ADVERTISEMENT

ಗ್ರಾಹಕರಲ್ಲಿ ಅರಿವಿನ ಕೊರತೆ: ಬ್ಯಾಂಕ್‌ ಸಿಬ್ಬಂದಿ ತಳಮಳ

ಸ್ಯಾನಿಟೈಸರ್‌, ನೀರಿನ ವ್ಯವಸ್ಥೆ ಮಾಡಿದರೂ ಕೈ ತೊಳೆಯದ ಜನ, ಗುಂಪು ಚೆದುರಿಸಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 14:58 IST
Last Updated 20 ಮಾರ್ಚ್ 2020, 14:58 IST
ಕಲಬುರ್ಗಿಯಲ್ಲಿ ಶುಕ್ರವಾರ ಎಟಿಎಂಗೆ ಬಂದ ಜನ ಮಾಸ್ಕ್‌ ಇಲ್ಲದೇ ಒಂದೇ ಕೋಣೆಯಲ್ಲಿ ನಿಂತರು
ಕಲಬುರ್ಗಿಯಲ್ಲಿ ಶುಕ್ರವಾರ ಎಟಿಎಂಗೆ ಬಂದ ಜನ ಮಾಸ್ಕ್‌ ಇಲ್ಲದೇ ಒಂದೇ ಕೋಣೆಯಲ್ಲಿ ನಿಂತರು   

ಕಲಬುರ್ಗಿ: ಕೊರೊನಾ ವೈರಾಣುವಿನಿಂದ ಈಗ ಜಿಲ್ಲೆಯ ಬ್ಯಾಂಕ್‌ ಉದ್ಯೋಗಿಗಳು, ಎಟಿಎಂಗಳ ಭರ್ದತಾ ಸಿಬ್ಬಂದಿ ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ಎಷ್ಟೆಲ್ಲ ಜಾಗೃತಿ ಮೂಡಿಸಿದ್ದಾಗಿಯೂ ಬ್ಯಾಂಕಿಗೆ ಬರುವ ಬಹು‍ಪಾಲು ಗ್ರಾಹಕರು ಮಾತ್ರ ಕನಿಷ್ಠ ನಿಯಮಗಳನ್ನೂ ಪಾಲಿಸುತ್ತಿಲ್ಲ.

ಇಲ್ಲಿನ ಕೆನರಾ ಬ್ಯಾಂಕ್‌, ಎಸ್‌ಬಿಐ, ಐಸಿಐಸಿಐ, ಕಾರ್ಪೊರೇಶನ್‌ ಬ್ಯಾಂಕ್‌, ಯುಕೊ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಸೇರಿದಂತೆ ಎಲ್ಲ ಖಾಸಗಿ ಬ್ಯಾಂಕ್ ಶಾಖೆಗಳಲ್ಲೂ ಕೊರೊನಾ ವೈರಾಣು ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆದಿದೆ. ಬ್ಯಾಂಕ್‌ ಬಾಗಿಲು ಮುಂದೆಯೇ ನೀರು ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದ್ದು, ಕೈ ತೊಳೆದುಕೊಂಡೇ ಒಳಗೆ ಬರಬೇಕು ಹಾಗೂ ವ್ಯವಹಾರ ಮುಗಿಯವವರೆಗೂ ಮಾಸ್ಕ್‌ ಧರಿಸಬೇಕು ಎಂದು ಬೋರ್ಡ್‌ ಕೂಡ ಹಾಕಲಾಗಿದೆ.

ಕೋವಿಡ್‌ನಿಂದ ಇಡೀ ಜಗತ್ತು ತತ್ತರಿಸುತ್ತಿರುವ ಪರಸ್ಥಿತಿಯನ್ನು, ಅದರ ದುಷ್ಪರಿಣಾಮವನ್ನು, ಒಬ್ಬರಿಂದ ಒಬ್ಬರಿಗೆ ಹೇಗೆ ತಗಲುತ್ತದೆ ಎಂಬುದರ ಮನವರಿಕೆ ಮಾಡುವ ಸಾಲುಗಳನ್ನೂ ಬರೆಯಲಾಗಿದೆ. ಇದನ್ನು ತಿಳಿಸಲೆಂದೇ ಕೆಲವು ಬ್ಯಾಂಕ್‌ಗಳಲ್ಲಿ ಒಬ್ಬ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ADVERTISEMENT

ಆದರೂ, ಬಹಳಷ್ಟು ಗ್ರಾಹಕರು ಸ್ಯಾನಿಟೈಸರ್‌ನಿಂದ ಕೈ ತೊಳೆಯಲು ಒಪ್ಪುತ್ತಿಲ್ಲ. ಮಾಸ್ಕ್‌ ಧರಿಸದೇ ಇದ್ದವರು ದಸ್ತಿ, ವೇಲ್‌ನಿಂದ ಮುಖ ಕಟ್ಟಿಕೊಳ್ಳುವಂತೆ ಮನವರಿಕೆ ಮಾಡಿದರೂ ಕೇಳಲು ತಯಾರಿಲ್ಲ.

