ADVERTISEMENT

ವಿದ್ಯಾರ್ಥಿಗಳಿಗೆ ಪೊದೆಯೇ ಶೌಚಾಲಯ!

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಸ್ತವ್ಯದ ಶಾಲೆಯ ಸ್ಥಿತಿ

ಮನೋಜ ಕುಮಾರ್ ಗುದ್ದಿ
Published 13 ಜೂನ್ 2019, 19:53 IST
Last Updated 13 ಜೂನ್ 2019, 19:53 IST
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಲಿರುವ ಕಲಬುರ್ಗಿ ಜಿಲ್ಲೆ ಹೇರೂರ (ಬಿ) ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯದ ದುಃಸ್ಥಿತಿ ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಲಿರುವ ಕಲಬುರ್ಗಿ ಜಿಲ್ಲೆ ಹೇರೂರ (ಬಿ) ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯದ ದುಃಸ್ಥಿತಿ ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜೂನ್‌22ರಂದು ವಾಸ್ತವ್ಯ ಹೂಡಲಿರುವ ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ–ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರಿಗೂ ಗಿಡ–ಗಂಟಿಗಳ ಮರೆಯೇ ಶೌಚಾಲಯದ ತಾಣ!

11 ಜನ ಶಿಕ್ಷಕಿಯರು, ಏಳು ಶಿಕ್ಷಕರು ಮತ್ತು515 ವಿದ್ಯಾರ್ಥಿಗಳಿರುವಈ ಶಾಲೆಗೆ ನೆಪಮಾತ್ರಕ್ಕೊಂದು ಶೌಚಾಲಯವಿದೆ. ಶೌಚ ಕ್ರಿಯೆ ಮಾಡಿದ ಬಳಿಕ ನೀರು ಹಾಕಲು ನೀರಿನ ಸಂಪರ್ಕವೇ ಇಲ್ಲ. ಬೆಳಿಗ್ಗೆಯೇ ಬಂದ ಶಿಕ್ಷಕರು ಸಂಜೆಯವರೆಗೂ ಈ ಶಾಲೆಯಲ್ಲಿ ಪಾಠ–ಪ್ರವಚನದಲ್ಲಿ ತೊಡಗಬೇಕು. ಮಧುಮೇಹದಿಂದ ಬಳಲುವ ಶಿಕ್ಷಕರ ಪರಿಸ್ಥಿತಿಯಂತೂ ಇನ್ನಷ್ಟು ಗಂಭೀರ. ಮುಖ್ಯಮಂತ್ರಿ ಈ ಶಾಲೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಅಂಗವಾಗಿ ನಾಲ್ಕಾರು ಶೌಚಾಲಯ ನಿರ್ಮಾಣವಾಗಲಿವೆ ಎಂಬ ಆಶಾವಾದದಲ್ಲಿದ್ದಾರೆ ಅವರೆಲ್ಲ.

ಎರಡು ಶೌಚಾಲಯ ನಿರ್ಮಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಮತ್ತೆರಡು ಕಮೋಡ್‌ ಇರುವ ತಾತ್ಕಾಲಿಕ ಶೌಚಾಲಗಳನ್ನು ಮುಖ್ಯಮಂತ್ರಿ ವಾಸ್ತವ್ಯ ಹೂಡುವ ಮೂರನೇ ತರಗತಿಯ ಕೊಠಡಿಯ ಪಕ್ಕದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

‘ಶಿಕ್ಷಕರ ಬಳಕೆಗೆ ಸಮರ್ಪಕ ಶೌಚಾಲಯಗಳಿಲ್ಲ. ಮುಖ್ಯಮಂತ್ರಿ ಬರುತ್ತಿರುವುದರಿಂದ ನಾಲ್ಕಾರು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿದರೆ ನಮಗೂ ಅನುಕೂಲವಾಗುತ್ತದೆ. ಈಗ ಇರುವ ಶೌಚಾಲಯದ ಬಾಗಿಲನ್ನು ಮೂರು ಬಾರಿ ದುರಸ್ತಿ ಮಾಡಿಸಿದ್ದೇವೆ. ಆದರೂ ಕಿಡಿಗೇಡಿಗಳು ಮುರಿದಿದ್ದಾರೆ. ಶಾಲೆ ಹೊರವಲಯದಲ್ಲಿ ಇರುವುದರಿಂದ ಭೀಮಾನದಿಯಿಂದ ಮರಳು ಒಯ್ಯಲು ಬರುವ ವಾಹನಗಳಚಾಲಕರು ಇಲ್ಲಿ ಬಂದು ಕುಡಿದು ದಾಂದಲೆ ಮಾಡುತ್ತಾರೆ. ಇವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಶಾಲೆಯ ಮುಖ್ಯಶಿಕ್ಷಕ ರಾಜಶೇಖರ ಎಂ. ಹತ್ತಿ.

‘ಈಗ ಇರುವ ಪಾಯಖಾನೆ ಬಹಳಹಳೆಯದು. ಅಲ್ಲೆಲ್ಲ ಕಲ್ಲು, ಕಸ ತುಂಬಿಕೊಂಡಿದೆ. ಹತ್ತಿರ ಹೋಗುವುದಕ್ಕೂ ಆಗುವುದಿಲ್ಲ. ಹೀಗಾಗಿ, ಪೊದೆಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಇದೆ. ಪಾಯಖಾನೆ ಸಮಸ್ಯೆಯಿಂದಾಗಿ ಇಡೀ ದಿನ
ನೀರು ಕುಡಿಯುವುದಿಲ್ಲ.ಶಾಲೆ ಯಾವಾಗ ಮುಗಿಯುವುದೋ ಎಂದು ಕಾಯುವಂತಾಗಿರುತ್ತದೆ’ ಎಂದು ಶಿಕ್ಷಕಿಯೊಬ್ಬರು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು.

ಕೈಕೊಡುವ ವಿದ್ಯುತ್‌: ‘515 ಮಕ್ಕಳಿಗೆ ನಿತ್ಯ ಬಿಸಿಯೂಟ ತಯಾರಿಸಬೇಕು. ಶಾಲೆ ಕೊಳವೆಬಾವಿ ಇದೆ. ಆದರೆ,ಪದೇಪದೇ ವಿದ್ಯುತ್‌ ಕೈಕೊಡುವುದರಿಂದ ಅಡುಗೆಗೆ ಬೇಕಾದ ನೀರನ್ನು ಕೊಳವೆಬಾವಿಯಿಂದ ಮೇಲೆತ್ತಲು ಆಗುತ್ತಿಲ್ಲ. ಬುಧವಾರ ಇಡೀ ದಿನ
ವಿದ್ಯುತ್‌ ಕೈಕೊಟ್ಟಿದ್ದರಿಂದಅಡುಗೆ ಮಾಡುವುದೇ ದುಸ್ತರವಾಯಿತು’ ಎಂದರು.

ಚಂಡರಕಿ ಶಾಲೆ ಸುಸಜ್ಜಿತ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೂನ್‌ 21ರಂದು ವಾಸ್ತವ್ಯ ಹೂಡಲಿರುವ ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಹೊಸ ಕಟ್ಟಡ ಹೊಂದಿದ್ದು, ಸುಸಜ್ಜಿತವಾಗಿದೆ. ಸಮರ್ಪಕ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.