ADVERTISEMENT

ಬೆಳೆಹಾನಿ: ‘ಜೆಡಿಎಸ್‌ನಿಂದ ಪ್ರತಿಭಟನೆ ಶೀಘ್ರ’

ಸಮರ್ಪಕ ಪರಿಹಾರಕ್ಕೆ ಬಾಲರಾಜ್ ಗುತ್ತೇದಾರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:02 IST
Last Updated 19 ಅಕ್ಟೋಬರ್ 2025, 6:02 IST
ಬಾಲರಾಜ್ ಗುತ್ತೇದಾರ
ಬಾಲರಾಜ್ ಗುತ್ತೇದಾರ   

ಕಲಬುರಗಿ: ‘ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆ ಹಾಗೂ ಪ್ರವಾಹದಿಂದ ಉಂಟಾದ ಬೆಳೆಹಾನಿಗೆ ಕೂಡಲೇ ಸಮರ್ಪಕ ಪರಿಹಾರಕ್ಕೆ ಒತ್ತಾಯಿಸಿ ಜೆಡಿಎಸ್‌ನಿಂದ ಪ್ರತಿಭಟನೆ ನಡೆಯಲಿದೆ’ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆಹಾನಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಹಾನಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿ 15 ದಿನ ಕಳೆದರೂ ಪರಿಹಾರ ಹಣ ಜನರ ಕೈಸೇರಿಲ್ಲ’ ಎಂದರು.

‘ನೆರೆಯ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಲ್ಲಿಯ ಜನರಿಗೆ ₹ 31,628 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿ ರೈತರ ನಿರೀಕ್ಷೆ ಹುಸಿಗೊಳಿಸಿ ದೀಪಾವಳಿಯ ಸಂಭ್ರಮ ಇಲ್ಲದಂತೆ ಮಾಡಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಪರಿಹಾರಕ್ಕೆ ಒತ್ತಾಯಿಸಿ ಅಕ್ಟೋಬರ್ 6ರಂದು ಪಕ್ಷದಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಸಿಎಂ ಅವರು ಪರಿಹಾರದ ಭರವಸೆ ನೀಡಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ತಕ್ಷಣ ಪರಿಹಾರ ನೀಡದಿದ್ದರೆ ಇದೇ ಅಕ್ಟೋಬರ್ 23ರಂದು ಪ್ರತಿಭಟನೆ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

ಪ್ರಿಯಾಂಕ್ ಅನಗತ್ಯ ಹೇಳಿಕೆ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲೆಯ ರೈತರಿಗೆ ಬೆಳೆಹಾನಿ ಪರಿಹಾರ ಮಂಜೂರು ಮಾಡಿಸುವ ಹೊಣೆಗಾರಿಗೆ ನಿಭಾಯಿಸದೇ ಆರ್‌ಎಸ್‌ಎಸ್‌ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ’ ಎಂದು ಬಾಲರಾಜ್ ಆರೋಪಿಸಿದರು.

‘ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪದ ಮೇಲೆ ಎಸ್‌ಐಟಿ ತನಿಖೆಗೆ ಆದೇಶ ನೀಡಿರುವ ರಾಜ್ಯ ಸರ್ಕಾರವು, ಕಲಬುರಗಿ ಉತ್ತರ ಕ್ಷೇತ್ರದಲ್ಲೂ ಆದ ಮತಗಳ್ಳತನ ಕುರಿತು ತನಿಖೆ ನಡೆಸಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬಿರಬಿಟ್ಟಿ, ಮಹಾಂತಪ್ಪ ಮದರಿ, ಚಂದು ಮೋರೆ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.