ADVERTISEMENT

ಕಲಬುರ್ಗಿ: ಗೌರಿ, ಗಣೇಶ ಹಬ್ಬಕ್ಕೆ ಕೊರೊನಾ ಕಂಟಕ

ಆರ್ಥಿಕ ಸಂಕಷ್ಟದಲ್ಲಿ ಕಲಾವಿದರು, ಹಳೆಯ ಮೂರ್ತಿಗಳನ್ನೇ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು

ಹನಮಂತ ಕೊಪ್ಪದ
Published 20 ಆಗಸ್ಟ್ 2020, 10:57 IST
Last Updated 20 ಆಗಸ್ಟ್ 2020, 10:57 IST
ಕಲಬುರ್ಗಿಯ ಹೀರಾಪುರ ಕ್ರಾಸ್ ಹತ್ತಿರದ ಮಳಿಗೆಯೊಂದರಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದೆ
ಕಲಬುರ್ಗಿಯ ಹೀರಾಪುರ ಕ್ರಾಸ್ ಹತ್ತಿರದ ಮಳಿಗೆಯೊಂದರಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದೆ   

ಕಲಬುರ್ಗಿ: ಪ್ರತಿ ಸಲ ಗಣೇಶ ಚತುರ್ಥಿ ಸಮೀಪಿಸಿದರೆ, ನಗರದ ವಿವಿಧ ಬೀದಿಗಳಲ್ಲಿ ಆಳೆತ್ತರದ ವಿಘ್ನ ನಿವಾರಕನ ಮೂರ್ತಿಗಳು ರಾರಾಜಿಸುತ್ತಿದ್ದವು. ಗಲ್ಲಿ ಗಲ್ಲಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಗಣಪನ ಮೂರ್ತಿಗಳ ವಹಿವಾಟಿನ ಅಬ್ಬರ ಕಂಡು ಬರುತ್ತಿತ್ತು. ಆದರೆ, ಈ ವರ್ಷ ಕೊರೊನಾದಿಂದ ಆ ಸಂಭ್ರಮ ಮಸುಕಾಗಿದೆ.

ಪ್ರತಿ ವರ್ಷ ನಗರಕ್ಕೆ ಪರಿಸರ ಸ್ನೇಹಿ ಗೌರಿ–ಗಣೇಶನ ಸಾವಿರಾರು ಮೂರ್ತಿಗಳು ಮಾರಾಟಕ್ಕೆ ಬರುತ್ತಿದ್ದವು. ಬಗೆಬಗೆಯ ವೇಷ ತೊಟ್ಟ ವಿಘ್ನೇಶನಿಗೆ ಮುಂಗಡ ಹಣ ನೀಡಿ ಕಾಯುತ್ತಿದ್ದರು. ಸಂಭ್ರಮ– ಸಡಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರು. ಆದರೆ, ಇಂತಹ ಹಬ್ಬದ ಉತ್ಸಾಹ ಮತ್ತು ಧಾವಂತ ಈಗ ಎಲ್ಲೂ ಕಾಣುತ್ತಿಲ್ಲ.

ನಗರದ ಹೀರಾಪುರ ಕ್ರಾಸ್ ಹತ್ತಿರದಲ್ಲಿ ಹಾಕಿರುವ ಡೇರೆಯನ್ನು ಪ್ರವೇಶಿಸಿದರೆ ಅಲ್ಲಿ ಗಣನಾಯಕ ಸಮೂಹವೇ ಕಂಡು ಬಂತು. 1 ರಿಂದ 4 ಅಡಿಯವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ಗಣೇಶನ ಮೂರ್ತಿ
ಗಳು ಅಲ್ಲಿವೆ.

ADVERTISEMENT

ಕಲಾವಿದರ ಕೈಚಳಕದಲ್ಲಿ ಮೂಡಿಬಂದಿರುವ ವರ್ಣರಂಜಿತ ವಿವಿಧ ಆಕಾರ ಮತ್ತು ಶೈಲಿಯಲ್ಲಿ ನಿಂತಿರುವ ಮೂರ್ತಿಗಳು ಗ್ರಾಹಕರ ಕಣ್ಮನ ಸೆಳೆಯುತ್ತಿವೆ. ₹150ರಿಂದ ಹಿಡಿದು ₹3 ಸಾವಿರದವರೆಗಿನ ಬೆಲೆಯ ಮೂರ್ತಿಗಳು ಅಲ್ಲಿವೆ. ವಿಶೇಷವೆಂದರೆ, ದೂರದ ರಾಜಸ್ತಾನದ ಮೋಹನ್‌ಲಾಲ್ ಕುಟುಂಬದ ಸದಸ್ಯರು ಮೂರ್ತಿ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

