ADVERTISEMENT

ಕಲಬುರಗಿ | ಬೆಳೆ ಹಾನಿ ಪರಿಶೀಲಿಸಿದ ಸಚಿವ ಪ್ರಿಯಾಂಕ್

ಜಿಲ್ಲೆಯಲ್ಲಿ 1.05 ಲಕ್ಷ ಹೆಕ್ಟೇರ್ ಬೆಳೆ ನಷ್ಟ; ವಿಮೆ ಪರಿಹಾರ ಶೀಘ್ರ ಪಾವತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:00 IST
Last Updated 16 ಸೆಪ್ಟೆಂಬರ್ 2025, 6:00 IST
ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚಿಗೆ ಬಿದ್ದ ಮಳೆಯಿಂದ ಬೆಳೆ ಹಾನಿಯಾದ ಕೆರಿಭೋಸಗಾ ಗ್ರಾಮದ ಹೊಲಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲಿಸಿದರು. ಸಮದ್ ಪಟೇಲ್, ಮಜಹರ್ ಆಲಂ ಖಾನ್, ಸಂತೋಷ ಪಾಟೀಲ ಇತರರು ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚಿಗೆ ಬಿದ್ದ ಮಳೆಯಿಂದ ಬೆಳೆ ಹಾನಿಯಾದ ಕೆರಿಭೋಸಗಾ ಗ್ರಾಮದ ಹೊಲಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲಿಸಿದರು. ಸಮದ್ ಪಟೇಲ್, ಮಜಹರ್ ಆಲಂ ಖಾನ್, ಸಂತೋಷ ಪಾಟೀಲ ಇತರರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಪಾಲ್ಗೊಳ್ಳಲು ಸೆ.16ರಂದು ರಾತ್ರಿ ನಗರಕ್ಕೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಅತಿವೃಷ್ಟಿಯಿಂದ ಕಂಗೆಟ್ಟಿರುವ ರೈತರು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಕಂಡುಬಂದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸೋಮವಾರ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಶೀಲನೆಗೆ ಮುಂದಾಗಿದ್ದಾರೆ.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ಪರಿಹಾರಕ್ಕಾಗಿ ರೈತರು ಮೊರೆಯಿಡುತ್ತಿದ್ದರು. ಇದೇ 10ರಂದು ನಗರಕ್ಕೆ ಬಂದಿದ್ದರೂ ಸಚಿವರು ಬೆಳೆಹಾನಿ ಸಮೀಕ್ಷೆಗೆ ಮುಂದಾಗಿರಲಿಲ್ಲ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳೊಂದಿಗೆ ಸಭೆಯನ್ನು ಮಾತ್ರ ನಡೆಸಿದ್ದರು.

ರೈತರ ನೋವಿಗೆ ಸ್ಪಂದಿಸಲು ಕೊನೆಗೂ ಮುಂದಾಗಿರುವ ಸಚಿವರು, ಮಳೆಯಿಂದಾಗಿ ಹಾನಿಗೀಡಾದ ತಾಲ್ಲೂಕಿನ ಕೆರಿಭೋಸಗಾ ಗ್ರಾಮದ ಪಾರ್ವತಿಬಾಯಿ ಶ್ರೀಮಂತರಾವ ಅವರ ಹೊಲಕ್ಕೆ ಸೋಮವಾರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. 

ADVERTISEMENT

ಹಲವು ದಿನಗಳಿಂದ ಸುರಿದ ಮಳೆ ನೀರಿನಲ್ಲೇ ನಿಂತಿದ್ದ ತೊಗರಿ ಬೆಳೆಯನ್ನು ಕಿತ್ತುಕೊಂಡ ಪ್ರಿಯಾಂಕ್ ಅವರು, ತೊಗರಿ ಹೂವು ಬಿಡದ ಬಗ್ಗೆ ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಳೆ ವಿಮೆ ನೋಂದಣಿ ಆಗಿದೆಯೇ ಎಂಬುದನ್ನು ರೈತ ಮಲ್ಲಯ್ಯ ಗುತ್ತೇದಾರ ಅವರಿಂದ ಖಚಿತಪಡಿಸಿಕೊಂಡರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಆಗಸ್ಟ್ ಮತ್ತು ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಪ್ರಾಥಮಿಕ ವರದಿ ಪ್ರಕಾರ 1.05 ಲಕ್ಷ ಹೆಕ್ಟೇರ್ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದರಲ್ಲಿ ಬೆಳೆ ವಿಮೆಯಡಿ ನೊಂದಾಯಿತರ ಪೈಕಿ ಶೇ 45ರಷ್ಟು ರೈತರು ಪರಿಹಾರಕ್ಕೆ ದೂರು ಸಲ್ಲಿಸಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿನ ಬೆಳೆ ಹಾನಿ ನಿಖರ ತನಿಖೆಗೆ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಒಳಗೊಂಡ ತಂಡ‌ ರಚಿಸಿ ಜಂಟಿ ಸಮೀಕ್ಷೆಗೆ ಆದೇಶಿಸಲಾಗಿದೆ. ಬೆಳೆ ಹಾನಿ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ’ ಎಂದರು.

