ADVERTISEMENT

ವಿನಾಕಾರಣ ಬೀದಿಗೆ ಬಂದರೆ 24 ಗಂಟೆ ವಶಕ್ಕೆ

ವಾಹನಗಳ ಜಪ್ತಿ ನಂತರ ಇನ್ನೊಂದು ಪರಿಣಾಮಕಾರಿ ಅಸ್ತ್ರ ಬಳಕೆಗೆ ಮುಂದಾದ ಪೊಲೀಸರು

ಸಂತೋಷ ಈ.ಚಿನಗುಡಿ
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಮಂಗಳವಾರ ಪೊಲೀಸರು ಬೈಕ್‌ ಸವಾರ ಮಹಿಳೆಯನ್ನು ನಿಗದಿತ ಅಂತರದಿಂದಲೇ ವಿಚಾರಣೆ ನಡೆಸಿದರು
ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಮಂಗಳವಾರ ಪೊಲೀಸರು ಬೈಕ್‌ ಸವಾರ ಮಹಿಳೆಯನ್ನು ನಿಗದಿತ ಅಂತರದಿಂದಲೇ ವಿಚಾರಣೆ ನಡೆಸಿದರು   

ಕಲಬುರ್ಗಿ: ಕೊರೊನಾ ವೈರಾಣು ಹರಡುವುದನ್ನು ತಡೆಯಲು ನಗರ ಪೊಲೀಸರು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದು, ‘ವಿನಾಕಾರಣ’ ಓಡಾಡುವವರನ್ನು ಮುಂಜಾಗ್ರತಾ ಕ್ರಮವಾಗಿ ‘24 ತಾಸು ವಶ’ದಲ್ಲಿ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.‌

‘ಈ ನಿಯಮವನ್ನು ಮಂಗಳವಾರದಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಯಾವ ಕೆಲಸಕ್ಕೆ ಹೊರಗೆ ಬಂದಿದ್ದೇವೆ ಎಂಬುದರ ಬಗ್ಗೆ ಕನಿಷ್ಠ ದಾಖಲೆ ತೋರಿಸಲೇಬೇಕು. ಔಷಧಿ, ಹಾಲು, ಹಣ್ಣು, ತರಕಾರಿ ಮುಂತಾದ ದಿನಸಿ ಕೊಳ್ಳಲು ಹೋಗುವವರನ್ನು ನಾವು ಕೂಡ ‘ವಿನಾಕಾರಣ’ ವಶಕ್ಕೆ ಪಡೆಯುವುದಿಲ್ಲ. ಅವರ ಪೂರ್ಣ ಮಾಹಿತಿ ‍ಪಡೆದು, ವಿಚಾರಿಸುತ್ತೇವೆ. ಯಾವ ಪ್ರದೇಶದಿಂದ ಯಾವ ಪ್ರದೇಶಕ್ಕೆ ಹೋಗುತ್ತಿದ್ದಾರೆ? ಕಾರಣವೇನು? ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತೇವೆ. ಪೂರ್ವಾಪರ ವಿಚಾರಿಸಿಯೇ ಕ್ರಮಕ್ಕೆ ಮುಂದಾಗುತ್ತೇವೆ. ನೈಜ ಕಾರಣ ಇದ್ದವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲೂ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ.

ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಿದ ಮೇಲೂ ಹಲವರು ವಿನಾಕಾರಣ ಓಡಾಡಿದರು. ಪ್ರಧಾನಿ ಅವರು ಇಡೀ ದೇಶವನ್ನು ಬಂದ್‌ ಮಾಡಿದ ಮೇಲೂ ನಗರದ ಬಹುಪಾಲು ಜನ ಸ್ಪಂದಿಸಲಿಲ್ಲ. ಆಗ ಅನಿವಾರ್ಯವಾಗಿ ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕಾಯಿತು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಪೊಲೀಸರು ತೋರಿಸುವ ಸೌಜನ್ಯವನ್ನೇ ಕೆಲವರು ದುರುಪಯೋಗ ಮಾಡಿಕೊಳ್ಳಲು ಆರಂಭಿಸಿದರು. ಕಾರಣ, ಸರ್ಕಾರದ ನಿರ್ದೇಶನದಂತೆ ಎರಡು ದಿನಗಳಿಂದ ವಾಹನ್‌ ಸೀಜ್ ಮಾಡಲಾಗುತ್ತಿದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು ವಶಕ್ಕೆ ಪಡೆಯುವ ಕಾರ್ಯಾಚರಣೆ ಆರಂಭಿಸಿದ್ದೇವೆ. ನಗರದ ಜನ ಅನಗತ್ಯವಾಗಿ ಓಡಾಡುವುದನ್ನು ಬಿಟ್ಟು ಸಹಕರಿಸಬೇಕು ಎಂದೂ ಅವರು ಕೋರಿದ್ದಾರೆ.