‘ನಮ್ಮ ಕುಟುಂಬದ ವರ್ಷದ ಬದುಕು ಮೂರ್ತಿ ಮಾರಾಟದಿಂದ ಬರುವ ಆದಾಯವನ್ನೇ ಅವಲಂಬಿಸಿತ್ತು. ಇಲ್ಲಿ 3 ಕುಟುಂಬದ 42 ಸದಸ್ಯರು ಮತ್ತು 20 ಕಾರ್ಮಿಕರು ಇದ್ದಾರೆ. ಮೂರ್ತಿ ತಯಾರಿಕೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ, ಈ ಬಾರಿ ವಹಿವಾಟು ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20ರಷ್ಟು ಮಾತ್ರ ವ್ಯಾಪಾರ ನಡೆಯುತ್ತಿದೆ’ ಎಂದು ಮೋಹನ್‌ಲಾಲ್ ತಿಳಿಸಿದರು.

‘ಹಬ್ಬಕ್ಕೆ ಎರಡೇ ದಿನ ಬಾಕಿ ಇದೆ. ಆದರೂ ಮೂರ್ತಿಗಳನ್ನು ಕೊಳ್ಳಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿಲ್ಲ. ಕಳೆದ ವರ್ಷ ಈ ವೇಳೆಗೆ ಮೂರ್ತಿಗಳು ಮಾರಾಟವಾಗಿ, ಹೊಸ ಬೇಡಿಕೆ ಬಂದಿತ್ತು. ಈ ವರ್ಷ ಮೂರ್ತಿ ತಯಾರಿಕೆಗೆ ಖರ್ಚು ಮಾಡಿದ ಹಣವೂ ಬಾರದಂತ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಲ್ಲಿಗೆ ಮೂರ್ತಿಗಳನ್ನು ಕೊಳ್ಳಲು ಬಂದಿದ್ದ ಶಹಾಬಾದ್ ವ್ಯಾಪಾರಿ ಕಿಶನ್ ನವಲೆ ಮಾತನಾಡಿ, ‘ಗಣಪತಿ ಹಬ್ಬದ ಆಚರಣೆ ಬಗ್ಗೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಬಿಡುಗಡೆ ಮಾಡಲಿಲ್ಲ. ಇದರಿಂದ ಮೂರ್ತಿ ತಯಾರಕರು ನಷ್ಟವಾಗಿದೆ. ಶಹಾಬಾದ್‌ನ ಗಾಂಧಿ ಚೌಕ್‌ನಲ್ಲಿರುವ ನನ್ನ ಮಳಿಗೆಯಲ್ಲಿ ಮಾರಾಟ ಮಾಡಲು 300 ಮೂರ್ತಿಗಳನ್ನು ಖರೀದಿಸಿದ್ದೇನೆ’ ಎಂದರು.

ಶರಣಬಸವೇಶ್ವರ ಕೆರೆ ರಸ್ತೆ ಬಳಿ ಸಿದ್ಧಾರ್ಥ ಆಯುರ್ವೇದಿಕ್ ಅಂಗಡಿಯ ಮಾಲೀಕ ಸತೀಶ ಕುರಿಕೋಟಾ ಅವರು ಪ್ರತಿ ವರ್ಷ ಮಣ್ಣಿನಿಂದ ತಯಾರಿಸಿದ ಸಾವಿರಾರು ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಮಾರುತ್ತಿದ್ದರು.‌ ಆದರೆ, ಕೊರೊನಾದಿಂದ ಈ ಬಾರಿ ಹೆಚ್ಚು ವಹಿವಾಟು ನಡೆಯಲಿಲ್ಲ.

ನಗರದ ಸೂಪರ್ ಮಾರ್ಕೆಟ್, ಬಾಂಡೆ ಬಜಾರ್,ಕಿರಾಣ್ ಬಜಾರ್, ಹಳೆ ಚೌಕ್ ಪೊಲೀಸ್ ಸ್ಟೇಷನ್ ಎದುರು, ಹುಮನಾಬಾದ್ ಬೆಸ್, ಅಪ್ಪ ದೇವಸ್ಥಾನ ಎದುರು ಸೇರಿದಂತೆ ನಗರದ ಹಲವೆಡೆ ಮೂರ್ತಿಗಳ ಮಾರಾಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.