೆಯುತ್ತಿದೆ. ಅದರೆ ಅದಕ್ಕೆ ತಕ್ಕಂತೆ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಅಂಬೇಡ್ಕರ್ ನಗರ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಕೊಳ್ಳೂರು, ಕಲ್ಲೂರು, ದೇವಲ ಗಾಣಗಾಪುರಕ್ಕೆ ಸಂಚರಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಗ್ರಾಮಕ್ಕೆ ವರ್ತುಲ ರಸ್ತೆ ಅವಶ್ಯ ಇದೆ. ಅದನ್ನು ಸರ್ಕಾರ ಮಾಡಬೇಕಾಗಿದೆ.

ಘತ್ತರಗಿ, ಕೊಳ್ಳೂರು, ಹಿಂಚಗೇರಾ, ಬನಹಟ್ಟಿ, ಶಿವಪುರ, ಕಲ್ಲೂರ, ಗುಡ್ಡೋಡಗಿ ಗ್ರಾಮಗಳಿಗೆ ಐದು ವರ್ಷಗಳ ಹಿಂದೆ ರೂಪಿಸಿದ ಬಹು ಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಇನ್ನೂ ಅಪೂರ್ಣವಾದ್ದು, ಇದನ್ನು ಸರ್ಕಾರ ಶೀಘ್ರ ಪೂರ್ಣಗೊಳಿಸಬೇಕು ಎನ್ನುತ್ತಾರೆ ಗ್ರಾಮದ ಮುಖಂಡರಾದ ಭಗವಂತ ವಗ್ಗೆ, ಸಂಗಮನಾಥ ಸಂಗಮಕರ್ ಹಾಗೂ ಗಂಗಾಧರ್ ಕರಭಂಟನಾಳ.

ಶಾಸಕ ಎಂ.ವೈ ಪಾಟೀಲ್ ಅವರು ಗ್ರಾಮದ ಅಭಿವೃದ್ಧಿಗೆ ಲಕ್ಷ್ಯ ವಹಿಸಿದ್ದು ವಿವಿಧ ಕಾಮಗಾರಿಗಳಿಗೆ ಒಟ್ಟು ಸುಮಾರು ₹6 ಕೋಟಿ ಅನುದಾನ ಒದಗಿಸಿದ್ದಾರೆ.

ಭೀಮಾ ನದಿಯಿಂದ ಭಾಗ್ಯವಂತಿ ದೇವಸ್ಥಾನದವರೆಗಿನ 200 ಮೀಟರ್‌ ಕಚ್ಚಾ ರಸ್ತೆಯನ್ನು ಹರಕೆ ಹೊತ್ತ ಭಕ್ತರು ಶೀಘ್ರ ಸಿಮೆಂಟ್ ರಸ್ತೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಘತ್ತರಗಿ ಗ್ರಾಮದ ವ್ಯಾಪ್ತಿಯಲ್ಲಿ ರೇಣುಕಾ ಸಕ್ಕರೆ ಕಾರ್ಖಾನೆ ಇದೆ. ಇದರಿಂದ ಈ ಭಾಗದ 5-6 ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಗಾಳಿ ಮಲಿನವಾಗುತ್ತಿದೆ. ಸಕ್ಕರೆ ಕಾರ್ಖಾನೆ ಹೊರಬಿಡುವ ಮಲಿನ ನೀರು ನೇರವಾಗಿ ಭೀಮಾನದಿ ಸೇರುತ್ತದೆ. ಕಾರ್ಖಾನೆ ವಿರುದ್ಧ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಹೇಳುತ್ತಾರೆ. ಇನ್ನೊಂದು ಕಡೆ ಸಕ್ಕರೆ ಕಾರ್ಖಾನೆಯಿಂದ ಗ್ರಾಮ ಪಂಚಾಯಿತಿಗೆ 5 ವರ್ಷಗಳಲ್ಲಿ ಸುಮಾರು ₹20 ಲಕ್ಷ ತೆರಿಗೆ ಬಾಕಿ ಉಳಿದುಕೊಂಡಿದೆ ಎಂದು ಗ್ರಾಮ ಪಂಚಾಯಿತಿಯವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.