ADVERTISEMENT

ಆಮ್ಲಜನಕ ಕೊರತೆಗೆ ಶೀಘ್ರ ಪರಿಹಾರ

ಸೇವಾ ಭಾರತಿ, ಅನ್ನಪೂರ್ಣಾ ಶಿಕ್ಷಣ ಮತ್ತು ಚಾರಿಟಬಲ್‌ ಟ್ರಸ್ಟ್‌ನಿಂದ ಕೋವಿಡ್ ಕೇರ್‌ ಕೇಂದ್ರ

​ಪ್ರಜಾವಾಣಿ ವಾರ್ತೆ
Published 8 ಮೇ 2021, 5:23 IST
Last Updated 8 ಮೇ 2021, 5:23 IST
ಕಲಬುರ್ಗಿಯಲ್ಲಿ ಆರ್‌ಎಸ್‌ಎಸ್‌ ಸಂಚಾಲಿತ ಸೇವಾ ಭಾರತಿ ಹಾಗೂ ಅನ್ನಪೂರ್ಣ ಶಿಕ್ಷಣ ಸಂಸ್ಥೆ ಹಾಗೂ ಚಾರಿಟಬಲ್ ಟ್ರಸ್ಟ್ ವತಿಯಿಂದ ತೆರೆದ ಕೋವಿಡ್ ಕೇರ್ ಕೇಂದ್ರವನ್ನು ಸಚಿವ ಮುರುಗೇಶ ನಿರಾಣಿ ಶುಕ್ರವಾರ ಉದ್ಘಾಟಿಸಿದರು
ಕಲಬುರ್ಗಿಯಲ್ಲಿ ಆರ್‌ಎಸ್‌ಎಸ್‌ ಸಂಚಾಲಿತ ಸೇವಾ ಭಾರತಿ ಹಾಗೂ ಅನ್ನಪೂರ್ಣ ಶಿಕ್ಷಣ ಸಂಸ್ಥೆ ಹಾಗೂ ಚಾರಿಟಬಲ್ ಟ್ರಸ್ಟ್ ವತಿಯಿಂದ ತೆರೆದ ಕೋವಿಡ್ ಕೇರ್ ಕೇಂದ್ರವನ್ನು ಸಚಿವ ಮುರುಗೇಶ ನಿರಾಣಿ ಶುಕ್ರವಾರ ಉದ್ಘಾಟಿಸಿದರು   

ಕಲಬುರ್ಗಿ: ‘ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇನ್ನೂ ಏರುಗತಿಯಲ್ಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಮ್ಲಜನಕದ ಅವಶ್ಯಕತೆ ಬೀಳಲಿದೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ಹೆಚ್ಚುವರಿ ಸಿಲಿಂಡರ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಇಲ್ಲಿನ ಎಂಎಸ್‍ಕೆ ಮಿಲ್ ರಸ್ತೆಯಲ್ಲಿರುವ ಆರ್‍ಎಸ್‍ಎಸ್ ಸಂಚಾಲಿತ ಸೇವಾ ಭಾರತಿ ಮತ್ತು ಅನ್ನಪೂರ್ಣಾ ಶಿಕ್ಷಣ ಮತ್ತುಚಾರಿಟಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಆರಂಭಿಸಿದ 50 ಬೆಡ್‌ಗಳ ಕೋವಿಡ್ ಕೇರ್‌ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದಲ್ಲೇ ಒಂದು ಆಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಅದಕ್ಕೆ ಇನ್ನೂ ಸಮಯ ಹಿಡಿಯುವಕಾರಣ ತಾತ್ಕಾಲಿಕವಾಗಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದೆ. ಗುಜರಾತ್‌ ರಾಜ್ಯದಿಂದ ಕೂಡ ಹೆಚ್ಚುವರಿ ಸಿಲಿಂಡರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದರು.

ADVERTISEMENT

‘ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ರಾಜ್ಯಕ್ಕೆ 1 ಲಕ್ಷ ಕಾನ್ಸಂಟ್ರೇಟರ್‌ ಖರೀದಿ ಮಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಕೆಲವು ಬೆಂಗಳೂರಿಗೆ ತಲುಪಲಿದ್ದು, ಪ್ರಯೋಗಿಕ ಬಳಕೆಗೆ 10 ಕಾನ್ಸಂಟ್ರೇಟರ್‌ಗಳನ್ನು ಕಲಬುರ್ಗಿಗೂ ತರಿಸಲಾಗುತ್ತಿದೆ‘ ಎಂದು ಹೇಳಿದರು.

‘ಒಂದೇ ಶೌಚಾಲಯವನ್ನು ಸೋಂಕಿತರು ಹಾಗೂ ಅವರ ಕುಟುಂಬದವರು ಬಳಸುತ್ತಾರೆ. ಇದರಿಂದ ಸೋಂಕು ಇಡೀಕುಟುಂಬಕ್ಕೆ ಹರಡುವ ಸಾಧ್ಯತೆ ಇದೆ. ಸಾಧ್ಯವಿದ್ದವರು ಸೋಂಕಿತರು ಬಳಸಿದ ಶೌಚಾಲಯ ಬಿಟ್ಟು ಬೇರೆಬಳಸಬೇಕು. ಶೌಚಾಲಯ ಇಲ್ಲದವರಿಗಾಗಿ ಕೋವಿಡ್ ಕೇರ್‌ ಕೇಂದ್ರಗಳನ್ನು ತೆರೆಯಲಾಗಿದೆ. ಸೋಂಕಿತರು ಅಲ್ಲಿ ಸುರಕ್ಷತೆಯಿಂದ ಇರಬಹುದು’ ಎಂದು ಹೇಳಿದರು.

ಆರ್‌ಎಸ್‍ಎಸ್ ಪ್ರಮುಖ ಕೃಷ್ಣ ಜೋಶಿ, ಡಾ.ಮಂಜುನಾಥ ದೋಶೆಟ್ಟಿ ಮಾತನಾಡಿದರು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ.ಉಮೇಶ ಜಾಧವ, ಶಾಸಕ ಡಾ.ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ, ಮುಖಂಡರಾದ ದೊಡ್ಡಪ್ಪಗೌಡ ಪಾಟೀಲ ನರಬೋಳ, ಅಮರನಾಥ ಪಾಟೀಲ, ಡಾ.ಕುಮಾರ ಅಂಗಡಿ, ವಿಜಯ ಮಹಾಂತೇಶ, ಡಾ.ಸುಧಾ, ದಿವ್ಯಾ ಹಾಗರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.