ADVERTISEMENT

‘ವಶಕ್ಕೆ ಪಡೆದವರನ್ನು ಬಂಧಿಸುವುದಿಲ್ಲ, ಯಾವುದೇ ಕೇಸ್‌ ಹಾಕುವುದಿಲ್ಲ. 24 ತಾಸು ಒಂದು ಕಡೆ ಇಡಲಾಗುವುದು. ಅವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಎಲ್ಲವನ್ನೂ ದಾಖಲಿಸಿಕೊಳ್ಳುತ್ತೇವೆ. ನಂತರ ಬಿಟ್ಟು ಕಳುಹಿಸುತ್ತೇವೆ. ಅದೇ ರೀತಿಯ ಉದ್ದಟತನ ಮರುಕಳಿಸಿದರೆ ಪ್ರಕರಣ ದಾಖಲಿಸುತ್ತೇವೆ’ ಎಂದೂ ಕಿಶೋರಬಾಬು ತಿಳಿಸಿದರು.

ಬಾಕ್ಸ್‌–2

ಗಣನೀಯವಾಗಿ ಇಳಿದ ಅಪರಾಧ ಪ್ರಕರಣ

ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಶೇಕಡ 90ರಷ್ಟು ಕಡಿಮೆಯಾಗಿದೆ. ಜನರೆಲ್ಲ ಮನೆಯಲ್ಲೇ ಇರುವುದರಿಂದ ಕಳವು, ದರೋಡೆ, ವಾಹನ ಅಪಘಾತ ಪ್ರಕರಣಗಳು ಶೂನ್ಯವಾಗಿವೆ. ಒಂದು ಕೊಲೆ ಹಾಗೂ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಕೊರೊನಾ ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಜಿಲ್ಲೆಯ ಪೊಲೀಸರು, ಅಪರಾಧ ತಡೆಯುವ ನಿಟ್ಟಿನಲ್ಲೂ ಅಷ್ಟೇ ಜಾಗರೂಕತೆ ವಹಿಸಬೇಕಾದ ಸವಾಲು ಮುಂದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪೊಲೀಸರಿಗೆ ಮಾಸ್ಕ್‌, ಸ್ಯಾನಿಟೈಸರ್‌, ಮೆನೆ ಊಟ

ದೀರ್ಘ ಕಾಲದ ಬಂದ್‌ಅನ್ನು ಯಶಸ್ವಿಯಾಗಿ ನಿಭಾಯಿಸಲು ಸುಮಾರು 1,000 ಪೊಲೀಸರು, 100 ಗೃಹ ರಕ್ಷಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಪ್ರತಿ ದಿನ 2,000 ಮಾಸ್ಕ್‌ ವಿತರಿಸಲಾಗುತ್ತಿದೆ. ಕೈ ತೊಳೆದುಕೊಳ್ಳಲು ಎಲ್ಲ ಠಾಣೆಗಳಿಗೂ ಸ್ಯಾನಿಟೈಸರ್‌ ವಿತರಿಸಲಾಗುತ್ತಿದೆ. ಎಲ್ಲ ಠಾಣೆಗಳು, ಕಮಿಷನರೇಟ್‌ ಕಚೇರಿ, ಡಿಸಿಪಿ ಕಚೇರಿ, ವಾಹನಗಳಿಗೂ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

50 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸರಿ ಇಲ್ಲದ ಪೊಲೀಸ್‌ ಸಿಬ್ಬಂದಿಗೆ ವಿನಾಯಿತಿ ನೀಡಿದ್ದು, ಅವರನ್ನು ಹೆಚ್ಚಾಗಿ ಕಚೇರಿ ಕೆಲಸಗಳಿಗೇ ಬಳಸಿಕೊಳ್ಳಲಾಗಿದೆ. ಹೊರಗಡೆ ಕೆಲಸ ಮಾಡಲು ಎರಡು ಶಿಫ್ಟ್‌ ಮಾಡಿದ್ದಾರೆ. ಹಾಗಾಗಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಮನೆಗೇ ಹೋಗಿ ಮಾಡುತ್ತೇವೆ ಎಂದು ಭದ್ರತೆಗೆ ನಿಂತಿದ್ದ ಪೊಲೀಸರು ತಿಳಿಸಿದರು.

ಮಾರ್ಚ್‌ 31ಕ್ಕೆ ಹೋಂ ಗಾರ್ಡ್‌ ಸಿಬ್ಬಂದಿಯ ಸೇವೆ ನಿಗದಿ ಮಾಡಲಾಗಿತ್ತು. ಆದರೆ, ಏಪ್ರಿಲ್‌ 14ರವರೆಗೆ ಮತ್ತೆ ವಿಸ್ತರಿಸಲಾಗಿದೆ ಎಂದು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.