ADVERTISEMENT

ವರದಕ್ಷಿಣೆ ಕಿರುಕಳ: ಎಂಟು ಮಂದಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 2:43 IST
Last Updated 2 ಏಪ್ರಿಲ್ 2021, 2:43 IST

ಕಲಬುರ್ಗಿ: ಗೃಹಿಣಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಪತಿ ಹಾಗೂ ಆತನ ಮನೆಯ ಸದಸ್ಯರು ಸೇರಿ ಎಂಟು ಜನರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 3 ಸಾವಿರ ದಂಡ ವಿಧಿಸಿ, ಇಲ್ಲಿನ ವಿಶೇಷ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ನಗರದ ಸಂತ್ರಾಸವಾಡಿಯ ದರ್ಶನಾಪುರ ಬಡಾವಣೆಯ ನಿವಾಸಿಗಳಾದ ಚಂದ್ರಕಾಂತ ಚಂದುಲಾಲ್‌ ತಟರಾಸಿ, ಚಂದುಲಾಲ್‌ ಮೋನಪ್ಪ ತಟರಾಸಿ, ಅಪರ್ಣಾ ಚಂದುಲಾಲ್‌ ತಟರಾಸಿ, ಯಲ್ಲಮ್ಮ ವಾಸುದೇವ ತಟರಾಸಿ, ವೆಂಕಟೇಶ ಚಂದುಲಾಲ್‌ ತಟರಾಸಿ, ನವೀನ್‌ ಚಂದುಲಾಲ್‌ ತಟರಾಸಿ, ಚೇತನ್‌ ಚಂದುಲಾಲ್‌ ತಟರಾಸಿ, ವಾಸುದೇವ ಚಂದುಲಾಲ್‌ ತಟರಾಸಿ ಶಿಕ್ಷೆಗೆ ಒಳಗಾದವರು.

ಮುಖ್ಯ ಆರೋಪಿ ಚಂದ್ರಕಾಂತ ಎಂಬಾತನಿಗೆ 2016ರಲ್ಲಿ ಮದುವೆ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ 5 ತೊಲ ಬಂಗಾರ, ₹ 51 ಸಾವಿರ ಹಣ, ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು. ಆದರೆ, ಕೆಲವು ತಿಂಗಳ ನಂತರ ತವರು ಮನೆಯಿಂದ ಮತ್ತೆ ₹ 2 ಲಕ್ಷ ಹಣ ಹಾಗೂ 10 ತೊಲ ಬಂಗಾರ ತರುವಂತೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದ. ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಮಧ್ಯೆ ಗೃಹಿಣಿಯ ತಂದೆ– ತಾಯಿ ಬುದ್ಧಿ ಹೇಳಿ ಮತ್ತೆ ಗಂಡನ ಮನೆಗೆ ಕಳುಹಿಸಿದ್ದರು.

ADVERTISEMENT

9 ತಿಂಗಳ ನಂತರ ಗೃಹಿಣಿ ಗರ್ಭಿಣಿ ಆಗಿ ತವರು ಮನೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಆದರೆ, ಪತಿ ಮನೆಯವರು ಮತ್ತೆ ಮನೆಗೆ ಕರೆದುಕೊಂಡು ಹೋಗಲಿಲ್ಲ. ಗೃಹಿಣಿಯತಂದೆ– ತಾಯಿಯೇ ಸೇರಿಕೊಂಡು ಗಂಡನ ಮನೆಗೆ ಕರೆದುಕೊಂಡು ಹೋದಾಗ ಮನೆಯಲ್ಲಿ ಸೇರಿಕೊಳ್ಳದೇ ಜಗಳವಾಡಿದರು. ವರದಕ್ಷಿಣೆ ತರುವಂತೆ ಹಿಂಸೆ ನೀಡಿದರು. ಗೃಹಿಣಿಯ ಕೂದಲ ಹಿಡಿದು ಎಳೆದಾಡಿ, ಹೊಡೆದು, ಬೈದು ಕಳುಹಿಸಿದ್ದರು. ಈ ಬಗ್ಗೆ ಗೃಹಿಣಿ ನೀಡಿದ ದೂರು ಆಧರಿಸಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್‌ ಅವರು, ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ ₹ 20 ಸಾವಿರ ಹಣವನ್ನು ಸಂತ್ರಸ್ತೆಗೆ ನೀಡಲು
ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ 1ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಸ್‌.ಆರ್‌. ನರಸಿಂಹಲು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.