ADVERTISEMENT

ಶಾಂತಲಿಂಗೇಶ್ವರ ಮಠದ ದಾಖಲೆ ಪತ್ರ, ಚಿನ್ನಾಭರಣ, ಹಣ ಕಳವು

ಮೂರು ಮನೆಗಳಿಗೂ ಕನ್ನ ಹಾಕಿದ ದುಷ್ಕರ್ಮಿಗಳು, ಶ್ವಾನದಳ, ಬೆರಳಚ್ಚು ತಜ್ಞರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 3:54 IST
Last Updated 16 ಆಗಸ್ಟ್ 2021, 3:54 IST
ಅಫಜಲಪುರ ತಾಲ್ಲೂಕಿನ ಜೇವರ್ಗಿ(ಬಿ) ಗ್ರಾಮದ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಕಳ್ಳತನವಾಗಿರುವ ಕುರಿತು ಶಾಸಕ ಎಂ.ವೈ.ಪಾಟೀಲ ಅವರು ಪೀಠಾಧಿಪತಿ ಜಯಗುರು ಶಾಂತಲಿಂಗಾರಾಧ್ಯ ಶಿವಾಚಾರ್ಯರ ಜೊತೆ ಚರ್ಚಿಸಿದರು. ಪಪ್ಪು ಪಟೇಲ್, ಮತೀನ ಪಟೇಲ್, ಚಂದು ದೇಸಾಯಿ ಇದ್ದರು
ಅಫಜಲಪುರ ತಾಲ್ಲೂಕಿನ ಜೇವರ್ಗಿ(ಬಿ) ಗ್ರಾಮದ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಕಳ್ಳತನವಾಗಿರುವ ಕುರಿತು ಶಾಸಕ ಎಂ.ವೈ.ಪಾಟೀಲ ಅವರು ಪೀಠಾಧಿಪತಿ ಜಯಗುರು ಶಾಂತಲಿಂಗಾರಾಧ್ಯ ಶಿವಾಚಾರ್ಯರ ಜೊತೆ ಚರ್ಚಿಸಿದರು. ಪಪ್ಪು ಪಟೇಲ್, ಮತೀನ ಪಟೇಲ್, ಚಂದು ದೇಸಾಯಿ ಇದ್ದರು   

ಅಫಜಲಪುರ: ತಾಲ್ಲೂಕಿನ ಜೇವರ್ಗಿ(ಬಿ) ಗ್ರಾಮದ ಐತಿಹಾಸಿಕ ಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠಕ್ಕೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು11 ತೊಲಿ ಚಿನ್ನಾಭರಣ ಹಾಗೂ ₹ 30 ಸಾವಿರ ನಗದು ಹಾಗೂ ಮಠಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಕದ್ದಿದ್ದಾರೆ. ಅಲ್ಲದೇ, ಇದೂ ಊರಿನ ಮೂರು ಮನೆಗಳಿಗೂ ಕನ್ನ ಹಾಕಿದ್ದಾರೆ.

ಮಠದ ಪೀಠಾಧಿಪತಿ ಜಯಗುರು ಶಾಂತಲಿಂಗಾರಾಧ್ಯ ಶಿವಾಚಾರ್ಯರು ಭಾನುವಾರ ನಸುಕಿನಲ್ಲಿ ಎದ್ದಾಗಲೇ ಮಠದಲ್ಲಿ‌ ಕಳ್ಳತನವಾಗಿದ್ದನ್ನು ಗಮನಿಸಿದ್ದಾರೆ. ತಕ್ಷಣ ಗ್ರಾಮಸ್ಥರಿಗೆ ವಿಷಯ ತಿಳಿಸಿ, ಪೊಲೀಸರನ್ನೂ ಕರೆಸಿದರು. ಸಿಪಿಐ ಜಗದೇವಪ್ಪ ಪಾಳಾ ನೇತೃತ್ವದಲ್ಲಿ ಶ್ವಾನದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ‘ಮಠಗಳು ಭಕ್ತರ ಸಂಪತ್ತು. ಹೀಗಾಗಿ ಭಕ್ತರು ದೇಣಿಗೆ ರೂಪದಲ್ಲಿ ಮಠದ ಬೆಳವಣಿಗೆಗೆ ನೀಡಿದ ಕಾಣಿಕೆಗಳು ಸೇರಿದಂತೆ ಮಠದ ಮಹತ್ವದ ದಾಖಲೆ ಪತ್ರಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಮನೆಗಳಲ್ಲೂ ಕಳವು: ಮಠದಲ್ಲಿ ಕದ್ದ ನಂತರ ಇದೇ ಊರಿನ ಭವನರಾವ್‌ ನಾಗೂರ ಅವರ ಮನೆಯಲ್ಲಿ 20 ಗ್ರಾಂ ಬಂಗಾರದ ಆಭರಣ, ₹ 10 ಸಾವಿರ ನಗದು, ತಿಪ್ಪಣ್ಣ ಹಣಮಣ್ಣವರ ಅವರ ಮನೆಯಲ್ಲಿ 15 ಗ್ರಾಂ ಬಂಗಾರ ಹಾಗೂ ₹ 10 ಸಾವಿರ ನಗದು ಮತ್ತು ಶಂಕರ ಹಣಮಣ್ಣವರ ಅವರ ಮನೆಯಲ್ಲಿ ₹ 7 ಸಾವಿರ ಲಗದು ಕಳ್ಳತನ ನಡೆದಿದೆ.

ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಸುರೇಶ ಬಾಬು, ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಸಿಬ್ಬಂದಿ ಮಠಕ್ಕೆ ನೀಡಿ ಪರಿಶೀಲಿಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಭೇಟಿ: ಕಳವು ಪ್ರಕರಣ ಗೊತ್ತಾದ ತಕ್ಷಣ ಶಾಸಕ ಎಂ.ವೈ. ಪಾಟೀಲ ಅವರು ಮಠಕ್ಕೆ ಭೇಟಿ ನೀಡಿದರು. ‘ತಾಲ್ಲೂಕಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಹಳ್ಳಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯ ಮಾಡಲಾಗುವುದು. ಮಠದಲ್ಲಿ ಕಳ್ಳತನ ಆಗಿರುವುದು ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ‍ಪೊಲೀಸರು ಕಳ್ಳರನ್ನು ಶೀಘ್ರದಲ್ಲಿ ಪತ್ತೆಹಚ್ಚಿ ಮಠದ ಸಂಪತ್ತನ್ನು ಮರಳಿ ತರಲು ಯತ್ನಿಸಬೇಕು. ಈ ಬಗ್ಗೆ ಖುದ್ದು ಸೂಚನೆ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.