ಕ್ಯಾಷಿಯರ್‌, ಭದ್ರತಾ ಸಿಬ್ಬಂದಿಗೆ ತಲೆನೋವು: ಬಹುಪಾಲು ಬ್ಯಾಂಕ್‌ಗಳ ಭದ್ರತಾ ಸಿಬ್ಬಂದಿಗೆ ಈಗ ಕಳ್ಳರು– ದರೋಡೆಕೋರರಿಗಿಂದ ಕೊರೊನಾ ಕಾಯುವುದು ತಲೆನೋವಾಗಿದೆ. ಚೊಂಬು– ಸ್ಯಾನಿಟೈಸರ್‌ ಹಿಡಿದು ಬಾಗಿಲ ಬಳಿ ನಿಂತು ಬೀಗರನ್ನು ಬರಮಾಡಿಕೊಂಡಂತ ಸ್ಥಿತಿ ಅವರದು. ಅದರೂ ಕೆಲವರು ಕೈ ತೊಳೆಯಲು ಒಪ್ಪುವುದಿಲ್ಲ. ಹಾಗೆಯೇ ಒಳಗೆ ನುಗ್ಗುತ್ತಾರೆ. ಜನಸಂದಣಿ ಆಗದಂತೆ ನೋಡಿಕೊಳ್ಳಲು ಬೆರಳೆಣಿಕೆಯಷ್ಟೇ ಜನರನ್ನು ಸಾಲಾಗಿ ಬಿಡುವ ಕ್ರಮ ಅನುಸರಿಸಲಾಗುತ್ತಿದೆ. ಇದರಿಂದ ಸಿಟ್ಟಿಗೆ ಬಂದ ಹಲವರು ಭದ್ರತಾ ಸಿಬ್ಬಂದಿಯನ್ನೇ ತರಾಟೆ ತೆಗೆದುಕೊಂಡಿದ್ದೂ ಆಗಿದೆ.

ಕ್ಯಾಷಿಯರ್‌ ಬಳಿ ನಿರಂತರವಾಗಿ ಜನ ಸೇರುವುದರಿಂದ ಅವರಿಗೂ ಹೇಳತೀರದ ಪಜೀತಿ!

‘ಸೋಂಕು ಪೀಡಿತರು ಯಾರಾದರೂ ಬ್ಯಾಂಕಿನೊಳಗೆ ಬಂದು ಹೋಗಿದ್ದರೆ ಅದು ಸಿಬ್ಬಂದಿಗೆ ಮಾತ್ರವಲ್ಲ; ಎಲ್ಲ ಗ್ರಾಹಕರಿಗೂ ಸಮಸ್ಯೆಯಾಗುತ್ತದೆ. ಹಾಗಾಗಿ, ಒಳಗೆ ಬರುವಾಗ ಮಸ್ಕ್‌ ಧರಿಸಿ, ಕೈ ತೊಳೆಯಿರಿ. ಅಲ್ಲಿಂದ ಹೊರಹೋಗುವಾಗಲೂ‌ ಕೈ ತೊಳೆಯಿರಿ. ಇದರಿಂದ ನಾವು– ನೀವು ಇಬ್ಬರೂ ಕೊರೊನಾದಿಂದ ದೂರ ಇರಬಹುದು’ ಎಂದು ಭದ್ರತಾ ಸಿಬ್ಬಂದಿ ತಿಳಿಹೇಳುತ್ತಲೇ ಇದ್ದಾರೆ.

