ADVERTISEMENT

ಆಳಂದ ಪಿಎಸ್‌ಐ ವಿರುದ್ಧ ಐಜಿಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 14 ಮೇ 2021, 8:23 IST
Last Updated 14 ಮೇ 2021, 8:23 IST

ಕಲಬುರ್ಗಿ: ಆಳಂದ ಪೊಲೀಸ್ ಠಾಣೆ ಪಿಎಸ್‌ಐ ಅಕ್ರಮ ಮರಳು ದಂದೆ ನಡೆಸುತ್ತಿದ್ದು, ಅವರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಈಶಾನ್ಯ ವಲಯದ ಐಜಿಪಿಗೆ ಮನೀಷ್ ಖರ್ಬಿಕರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.

‘ಮೊನ್ನೆ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರು ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ಧ್ವನಿ ಎತ್ತಿ ಇದರಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆಪಾದಿಸಿರುವುದು ನೂರಕ್ಕೆ ನೂರು ಸತ್ಯ. ಈ ದಂದೆ ನಿನ್ನೆ ಮೊನ್ನೆಯದಲ್ಲ. ಕೆಲವು ಹಿತಾಸಕ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲು ಮಾಡಿಕೊಂಡು ದಂದೆ ನಡೆಸುತ್ತಿವೆ. ಇಡೀ ಜನತೆ ಕೊರೊನಾ ಸಂಕಷ್ಟದಲ್ಲಿ ತಲ್ಲಣಿಸಿ ಹೋಗಿರುವಾಗ ಅಧಿಕಾರಿಗಳು ಲೂಟಿ ಮಾಡುತ್ತಿರುವುದು ಸತ್ಯ. ಭೀಮಾ ನದಿಯಿಂದ ಮರಳು ಅಫಜಲಪುರ ತಾಲ್ಲೂಕಿನ ಅರ್ಜುಣಗಿ ಮುಖಾಂತರ ಹಾಯ್ದು ಆಳಂದ ತಾಲ್ಲೂಕಿನ ಹಡಲಗಿ ಮಾರ್ಗವಾಗಿ ಆಳಂದ ತಾಲ್ಲೂಕಿಗೆ ಬಂದು ಮುಖ್ಯ ರಸ್ತೆ ಬಿಟ್ಟು ನಡುವಿನ ದಾರಿಯಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದೆ’ ಎಂದಿದ್ದಾರೆ.

‘ಇದರಲ್ಲಿ ಆಳಂದ ಪಿ.ಎಸ್.ಐ. ಬೇರೆಯವರ ಹೆಸರಿನಲ್ಲಿ 3 ಟಿಪ್ಪರ್ ಖರೀದಿಸಿ ಕಳ್ಳ ದಂದೆ ಮಾಡುತ್ತಿರುವುದು ಕಂಡು ಬಂದಿದೆ. ಅದರಲ್ಲಿ ತಮ್ಮದೇ ಮರಳು ಖರೀದಿಸಬೇಕೆಂದು ಒತ್ತಾಯಿಸಿ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳೇ ದಂದೆ ಮಾಡುತ್ತಿರುವದು ತಿಳಿದು ಬರುತ್ತದೆ. ಆದ್ದರಿಂದ ಆಳಂದ ಉಪ ವಿಭಾಗದ ಡಿವೈಎಸ್ಪಿ ಹೊರತುಪಡಿಸಿ ಬೇರೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಆಳಂದ ಪಿಎಸ್ಐ ವಿರುದ್ಧ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.