ADVERTISEMENT

ಗಾಬರಿ ಬೇಡ; 583 ಬೆಡ್‌ ಲಭ್ಯ

ಪ್ರಕರಣ ಹೆಚ್ಚಳ; ಮೇ ಅಂತ್ಯದವರೆಗೆ ಹತೋಟಿಗೆ ಬರದಿದ್ದರೆ ಸಂಪೂರ್ಣ ಲಾಕ್‌ಡೌನ್‌---–ಡಿಸಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 2:37 IST
Last Updated 16 ಮೇ 2021, 2:37 IST
ರೆಡ್‌ಕ್ರಾಸ್‌ ಸಂಸ್ಥೆ ನೀಡಿದ ಆಮ್ಲಜನಕ ಕಾನ್ಸನ್‌ಟ್ರೇಟರ್‌ನ್ನು ಜಿಲ್ಲಾಧಿಕಾರಿ ಜ್ಯೋತ್ಸ್ನಾ ಅವರು ಡಿಎಚ್‌ಒಗೆ ಹಸ್ತಾಂತರಿಸಿದರು
ರೆಡ್‌ಕ್ರಾಸ್‌ ಸಂಸ್ಥೆ ನೀಡಿದ ಆಮ್ಲಜನಕ ಕಾನ್ಸನ್‌ಟ್ರೇಟರ್‌ನ್ನು ಜಿಲ್ಲಾಧಿಕಾರಿ ಜ್ಯೋತ್ಸ್ನಾ ಅವರು ಡಿಎಚ್‌ಒಗೆ ಹಸ್ತಾಂತರಿಸಿದರು   

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೋವಿಡ್‌ ಆಸ್ಪತ್ರೆಗಳಲ್ಲಿ ಈಗಲೂ 583 ಬೆಡ್‌ಗಳು ಲಭ್ಯ ಇವೆ. ಅವುಗಳಲ್ಲಿ 81 ಆಮ್ಲಜನಕಯುಕ್ತ ಬೆಡ್‌ಗಳಿವೆ. ಹಾಗಾಗಿ ಸೋಂಕಿತರು ಬೆಡ್‌ ಇಲ್ಲವೆಂದು ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ಎರಡು ವಾರದ ಹಿಂದೆ ಇದ್ದ ಬೆಡ್‌ ಸಮಸ್ಯೆ ಈಗ ನೀಗಿದೆ. ಸೋಂಕಿತರ ಪ್ರಮಾಣದಲ್ಲಿ ತುಸು ಇಳಿಕೆಯಾಗಿದೆ. ಆದರೆ, ಪರಿಸ್ಥಿತಿ ಇನ್ನೂ ಹತೋಟಿಗೆ ಬಂದಿಲ್ಲ. ಆಮ್ಲಜನಕಯುಕ್ತ ಬೆಡ್‌ ಸಿಗದ ಕಾರಣ ಯಾರೂ ಸಾಯದಂತೆ ನಿಗಾ ವಹಿಸಲಾಗಿದೆ’ ಎಂದರು.

‘ಜಿಲ್ಲೆಗಾಗಿಯೇ ಪ್ರತ್ಯೇಕ ಆಮ್ಲಜನಕ ಸರಬರಾಜು ಟ್ಯಾಂಕರ್‌ ಬಂದಿದ್ದರಿಂದ ತುರ್ತು ಅಗತ್ಯಗಳನ್ನು ಪೂರೈಸಲಾಗುತ್ತಿದೆ. ಈ ಟ್ಯಾಂಕರ್‌ ವಾರದಲ್ಲಿ ಮೂರು ಬಾರಿ 15 ಕೆ.ಎಲ್‌ ಆಮ್ಲಜನಕ ಪೂರೈಸುತ್ತಿದೆ. ಕಲಬುರ್ಗಿ ಹಾಗೂ ಬೀದರ್‌ಗೆ ಈ ಮುಂಚೆ ಲಿಕ್ವಿಡ್‌ ಆಮ್ಲಜನಕ ಪೂರೈಸುತ್ತಿದ್ದ ಟ್ಯಾಂಕರ್‌ ಕೂಡ ಇನ್ನೂ ಮುಂದುವರಿದಿದೆ. ಇದಲ್ಲದೇ, ಸಿಮೆಂಟ್‌ ಕಾರ್ಖಾನೆಗಳು ಪೂರೈಸುವ ನೈಸರ್ಗಿಕ ಆಮ್ಲಜನಕ ಸಿಲಿಂಡರ್‌ ಕೂಡ ಬಳಸಲಾಗುತ್ತಿದೆ’ ಎಂದರು.