ಗ್ರಾಹಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಇಲ್ಲ:ಮಹಾಮಾರಿ ದಾಳಿ ತಡೆಗಟ್ಟಲು ಇಡೀ ನಗರವನ್ನು ಸ್ತಬ್ಧಗೊಳಿಸಿ ವಾರ ಕಳೆದಿದೆ. ಮಾರುಕಟ್ಟೆ, ರಸ್ತೆ, ಶಾಲೆ–ಕಾಲೇಜು, ಪ್ರವಾಸಿತಾಣ, ದೇವಸ್ಥಾನ ಎಲ್ಲವನ್ನೂ ಬಂದ್‌ ಮಾಡಲಾಗಿದೆ. ಆದರೆ, ಬ್ಯಾಂಕ್‌ ವ್ಯವಹಾರಗಳು ಎಂದಿನಂತೆ ನಡೆದೇ ಇವೆ. ಇಂದಲ್ಲ ನಾಳೆ ಬ್ಯಾಂಕ್‌ಗಳನ್ನೂ ಬಂದ್ ಮಾಡುತ್ತಾರೆ ಎಂಬ ಭೀತಿಯಿಂದಾಗಿ ಹಲವು ಗ್ರಾಹಕರು ತಮ್ಮ ಹಣ ಪಡೆಯಲು– ತುಂಬಲು ಲಗ್ಗೆ ಇಡುತ್ತಿದ್ದಾರೆ.

ಲಿಫ್ಟ್‌, ಎಟಿಎಂನಲ್ಲಿ ಎಚ್ಚರಿಕೆ ವಹಿಸಿ

ಎಲ್ಲ ಕಡೆಯೂ ಬಯೊಮೆಟ್ರಿಕ್‌ ಥಂಬ್‌ನ ಹಾಜರಾತಿಯನ್ನು ರದ್ದು ಮಾಡಲಾಗಿದೆ. ಅದೇ ರೀತಿ ಯಾವಾಗಲೂ ಬೆರಳು ಉಪಯೋಗಿಸುವ ಲಿಫ್ಟ್‌, ಎಟಿಎಂಗಳಲ್ಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ, ಲಿಫ್ಟ್ ಉಪಯೋಗಿಸುವುದನ್ನು ಕಡಿಮೆ ಮಾಡಿ, ಎಟಿಎಂಗಳಲ್ಲಿ ಸ್ಯಾನಿಟೈಸರ್‌ ಬಳಸಿ ಎಂದು ಪರಿಣತರು ಮಾರ್ಗದರ್ಶನ ನೀಡುತ್ತಲೇ ಇದ್ದಾರೆ.

ಇವೆರಡೂ ಹವಾನಿಯಂತ್ರಿತ ಆಗಿರುವುದರಿಂದ ವೈರಾಣು ಹೆಚ್ಚು ಚಟುವಟಿಕೆಯಿಂದ ಕೂಡಿರುವ ಸಾಧ್ಯತೆ ಇದೆ. ಹಾಗಾಗಿ, ಹಣ ಪಡೆದ ತಕ್ಷಣ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

ಬ್ಯಾಂಕ್‌ ಗ್ರಾಹಕರಿಗೆ ಪರಿಣತರ ಸಲಹೆಗಳು

* ತೀರ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಬ್ಯಾಂಕ್‌ಗೆ ಭೇಟಿ ಕೊಡಿ‌

* ಆದಷ್ಟು ಆನ್‌ಲೈನ್‌ ಟ್ರಾಂಜಾಕ್ಷನ್‌, ಆನ್‌ಲೈನ್‌ ಪೇಮೆಂಟ್‌ ರೂಢಿಸಿಕೊಳ್ಳಿ

* ಕ್ಯಾಶ್‌ಲೆಸ್‌ ವ್ಯವಹಾರದ ಮಹತ್ವ ಅರ್ಥ ಮಾಡಿಕೊಳ್ಳಿ, ಅನುಸರಿಸಿ

* ಭೀಮ್‌ ಆ್ಯಪ್‌, ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಮುಂತಾದ ಆ್ಯಪ್‌ ಬಳಸಿಕೊಳ್ಳಿ

* ಬ್ಯಾಂಕ್‌ ಒಳಪ್ರವೇಶಕ್ಕೂ ಮುನ್ನ ಕಡ್ಡಾಯ ಮಾಸ್ಕ್‌ ಧರಿಸಿ

* ಸ್ಯಾನಿಟೈಸರ್‌ ಇಲ್ಲವೇ ಸೋಪ್‌ನಿಂದ ಚೆನ್ನಾಗಿ ಕೈ ತೊಳೆಯಿರಿ‌

* ಒಬ್ಬರ ಕೈಯಿಂದ ಇನ್ನೊಬ್ಬರಿಗೆ ಹಣ ಎಣಿಸಿಕೊಡುವಾಗ ಅಂತರ ಕಾಯ್ದುಕೊಳ್ಳಿ

* ಪದೇಪದೇ ಎಟಿಎಂ– ಬ್ಯಾಂಕ್‌ಗೆ ಬರುವ ಬದಲು ದೊಡ್ಡ ಮೊತ್ತವನ್ನು ಒಂದೇ ಬಾರಿಗೆ ಎತ್ತಿಕೊಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.