ಅಫಜಲಪುರ: ನಿರೀಕ್ಷಿಸಿದಂತೆ ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರಿಂದ ಲಘು ವಾಣಿಜ್ಯ ಬೆಳೆಗಳಾದ ಉದ್ದು, ಹೆಸರು, ಅಲಸಂದಿ, ಎಳ್ಳು, ಶೇಂಗಾ, ಸೂರ್ಯಕಾಂತಿ ಬಿತ್ತನೆ ಮಾಡಿದ ರೈತರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಮಳೆ ಅಭಾವ ಸೇರಿ ಅನೇಕ ಕಾರಣಗಳಿಂದ ಲಘು ವಾಣಿಜ್ಯ ಬೆಳೆ ಬೆಳೆಯುವುದು ಕಡಿಮೆಯಾಗಿತ್ತು. ಪ್ರಸ್ತುತ ವರ್ಷ ಜೂನ್ ಮೊದಲ ವಾರದಲ್ಲೇ ಮಳೆಯಾಗಿದ್ದರಿಂದ ಮತ್ತು ಕೃಷಿ ಇಲಾಖೆ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಸಕಾಲಕ್ಕೆ ಪೂರೈಕೆ ಮಾಡಿದ್ದರಿಂದ ಅನುಕೂಲವಾಗಿದೆ.
‘ಈ ವರ್ಷ ಸಕಾಲಕ್ಕೆ ಮಳೆಯಾಗಿದ್ದರಿಂದ ನಮಗೆ ಅನುಕೂಲವಾಗಿದೆ. ಉದ್ದು, ಹೆಸರು ಬೆಳೆಯುವುದರಿಂದ ಈ ವರ್ಷದಲ್ಲೇ ಮಳೆ ಆಶ್ರಯದಲ್ಲಿ ಎರಡು ಬೆಳೆ ಬೆಳೆಯಬಹುದು. ಮೂರ್ನಾಲ್ಕು ತಿಂಗಳಲ್ಲಿ ನಮ್ಮ ಕೈಗೆ ಹಣ ಬರುತ್ತದೆ. ಇದರಿಂದ ತೊಗರಿ, ಹತ್ತಿ ಇತರ ಬೆಳೆಗಳ ನಿರ್ವಹಣೆಗೆ ಅನುಕೂಲವಾಗುತ್ತದೆ’ ಎಂದು ವಿಜಯಕುಮಾರ ಪಾಟೀಲ, ಲತೀಫ್ ಪಟೇಲ್ ಭೋಗನಹಳ್ಳಿ ಮತ್ತು ಅಶೋಕ ಹೂಗಾರ ತಿಳಿಸಿದರು.
‘ಮಾರುಕಟ್ಟೆಯಲ್ಲಿಯೂ ಲಘು ವಾಣಿಜ್ಯ ಬೆಳೆಗಳಿಗೆ ಒಳ್ಳೆಯ ಬೆಲೆ ಇದೆ. ಬೆಳೆದ ಮೇಲೆ ಬೆಲೆ ಇಳಿಸಬಾರದು. ಇದರಿಂದ ರೈತರಿಗೆ ತೊಂದರೆ ಆಗುತ್ತದೆ. ದುಬಾರಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದೇವೆ. ಒಳ್ಳೆಯ ಬೆಲೆ ಸಿಕ್ಕರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ, ‘ಈ ವರ್ಷ ಸಕಾಲದಲ್ಲಿ ಮುಂಗಾರು ಮಳೆಯಾಗಿದ್ದರಿಂದ ರೈತರು ಉದ್ದು, ಹೆಸರು ಬಿತ್ತನೆ ಮಾಡಿದ್ದಾರೆ. ಬೆಳೆಗಳು ಚೆನ್ನಾಗಿವೆ. ಸದ್ಯಕ್ಕೆ ಉದ್ದು, ಹೆಸರು ಹೂವಾಡುವ ಹಂತದಲ್ಲಿ ಇದ್ದು. ಅಲ್ಲಲ್ಲಿ ಬೆಳೆಗಳಿಗೆ ಕರಿ ಹೇನು, ಬಿಳಿ ಹೇನು ಕಂಡುಬರುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಕೀಟ ಮತ್ತು ಹೇನು ನಿವಾರಕ ಔಷಧ ನೀಡಲಾಗುತ್ತಿದ್ದು ಖರೀದಿ ಮಾಡಿ ಸಿಂಪಡಣೆ ಮಾಡಬೇಕು. ಕಾಯಿ ಕಟ್ಟುವಾಗ ಮತ್ತೊಮ್ಮೆ ಕೀಟನಾಶಕ ಸಿಂಪಡಣೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಅಫಜಲಪುರ, ಕರಜಿಗಿ, ಅತನೂರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ರೈತರು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉದ್ದು ಹೆಸರು ಬಿತ್ತನೆ ಮಾಡಿದ್ದಾರೆ. ಬೆಳೆಗಳು ಚೆನ್ನಾಗಿವೆ. ಕಟಾವು ಮಾಡುವಾಗ ಬೆಲೆ ಸ್ಥಿರವಾಗಿರಬೇಕು. ಅಂದರೆ ಅನುಕೂಲವಾಗುತ್ತದೆಅರ್ಜುನ ಸೋಮಜಾಳ ರೈತ ಮುಖಂಡ ಬಳ್ಳೂರಗಿ
ಹೆಸರು ಮತ್ತು ಉದ್ದಿನ ಬೆಳೆಗಳಿಗೆ ಕರಿ ಮತ್ತು ಬಿಳಿ ಹೇನುಗಳು ಕಂಡುಬರುತ್ತಿದ್ದು ಅದಕ್ಕಾಗಿ ಕೃಷಿ ಇಲಾಖೆಯವರು ರೈತರಿಗೆ ಸೂಕ್ತವಾದ ಮಾಹಿತಿ ನೀಡಬೇಕುಕಾಶಿನಾಥ ಜೇವೂರ ರೈತ ಮುಖಂಡ ಮಣ್ಣೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.