‘ಈ ಮುಂಚಿನ ಪ್ರತಿ ದಿನ 900 ಸಿಲಿಂಡರ್‌ನಷ್ಟು ಆಮ್ಲಜನಕ ಉತ್ಪಾದನೆ ಆಗುತ್ತಿತ್ತು. ಈಗ ಅದನ್ನು ದ್ವಿಗುಣಗೊಳಿಸಲಾಗಿದ್ದು, ದಿನಕ್ಕೆ 1900 ಸಿಲಿಂಡರ್‌ನಷ್ಟು ಉತ್ಪಾದಿಸಲಾಗುತ್ತಿದೆ. ಪ್ರತಿಯೊಂದು ಉತ್ಪಾದನಾ ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೀಗಾಗಿ, ಹಂಚಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದರು.

ADVERTISEMENT

259 ಪ್ರಕರಣ ದಾಖಲು: ‘ಕೋವಿಡ್ ಮಾರ್ಗಸೂಚಿಗಳನ್ನು ಮುರಿದ ಕಾರಣಕ್ಕೆ ಇದೂವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 259 ಮಂದಿ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಸ್ಕ್‌ ಹಾಕದವರ ಮೇಲೆ ಕೇಸ್‌ ಹಾಕುವ ಬದಲು ದಂಡ ಕಟ್ಟಿಸಲಾಗುತ್ತಿದೆ. ಏನೆಲ್ಲ ಪ್ರಯತ್ನ ಮಾಡಿದ ಮೇಲೂ ಜನರು ಜಿಲ್ಲಾಡಳಿತದ ಜತೆಗೆ ಸಹಕರಿಸುತ್ತಿಲ್ಲ. ಜನ ಕೈಜೋಡಿಸದ ಹೊರತು ಈ ಸೋಂಕಿನ ವಿರುದ್ಧ ನಾವು ಗೆಲ್ಲುವುದು ಸಾಧ್ಯವೇ ಇಲ್ಲ’ ಎಂದರು.

ರೆಮ್‌ಡಿಸಿವಿರ್‌ ಕೊರತೆ ಇಲ್ಲ: ‘ನಮ್ಮ ಬೇಡಿಕೆಯಷ್ಟು ರೆಮ್‌ಡಿಸಿವಿರ್‌ ಹಾಗೂ ಆಮ್ಲಜನಕ ಈಗ ಪೂರೈಕೆ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಗತ್ಯ ಕ್ರಮ ಕೈಗೊಂಡಿದ್ದರಿಂದ ಸಮಸ್ಯೆ ಕಡಿಮೆಯಾಗಿದೆ. ಅಲ್ಲದೇ, ರೆಮ್‌ಡಿಸಿವಿರ್‌ ಇಂಜಕ್ಷನ್‌ಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದು ನಿಂತಿದೆ. ಕಾಳಸಂತೆ ತಡೆದಿದ್ದರಿಂದ ಇದರ ಕೊರತೆ ನೀಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಇದ್ದರು.

