ADVERTISEMENT

ಕಲಬುರಗಿ | ‘ಬಿಜೆಪಿ, ಕಾಂಗ್ರೆಸ್ ಮಧ್ಯೆ ವ್ಯತ್ಯಾಸವಿಲ್ಲ’: ಸಿದ್ದನಗೌಡ ಪಾಟೀಲ

ಸಿಪಿಐ 25ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:14 IST
Last Updated 31 ಆಗಸ್ಟ್ 2025, 7:14 IST
<div class="paragraphs"><p>ಕಲಬುರಗಿಯಲ್ಲಿ ಶನಿವಾರ ನಡೆದ ಸಿಪಿಐ ರಾಜ್ಯ ಸಮ್ಮೇಳನಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರಜೀತ್‌ ಕೌರ್‌ ಅವರು ಕೆಂಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಪ್ರೊ.ಆರ್‌.ಕೆ.ಹುಡಗಿ, ಮಹೇಶಕುಮಾರ್ ರಾಠೋಡ, ಸಿದ್ದನಗೌಡ ಪಾಟೀಲ, ರಂಜಾನ್‌ ದರ್ಗಾ, ಅಜೀಜ್ ಪಾಷಾ, ಸಾತಿ ಸುಂದರೇಶ ಭಾಗವಹಿಸಿದ್ದರು&nbsp; </p></div>

ಕಲಬುರಗಿಯಲ್ಲಿ ಶನಿವಾರ ನಡೆದ ಸಿಪಿಐ ರಾಜ್ಯ ಸಮ್ಮೇಳನಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರಜೀತ್‌ ಕೌರ್‌ ಅವರು ಕೆಂಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಪ್ರೊ.ಆರ್‌.ಕೆ.ಹುಡಗಿ, ಮಹೇಶಕುಮಾರ್ ರಾಠೋಡ, ಸಿದ್ದನಗೌಡ ಪಾಟೀಲ, ರಂಜಾನ್‌ ದರ್ಗಾ, ಅಜೀಜ್ ಪಾಷಾ, ಸಾತಿ ಸುಂದರೇಶ ಭಾಗವಹಿಸಿದ್ದರು 

   

ಪ್ರಜಾವಾಣಿ ಚಿತ್ರ

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರಕ್ಕೂ ವ್ಯತ್ಯಾಸವಿಲ್ಲದಂತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ADVERTISEMENT

ಪಕ್ಷದ 25ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಸಂದರ್ಭದಲ್ಲಿ ನಾವು ಜಾತ್ಯತೀತ ಮೌಲ್ಯಗಳನ್ನು ಕಾಯ್ದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೆವು. ಆದರೆ, ಸಿದ್ದರಾಮಯ್ಯ ಸರ್ಕಾರವು ನಮ್ಮ ಪಕ್ಷದ ಹೋರಾಟಗಾರರ ವಿರುದ್ಧ ರೌಡಿಶೀಟ್ ತೆರೆದು ಪ್ರಕರಣ ದಾಖಲಿಸಿದೆ. ಇದನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಅವರನ್ನು ರೌಡಿ ಪಟ್ಟಿಯಲ್ಲಿ ಸೇರಿಸಿದ್ದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ‘ಶರಣಬಸವೇಶ್ವರರು, ಖಾಜಾ ಬಂದಾನವಾಜರು ಕಲಬುರಗಿಯ ಸೌಹಾರ್ದ ಪರಂಪರೆಯ ಎರಡು ಕಣ್ಣುಗಳಾಗಿದ್ದು, ಒಂದೇ ನೋಟ ಉಳ್ಳವರಾಗಿದ್ದಾರೆ. ಇಂತಹ ಭಾವೈಕ್ಯದ ನೆಲದಲ್ಲಿ ಪಕ್ಷದ ಸಮ್ಮೇಳನ ನಡೆಯುತ್ತಿರುವುದು ಶ್ಲಾಘನೀಯ’ ಎಂದರು.

ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯಸಭಾ ಮಾಜಿ ಸದಸ್ಯ ಅಜೀಜ್ ಪಾಷಾ ಮಾತನಾಡಿ, ‘ನರೇಂದ್ರ ಮೋದಿ ತಮ್ಮ ಪಕ್ಷವನ್ನು ಬಿಹಾರದಲ್ಲಿ ಅಧಿಕಾರ ತರುವ ಉದ್ದೇಶದಿಂದ ಮತದಾರರ ವಿಶೇಷ ಪರಿಷ್ಕರಣೆಯ ಹೆಸರಿನಲ್ಲಿ 65 ಲಕ್ಷ ಮತದಾರರನ್ನು ಕೈಬಿಡುವ ಹುನ್ನಾರ ನಡೆಸಿದ್ದಾರೆ. ಇದು ಅತ್ಯಂತ ಅಪ್ರಜಾತಾಂತ್ರಿಕ ಕ್ರಮ’ ಎಂದು ಟೀಕಿಸಿದರು.

ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಾರುತಿ ಗೋಖಲೆ, ಹಿರಿಯ ವಕೀಲ ಪಿ.ವಿಲಾಸಕುಮಾರ್, ಪಕ್ಷದ ಮುಖಂಡರಾದ ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಪ್ರಭುದೇವ ಯಳಸಂಗಿ, ಹಣಮಂತರಾಯ ಅಟ್ಟೂರ, ಪದ್ಮಾವತಿ ಮಾಲಿಪಾಟೀಲ ಇತರರು ಭಾಗವಹಿಸಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಎರಡು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆ 31, ಸೆ 1ರಂದು ಪಕ್ಷದ ಪ್ರತಿನಿಧಿ ಅಧಿವೇಶನ ನಡೆಯಲಿದೆ.

ರಾಜ್ಯದ 50 ಲಕ್ಷ ಕುಟುಂಬಗಳು ಇನ್ನೂ ಸೂರಿಲ್ಲದೇ ನರಳುತ್ತಿದೆ. ಇವರಿಗೆ ಮನೆ ಕಟ್ಟಿಸಲು ಸರ್ಕಾರ 5 ಲಕ್ಷ ಎಕರೆ ಭೂಮಿ ಮಂಜೂರು ಮಾಡಬೇಕು. ಆರು ಸಾವಿರ ಶಾಲೆಗಳನ್ನು ಮುಚ್ಚುವ ಕ್ರಮದಿಂದ ಹಿಂದೆ ಸರಿಯಬೇಕು
ಸಾತಿ ಸುಂದರೇಶ ಸಿಪಿಐ ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.