ADVERTISEMENT

ಕಲಬುರಗಿ | ಸಿಎಂ ಬಳಿ ನಿಯೋಗ ಕರೆದೊಯ್ಯಲು ಪ್ರಣವಾನಂದ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:39 IST
Last Updated 5 ಆಗಸ್ಟ್ 2025, 6:39 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಕಲಬುರಗಿ: ‘ಈಡಿಗ ಸಮಾಜದ 16 ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಬೇಕು’ ಎಂದು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಡಿಗ ಸಮಾಜ ಅತಿ ಹಿಂದುಳಿದಿದೆ. ಸಮಾಜದ ಬೇಡಿಕೆಗಳಿಗೆ ಆಗ್ರಹಿಸಿ ಪಾದಯಾತ್ರೆ ಹಾಗೂ ಧರಣಿ ಮಾಡಿದರೂ ಬೇಡಿಕೆಗಳು ಮಾತ್ರ ಈಡೇರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನ ಸರ್ಕಾರದಲ್ಲಿ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆಯಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದು ಎರಡು ವರ್ಷ ಕಳೆದರೂ ನಿಗಮಕ್ಕೆ ಅನುದಾನ ನೀಡಿಲ್ಲ. ಕುಲಶಾಸ್ತ್ರ ಅಧ್ಯಯನ ಮಾಡಲು ಬಿಜೆಪಿ ಸರ್ಕಾರದಲ್ಲಿ ನಿರ್ಧಾರ ಮಾಡಲಾಗಿತ್ತು. ಈಗ ಅಧ್ಯಯನಕ್ಕೆ ಸಮಿತಿ ನೇಮಕ ಮಾಡಿದ್ದು ಸ್ವಾಗತಾರ್ಹ’ ಎಂದು ಹೇಳಿದರು.

ADVERTISEMENT

‘ಕರದಾಳದಲ್ಲಿ ಶಕ್ತಿಪೀಠ ಸ್ಥಾಪನೆಯಾಗಿ ಮೂರು ವರ್ಷ ಕಳೆದರೂ ಅನುದಾನ ಬಿಡುಗಡೆ ಮಾಡಿಲ್ಲ. ಚಿತ್ತಾಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದೀರಿ, ಅದೂ ಕಾರ್ಯಗತವಾಗಿಲ್ಲ’ ಎಂದರು.

‘ಕಾಂಗ್ರೆಸ್‌ ಸರ್ಕಾರ ಈಡಿಗ ಸಮುದಾಯವನ್ನು ಕಡೆಗಣನೆ ಮಾಡುತ್ತಿದೆ. ಹೀಗೆ ಮುಂದುವರಿದರೆ ಸಮಾಜದ ಜನರೊಂದಿಗೆ ಚರ್ಚಿಸಿ ಶಕ್ತಿಪೀಠದಿಂದ ಬೆಂಗಳೂರವರೆಗೆ ಪಾದಯಾತ್ರ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಆಗಸ್ಟ್‌ 10ರಂದು ಮುಖಂಡರ ಸಭೆ:

‘ಸೆಪ್ಟೆಂಬರ್‌ 7ರಂದು ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ಆಗಸ್ಟ್‌ 10ರಂದು ಬೆಳಿಗ್ಗೆ 10ಗಂಟೆಗೆ ನಗರದ ಆಮಂತ್ರಣ ಹೋಟೆಲ್‌ನಲ್ಲಿ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲಿಯೂ ಸಮಾಜದ ಕುಂದುಕೊರತೆಗಳ ಕುರಿತು ಚರ್ಚೆ ನಡೆಯಲಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ಮಹೇಶ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುತ್ತೇದಾರ, ಮಹಾದೇವ ಗುತ್ತೇದಾರ, ಸಮಾಜದ ಮುಖಂಡ ವೆಂಕಟೇಶ ಇದ್ದರು.

‘ಹೊಸ ಪಕ್ಷ ಸ್ಥಾಪ‍ನೆಗೆ ಚಿಂತನೆ’:

‘ಶಿವಮೊಗ್ಗ ಕಾರವಾರ ದಕ್ಷಿಣ ಕನ್ನಡ ಮಂಗಳೂರು ಜಿಲ್ಲೆಗಳಲ್ಲಿ ಈಡಿಗ ಬಿಲ್ಲವ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಸಮಾಜದ ಮುಖಂಡರಿಗೆ ರಾಜಕೀಯವಾಗಿ ಅನ್ಯಾಯವಾಗುತ್ತಿದೆ. ಹೀಗೆ ಮುಂದುವರಿದರೆ ಸ್ವತಂತ್ರ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 3.80 ಲಕ್ಷ ಜನ ಈಡಿಗ ಸಮುದಾಯವಿದೆ. ಬಿಜೆಪಿಯಲ್ಲಿ ಯಾವುದೇ ಹುದ್ದೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಕರಾವಳಿ ಭಾಗದಲ್ಲಿ ಹಿಂದೂ–ಮುಸ್ಲಿಂ ಗಲಾಟೆಯಲ್ಲಿ ನಮ್ಮ ಸಮಾಜದ 22 ಯುವಕರು ಜೀವಕಳೆದುಕೊಂಡಿದ್ದಾರೆ’ ಎಂದರು. ‘ಕೆಲವರು ಹಿಂದುತ್ವ ಹಾಗೂ ಪ್ರಗತಿಪರ ಎಂದು ಹೇಳಿಕೊಂಡು ಹೋರಾಟ ಮಾಡಿದ್ದರಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ. ಸಮಾಜದ ಜನರನ್ನು ತಿದ್ದಲು ನಿರಂತರವಾಗಿ ಜಾಗೃತಿ ಮಾಡಲಾಗುತ್ತಿದೆ. ಏನೇ ಜಾಗೃತಿ ಮೂಡಿಸಿದರೂ ನಮ್ಮ ವಿರುದ್ಧವೇ ಎತ್ತಿಕಟ್ಟುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.