‘ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಹಣ ತುಂಬಾ ಕಡಿಮೆ ಸಿಗುತ್ತಿದೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಕೇಂದ್ರದ ಎನ್‌ಡಿಆರ್‌ಎಫ್‌ ನಿಯಮಾವಳಿಗಳಲ್ಲಿ ದೋಷವಿದ್ದು, ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಸಂಸತ್ ಅಧಿವೇಶನದಲ್ಲಿ ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಸಂಸದರು ಒತ್ತಾಯಿಸಿದ್ದಾರೆ’ ಎಂದು ಉತ್ತರಿಸಿದರು.

‘ವಾಡಿ ಸಮೀಪದ ಬಳವಡಗಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯ ತ್ಯಾಜ್ಯವನ್ನು ಅದರಲ್ಲೇ ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿತ್ತು. ಈಗ ಆ ತ್ಯಾಜ್ಯವನ್ನು ತೆರವುಗೊಳಿಸಲಾಗುವುದು. ಚಿತ್ತಾಪುರ, ಅಫಜಲಪುರ, ಆಳಂದ ಸೇರಿದಂತೆ ವಿವಿಧೆಡೆ ಕೆಲ ಗ್ರಾಮಗಳ ಬಡಾವಣೆಗಳನ್ನು ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಸೋಮಶೇಖರ ಬಿರಾದಾರ, ಕಲಬುರಗಿ ತಹಶೀಲ್ದಾರ್ ಕೆ. ಆನಂದಶೀಲ ಮೊದಲಾದವರು ಇದ್ದರು.

ಜಿಲ್ಲೆಯ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಅವುಗಳ ದುರಸ್ತಿಗಾಗಿ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ₹40 ಕೋಟಿ ಹಣವಿದ್ದು ಅದನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಕಲಬುರಗಿ ನಗರದ ರಸ್ತೆಗಳನ್ನು ಆಡಿಟ್ ಮಾಡಿಸಿ ದುರಸ್ತಿ ಅಥವಾ ಹೊಸದಾಗಿ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
‘ಸಂಪುಟ ಪುನರ್ ರಚನೆ ಮಾಹಿತಿಯಿಲ್ಲ’
ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು. ಜೇವರ್ಗಿ ಶಾಸಕ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿದ ಅವರು ‘ಯಾರು ಬೇಕಾದರೂ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಬಹುದು. ಅದನ್ನು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಎಐಸಿಸಿ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಕೆಲವರು ಎಐಸಿಸಿ ಅಧ್ಯಕ್ಷರು ಮುಖ್ಯಮಂತ್ರಿಗೆ ಆಪ್ತರಿರುತ್ತಾರೆ. ಅವರಿಗೂ ತಮ್ಮ ಬೇಡಿಕೆ ಸಲ್ಲಿಸಿರಬಹುದು’ ಎಂದರು.
‘ನನ್ನ ಅವಧಿಯಲ್ಲೇ ಜಿ.ಪಂ. ತಾ.ಪಂ. ಚುನಾವಣೆ’
‘ಕ್ಷೇತ್ರಗಳ ಮರು ವಿಂಗಡಣೆ ಪ್ರಯುಕ್ತ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ವಿಳಂಬವಾಗಿದ್ದು ನಾನು ಗ್ರಾಮೀಣಾಭಿವೃದ್ದಿ ಪಂಚಾಯತರಾಜ್ ಸಚಿವನಾಗಿರುವ ವೇಳೆಯೇ ಚುನಾವಣೆಗಳನ್ನು ನಡೆಸುವುದು ನಿಶ್ಚಿತ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕೆಲ ಗ್ರಾಮಗಳು ನಗರದ ವ್ಯಾಪ್ತಿಗೆ ಸೇರಿದ್ದರಿಂದ ಪುನರ್ ವಿಂಗಡಣೆ ಮಾಡುವುದಕ್ಕೆ ಸಮಯ ಬೇಕಾಗಿತ್ತು ಎಂದು ಸ್ಪಷ್ಟಪಡಿಸಿದರು. ‘ಪಿಡಿಒಗಳ ಕೊರತೆ ನೀಗಿಸಲು ಕೆಪಿಎಸ್‌ಸಿ ಮೂಲಕ ಪರೀಕ್ಷೆ ನಡೆಸಿದ್ದು ತಪ್ಪು ಎಂದು ಈಗ ಅರಿವಾಗುತ್ತಿದೆ. ಯಾವುದಾದರೂ ಕೆಲಸ ಆಗಬಾರದು ಎಂದರೆ ಕೆಪಿಎಸ್‌ಸಿಗೆ ವಹಿಸಬೇಕು. ಕರ್ನಾಟಕ ‍ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದ್ದರೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಗಿಯುತ್ತಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.