1.40 ಲಕ್ಷ ಜನರಿಗೆ 2ನೇ ಡೋಸ್‌‌

‘ಜಿಲ್ಲೆಯಲ್ಲಿ ಇನ್ನೂ 1.40 ಲಕ್ಷ ಜನರಿಗೆ ಕೋವಿಡ್‌ ಚುಚ್ಚುಮದ್ದಿನ ಎರಡನೇ ಡೋಸ್‌ ನೀಡುವುದು ಬಾಕಿ ಇದೆ. ಆದರೆ, ಸದ್ಯದವರೆಗೆ ಅಷ್ಟು ಪೂರೈಕೆ ಇಲ್ಲ. ಈಗ 2,000 ಕೋವಿಶೀಲ್ಡ್‌ ಹಾಗೂ 300 ಕೋವ್ಯಾಕ್ಸಿನ್‌ ಲಸಿಕೆಗಳು ಮಾತ್ರ ಸಂಗ್ರಹ ಇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.‌

ಒಂದೇ ವಾರದಲ್ಲಿ 76 ಜನ ಸಾವು

‘ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಈ ವಾರ ಶೇ 26.12ರಷ್ಟಿದೆ. ಶನಿವಾರಕ್ಕೆ ಕೊನೆಗೊಂಡಂತೆ ಕಳೆದ ಏಳು ದಿನಗಳಲ್ಲಿ 76 ಮಂದಿ ಮೃತಪಟ್ಟಿದ್ದಾರೆ. ಈಗಲಾದರೂ ಜಿಲ್ಲೆಯ ಜನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯ’ ಎಂದು ಜ್ಯೋತ್ಸ್ನಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸೋಂಕಿತರ ಸಂಖ್ಯೆ ತೀವ್ರವಾಗುತ್ತಿರುವ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪೂರ್ಣ ದಿನದ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಬೆಳಿಗ್ಗೆ 10ರವರೆಗೂ ಅಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಸದ್ಯ ಇಂಥ ಪರಿಸ್ಥಿತಿ ಕಲಬುರ್ಗಿಗೆ ಬಂದಿಲ್ಲ. ಒಂದು ವೇಳೆ ಮೇ ಕೊನೆಯ ವಾರದವರೆಗೆ ಕೇಸ್‌ಗಳ ಪ್ರಮಾಣ ಇಳಿಯದೇ ಇದ್ದರೆ ಸಂಪೂರ್ಣ ಲಾಕ್‌ಡೌನ್‌ ಅನಿವಾರ್ಯವಾಗಲಿದೆ’ ಎಂದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯು ಜಿಲ್ಲಾ ಆಡಳಿತಕ್ಕೆ ₹18 ಲಕ್ಷ ಮೌಲ್ಯದ ಒಂದು ವೆಂಟಿಲೇಟರ್‌ ಹಾಗೂ ಮೂರು ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದೆ.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕರ್ನಾಟಕ ಶಾಖೆಯಿಂದ ಕಲಬುರ್ಗಿ ಜಿಲ್ಲೆಗೆ ಇವುಗಳನ್ನು ಹಂಚಿಕೆ ಮಾಡಲಾಗಿತ್ತು. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು‌ ಇವುಗಳನ್ನು ಸರ್ಕಾರಿ‌ ಅಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಬಳಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ಅವರಿಗೆ ಶನಿವಾರ ಹಸ್ತಾಂತರಿಸಿದರು.

ಈ ವೈದ್ಯಕೀಯ ಜೀವರಕ್ಷಕ ಉಪಕರಣಗಳು ವಿದೇಶಗಳಿಂದ ರಾಜ್ಯಕ್ಕೆ ಕೊಡುಗೆಯಾಗಿ‌ ಬಂದಿವೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಉಪಸಭಾಪತಿ ಅರುಣ ಲೋಯಾ, ಕೋಶಾಧಿಕಾರಿ ಭಾಗ್ಯಲಕ್ಷ್ಮಿ, ಆಡಳಿತ ಮಂಡಳಿ ಸದಸ್ಯ ಡಾ.ಶರಣಬಸಪ್ಪ ವಡ್ಡನಕೇರಿ, ಆರಾಧನಾ‌ ವಿಶ್ವನಾಥ ರೆಡ್ಡಿ ಮುದ್ನಾಳ ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.