
ಕಾರಟಗಿ ತಾಲ್ಲೂಕಿನ ವಿವಿಧೆಡೆ ಮಳೆ, ಗಾಳಿಗೆ ನೆಲಕ್ಕೊರಗಿರುವ ಕಟಾವು ಹಂತದಲ್ಲಿಯ ಭತ್ತದ ಬೆಳೆ
ಕಾರಟಗಿ: ಒಂದು ತಿಂಗಳಲ್ಲೇ ಎರಡು ಬಾರಿ ಸುರಿದ ಮಳೆಗೆ ತಾಲ್ಲೂಕಿನಾದ್ಯಂತ ಅಪಾರ ಪ್ರಮಾಣ ಭತ್ತದ ಬೆಳೆ ಹಾನಿಗೀಡಾಗಿದ್ದು, ರೈತರು ಸಂಕಷ್ಟ ಎದುರಿಸಬೇಕಾಗಿದೆ.
ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ನಡೆಸಿದ ಸರ್ವೆಯಲ್ಲಿ 30 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಇದರಲ್ಲಿ ಕಾರಟಗಿ ಭಾಗದ 145 ಹಾಗೂ ಸಿದ್ದಾಪುರ ಭಾಗದ 1,289 ಹೆಕ್ಟೇರ್ ಸೇರಿ ಒಟ್ಟು 1, 434 ಹೆಕ್ಟೇರ್ ಪ್ರದೇಶದಲ್ಲಿಯ ಭತ್ತದ ಬೆಳೆ ಮಳೆ, ಗಾಳಿಗೆ ಹಾನಿಗೀಡಾಗಿದೆ. ಕೆಲವು ಕಡೆ ಭತ್ತ
ನೆಲಕ್ಕೊರಗಿದೆ.
ಒಂದೆಡೆ ನೈಸರ್ಗಿಕ ವಿಕೋಪ, ಇನ್ನೊಂದೆಡೆ ಅದರ ಹೊಡೆತದಿಂದ ಬೆಳೆಯ ಇಳುವರಿ ಬಂದಿದ್ದರೂ ಕೈ ಸೇರದಾಗಿದೆ. ನೆಲಕ್ಕೊರಗಿದ ಭತ್ತದ ಕೆಲ ಪ್ರಮಾಣವು ನೆಲದ ಪಾಲಾಗಿದೆ. ಮಲಗಿದ್ದ ಬೆಳೆಯನ್ನು ಕಟ್ಟಿ ನಿಲ್ಲಿಸಲಾಗಿದ್ದರೂ ಕಟಾವು ಮಾಡುವಾಗ ಭತ್ತ ನೆಲಕ್ಕೆ ಉದುರುತ್ತಿದೆ. ಕಟಾವು ಯಂತ್ರ ಒಂದು ತಾಸಿಗೆ 4 ಟ್ಯಾಂಕ್ ಕಟಾವು ಮಾಡಲಾಗದೇ, 2 ಟ್ಯಾಂಕ್‌ಗೆ ಸೀಮಿತವಾಗಿದೆ. ಇದರಿಂದ ಕಟಾವಿಗೆ ರೈತರು ದುಪ್ಪಟ್ಟು ಹಣ ವ್ಯಯಿಸಬೇಕಿದೆ ಎಂದು ರೈತರು ನೋವು ತೊಂಡಿಕೊಂಡರು.
ಕಟಾವು ಯಂತ್ರ ಜಮೀನಿನವರೆಗೆ ತೆರಳಲು ಸಾಧ್ಯವಾಗದ ಕಾರಣ ಕಟಾವು ಕಾರ್ಯ ನೆನಗುದಿಗೆ ಬೀಳುತ್ತಿದೆ. ಕಟಾವು ಮಾಡಿದ ಭತ್ತವನ್ನು ಒಣಗಲು ಹಾಕಿದರೆ ಮೋಡ ಕವಿದ ವಾತಾವರಣ ಕಾಡುತ್ತಿದೆ.
ಹೀಗೆ ಅನೇಕ ಸಂಕಷ್ಟಗಳ ಸರಮಾಲೆ ಎದುರಿಸಿ ರೈತ ಕೃಷಿ ಚಟುವಟಿಕೆ ಮಾಡಬೇಕಿದೆ. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದೇ ಇರುವುದರಿಂದ ಸಂಕಷ್ಟಗಳ ಸರಮಾಲೆಯು ಬೆಳೆಯುತ್ತಲೇ ಇದೆ ಎನ್ನುತ್ತಾರೆ ಪನ್ನಾಪುರದ
ರೈತ ಸಿದ್ದಪ್ಪ.
ಇದಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಇಲ್ಲ ಎಂದು ಈಗಾಗಲೇ ಐಸಿಸಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿರುವುದು ಕೂಡ ರೈತರ ಆತಂಕ ಹೆಚ್ಚಿಸಿದೆ.
ಹವಾಮಾನ ವೈಪರೀತ್ಯದಿಂದ ಬೆಳೆಸಿದ ಬೆಳೆ ರೈತರ ಕೈ ಸೇರದಾಗಿದೆ. ಭತ್ತದ ಶ್ರೀಮಂತಿಕೆಯ ಈ ಭಾಗದಲ್ಲಿ ಭತ್ತ ಬೆಳೆದವರು ಕೈ ಸುಟ್ಟುಕೊಂಡು ಮಾಡಿದ ಸಾಲ ತೀರಿಸುವುದು ಹೇಗೆ? ಎಂಬ ಆತಂಕ ಕಾಡುತ್ತಿದೆ. ಪ್ರಸ್ತುತ ವರ್ಷವು ತುಂಗಭದ್ರೆಯ ಸೆರಗಿನ ಹಚ್ಚ ಹಸಿರಿನ ಸೆರಗಿನನಲ್ಲಿ ಭತ್ತಕ್ಕೆ ಮಳೆಯಷ್ಟೇ ಅಲ್ಲ ಕೊಳವೆ ರೋಗ ಸಹಿತ ಅನೇಕ ರೋಗಗಳು ಸರದಿಯಂತೆ ಬಂದು ರೈತರಿಗೆ ಕಾಡುತ್ತಿದೆ. ಇನ್ನೊಂದೆಡೆ ಪ್ರಕೃತಿಯ ವಕ್ರದೃಷ್ಟಿಗೆ ರೈತರು ನಲುಗಿ ಹೋಗುವಂತಾಗಿದೆ ಎಂದು ಚಳ್ಳೂರಿನ ರೈತ ಸತ್ಯಪ್ರಸಾದ ಹಾಗೂ ಪಟ್ಟಣದ ರೈತ ಪಾಮಣ್ಣ ಗಿಣಿವಾರ.
ಎರಡನೇ ಬೆಳೆಗೆ ನೀರು ನೀಡಲೇಬೇಕು, ನಷ್ಟಕ್ಕೀಡಾದ ಭತ್ತಕ್ಕೆ ತಕ್ಷಣ ಪರಿಹಾರವನ್ನು ನಷ್ಟದ ಆಧಾರದ ಮೇಲೆ ನೀಡಬೇಕು. ನೀರು ನಿಲುಗಡೆ ಸಮಯದಲ್ಲಿ ತುಂಗಭದ್ರಾ ಜಲಾಶಯಕ್ಕೆ ಗೇಟ್‌ಗಳನ್ನು ಅಳವಡಿಸಬೇಕು ಎಂದು ತಾಲ್ಲೂಕಿನ ರೈತರು ಆಗ್ರಹಿಸಿದ್ದಾರೆ.
ಕೃಷಿಯ ಬಗ್ಗೆ ರೈತರಾದ ಉದಯ, ಸಣ್ಣ ಲಿಂಗಪ್ಪ, ಬಸವರಾಜ್ ಪ್ರತಿಕ್ರಿಯಿಸಿ ‘ಸರ್ಕಾರದ ಚಿಂತನೆ ಇಲ್ಲದ ನಡವಳಿಕೆ ಹಾಗೂ ಇನ್ನೊಂಡೆದೆ ಪ್ರಕೃತಿಯ ಮುನಿಸಿನಿಂದ ಬಲವಾದ ಏಟಿನಿಂದಾಗಿ ಕೃಷಿಯೇ ಬೇಡವೆನಿಸುತ್ತಿದೆ ಎಂದು ಬೇಸರ
ಹೊರಹಾಕಿದರು.
ಕಾರಟಗಿ ತಾಲ್ಲೂಕಿನಾದ್ಯಂತ ಕಂದಾಯ, ಕೃಷಿ ಇಲಾಖೆಗಳು ಜಂಟಿ ಸರ್ವೆ ನಡೆಸಿದ್ದು 1,434 ಹೆಕ್ಟೇರ್ ಭತ್ತದ ಬೆಳೆ ಹಾನಿಗೀಡಾಗಿದೆ. ಗ್ರಾಮ, ಕ್ಯಾಂಪ್‌ಗಳವಾರು ