ADVERTISEMENT

ಕಲಬುರಗಿ: 3 ಲಕ್ಷದಷ್ಟು ಹೆಕ್ಟೇರ್‌ ಬೆಳೆ ‘ಮಳೆಪಾಲು’

ಸೆಪ್ಟೆಂಬರ್ ಮಳೆಗೆ ಮತ್ತಷ್ಟು ಹಿಗ್ಗಿದ ಹಾನಿ ಪ್ರಮಾಣ; ಸಂಕಷ್ಟದಲ್ಲಿ ಜಿಲ್ಲೆಯ ಅನ್ನದಾತರು

ಬಸೀರ ಅಹ್ಮದ್ ನಗಾರಿ
Published 7 ಅಕ್ಟೋಬರ್ 2025, 5:01 IST
Last Updated 7 ಅಕ್ಟೋಬರ್ 2025, 5:01 IST
ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಹತ್ತಿ ಹೊಲವೊಂದರಲ್ಲಿ ನೆರೆ ನೀರು ಹೊಕ್ಕಿದ ನೋಟ...
ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಹತ್ತಿ ಹೊಲವೊಂದರಲ್ಲಿ ನೆರೆ ನೀರು ಹೊಕ್ಕಿದ ನೋಟ...   

ಕಲಬುರಗಿ: ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ಅತಿವೃಷ್ಟಿಯಿಂದ ಬರೋಬ್ಬರಿ 2.98 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಇದರಲ್ಲಿ 2.97 ಲಕ್ಷ ಹೆಕ್ಟೇರ್‌ ಕೃಷಿ ಬೆಳೆಗಳಾದರೆ, 386 ಹೆಕ್ಟೇರ್‌ ತೋಟಗಾರಿಕಾ ಬೆಳೆಗಳು. ಇದು ಪ್ರಾಥಮಿಕ ವರದಿಯ ಲೆಕ್ಕಾಚಾರ. ಜಂಟಿ ಸಮೀಕ್ಷೆ ಇನ್ನೂ ಪ್ರಗತಿಯಲ್ಲಿದ್ದು ಹಾನಿ ಪ್ರಮಾಣ ಹೆಚ್ಚುವ ನಿರೀಕ್ಷೆಗಳಿವೆ. 

ಆಗಸ್ಟ್‌ನಲ್ಲಿ ಸುರಿದ ನಿರಂತರ ಮಳೆಗೆ 1.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದವು. ಆಗಲೇ ಒಟ್ಟು ₹ 90 ಕೋಟಿಗೂ ಹೆಚ್ಚು ಹಾನಿ ಅಂದಾಜಿಸಲಾಗಿತ್ತು.

ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ವಾಡಿಕೆಯಂತೆ 156 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, ಶೇ 69ರಷ್ಟು ಹೆಚ್ಚುವರಿಯೊಂದಿಗೆ ಭರ್ತಿ 263 ಮಿ.ಮೀ ಮಳೆಯಾಗಿತ್ತು. ಅದರಲ್ಲೂ ಕೊನೆಯ ಎರಡು ವಾರಗಳಲ್ಲಿ ಸುರಿದ 108 ಮಿ.ಮೀ ಮಳೆಯು ರೈತರ ಬೆಳೆಗಳನ್ನು ಆಪೋಶನ ಪಡೆದಿತ್ತು. ತೊಗರಿ, ಹೆಸರು, ಹತ್ತಿ, ಉದ್ದು ಬೆಳೆಗಳು ಅಪಾರ ಹಾನಿಗೀಡಾಗಿದ್ದವು.

ADVERTISEMENT

ಅದೇ ಪರಿಸ್ಥಿತಿ ಸೆಪ್ಟೆಂಬರ್‌ನಲ್ಲೂ ಮುಂದುವರಿಯಿತು. ಸೆಪ್ಟೆಂಬರ್‌ನಲ್ಲಿ ವಾಡಿಕೆಯಂತೆ 175 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಶೇ 63ರಷ್ಟು ಹೆಚ್ಚಳದೊಂದಿಗೆ ಒಟ್ಟು 285 ಮಿ.ಮೀ. ಮಳೆಯಾಯಿತು. ಜಮೀನುಗಳಲ್ಲಿ ನೀರು ನಿಂತು, ಅಲ್ಲಲ್ಲಿ ಹಸಿರಾಗಿದ್ದ ಬೆಳೆಗಳೂ ಹಾನಿಗೀಡಾಗಿ ರೈತರ ಸಂಕಷ್ಟ ಹೆಚ್ಚಿಸಿದೆ. ಪ್ರಮುಖವಾಗಿ ತೊಗರಿ ಹಾಗೂ ಹತ್ತಿ ಬೆಳೆಗೆ ಹೊಡೆತ ಬಿದ್ದಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ 51,850 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿತ್ತು. ಈ ಪೈಕಿ 25,797 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. ಬಿತ್ತನೆಯಾಗಿದ್ದ 30,935 ಹೆಕ್ಟೇರ್‌ಗಳ ಪೈಕಿ 8,105 ಹೆಕ್ಟೇರ್‌ ಪ್ರದೇಶದಲ್ಲಿನ ಉದ್ದು ಬೆಳೆ ಹಾಳಾಗಿದೆ.

ಜಿಲ್ಲೆಯ ರೈತರು ಈ ಬಾರಿ 5,94,191 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತಿದ್ದರು. ಆಗಸ್ಟ್‌ ಮಳೆಗೆ 58,319 ಹೆಕ್ಟೇರ್‌ ಪ್ರದೇಶದ ತೊಗರಿಗೆ ಹಾನಿಯಾಗಿತ್ತು. ಸೆಪ್ಟೆಂಬರ್‌ ಅತಿವೃಷ್ಟಿಗೆ ಈ ಹಾನಿ ಪ್ರಮಾಣವು 2,22,309ಗೆ ಹಿಗ್ಗಿದೆ. 

1,22,058 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಪೈಕಿ 36,896 ಹೆಕ್ಟೇರ್‌ ಪ್ರದೇಶದ ಹತ್ತಿ ಬೆಳೆ ನಾಶವಾಗಿದೆ. ಇದಲ್ಲದೇ, 3,070 ಹೆಕ್ಟೇರ್‌ನಷ್ಟು ಸೋಯಾಬಿನ್‌ ಬೆಳೆಯೂ ನಿರಂತರ ಮಳೆಗೆ ಸಿಲುಕಿ ನಲುಗಿದೆ. ಇನ್ನುಳಿದಂತೆ ನದಿ–ಹಳ್ಳಗಳ ತೀರ ಪ್ರದೇಶದಲ್ಲಿ ಬೆಳೆದಿರುವ 1,279 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಕಬ್ಬಿಗೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗಿದೆ.

ತೋಟಗಾರಿಕೆ ಬೆಳೆಗಳಿಗೂ ಅಪಾರ ಹಾನಿ:

ಇದಲ್ಲದೇ ಜಿಲ್ಲೆಯಲ್ಲಿ ಜೂನ್‌ 1ರಿಂದ ಅಕ್ಟೋಬರ್ 4ರ ಅವಧಿಯಲ್ಲಿ ಬರೋಬ್ಬರಿ 386 ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಈ ಪೈಕಿ ಪಪ್ಪಾಯ ಹಾಗೂ ಈರುಳ್ಳಿ ಬೆಳೆಯೇ ಹೆಚ್ಚು.

ಭೀಮಾ ನದಿ ಪ್ರವಾಹದಿಂದ ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದ ಬಳಿಯ ಜಮೀನಿನಲ್ಲಿ ತೊಗರಿ ಬೆಳೆ ಹಾಳಾಗಿರುವ ದೃಶ್ಯ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಪ್ರಾಥಮಿಕ ಅಂದಾಜಿನಂತೆ ಜಿಲ್ಲೆಯಲ್ಲಿ ಸದ್ಯ 2.97 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಇನ್ನೊಂದು ವಾರದಲ್ಲಿ ಜಂಟಿ ಸಮೀಕ್ಷೆ ಮುಗಿಯಲಿದ್ದು ನಿಖರ ಹಾನಿ ತಿಳಿಯಲಿದೆ
ಸಮದ್ ಪಟೇಲ್‌ ಕಲಬುರಗಿ ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.