ಕಲಬುರಗಿ: ನಗರದ ಹೈಕೋರ್ಟ್ ಬಳಿ ಇರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಅಂಬೇಡ್ಕರ್ ಪೂಜೆಗೆ ಬರಲು ನಿರಾಕರಿಸಿದ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ 15–20 ವಿದ್ಯಾರ್ಥಿಗಳಿರುವ ಗುಂಪು, ಆತನ ಬಟ್ಟೆ ಬಿಚ್ಚಿಸಿ, ಕೈಯಲ್ಲಿ ಅಂಬೇಡ್ಕರ್ ಭಾವಚಿತ್ರ ಕೊಟ್ಟು ಮೆರವಣಿಗೆ ನಡೆಸಿದ ಘಟನೆ ಗುರುವಾರ ನಡೆದಿದೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಕಮಲಾಪುರ ತಾಲ್ಲೂಕಿನ ತಾಂಡಾವೊಂದರ 17 ವರ್ಷದ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರು ಮುಂಬೈನ ಕೆಲಸ ಮಾಡುತ್ತಿದ್ದಾರೆ. ಈತನನ್ನು ಕಾಲೇಜಿಗೆ ಸೇರಿಸಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಪ್ರವೇಶ ಕೊಡಿಸಲಾಗಿತ್ತು. ಮೂರ್ನಾಲ್ಕು ವಾರಗಳಿಂದ ಪ್ರತಿ ಭಾನುವಾರ ಅಂಬೇಡ್ಕರ್ ಭಾವಚಿತ್ರಕ್ಕೆ ವಸತಿ ನಿಲಯದಲ್ಲಿ ಪೂಜೆ ಮಾಡಲಾಗುತ್ತಿತ್ತು. ಈ ಭಾನುವಾರವೂ ಪೂಜೆಗೆ ಬರಬೇಕು ಎಂದು ಕೆಲ ವಿದ್ಯಾರ್ಥಿಗಳು ಆತನಿಗೆ ತಾಕೀತು ಮಾಡಿದ್ದಾರೆ. ಆ ದಿನ ಕೆಲಸ ಇರುವುದರಿಂದ ಪೂಜೆಗೆ ಬರಲು ಆಗುವುದಿಲ್ಲ ಎಂದು ಆತ ಹೇಳಿದ್ದಕ್ಕೆ ಹಲ್ಲೆ ನಡೆಸಿ ಬಟ್ಟೆ ಬಿಚ್ಚಿ ಕೈಗೆ ಅಂಬೇಡ್ಕರ್ ಫೋಟೊ ಕೊಟ್ಟು ಮೆರವಣಿಗೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಯ ಮೆರವಣಿಗೆ ನಡೆಸಿದ ವಿಡಿಯೊವನ್ನೂ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.