ಜೇವರ್ಗಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿರುವ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಸುಭಾಷ ಹೊಸಮನಿ ಆರೋಪಿಸಿದರು.
ಕೇಂದ್ರ ಬಜೆಟ್ ವಿರೋಧಿಸಿ ಸಿಪಿಎಂ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
‘ಶ್ರೀಮಂತರಿಂದ ಶ್ರೀಮಂತರಿಗಾಗಿ ಮಾತ್ರ ಈ ಬಜೆಟ್ ಆಗಿದೆ. ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಇದು ಬಿಂಬಿಸುತ್ತದೆ. ಮೋದಿ ಸರ್ಕಾರದ ದಿವಾಳಿತನವನ್ನು ಬಿಂಬಿಸುವ ಈ ಬಜೆಟ್ ದೇಶದ ಅರ್ಥ ವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.
‘ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಮಧ್ಯಮ ವರ್ಗಗಳಿಗೆ ಸಹಾಯ ಮಾಡಲಾಗುತ್ತಿದೆ. ವಾಸ್ತವವಾಗಿ ಆದಾಯ ತೆರಿಗೆ ರಿಯಾಯಿತಿಗಳಿಂದಾಗಿ ಸರ್ಕಾರ ಅನುಭವಿಸುವ ₹ 1 ಲಕ್ಷ ಕೋಟಿ ನಷ್ಟದಿಂದ ಪ್ರಯೋಜನದ ಪಾಲು ಪಡೆಯುವವರು ಶೇ 1ರಷ್ಟು ಮಂದಿ ಮಾತ್ರ ಇದ್ದಾರೆ’ ಎಂದರು.
ನಂತರ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಎಂ ತಾಲ್ಲೂಕು ಸಮಿತಿ ಸದಸ್ಯರಾದ ಸಿದ್ದರಾಮಯ್ಯ ಹರವಾಳ, ಮಲ್ಕಪ್ಪ ಹರನೂರ, ಬೀರಪ್ಪ ಯಾತನೂರ, ರಾಜು ರೇವನೂರ, ಆನಂದಪ್ಪ ಹರವಾಳ, ಸಿದ್ದಣ್ಣ ಹೊಸಮನಿ, ಉಸ್ಮಾನ ಅಲಿ ಹರನೂರ, ಶಾಂತಪ್ಪ ಗಣಜಲಖೇಡ ಹರವಾಳ, ಈರಣ್ಣ ರೇವನೂರ, ಲಿಂಗಣ್ಣ ತಳವಾರ ಸೇರಿ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.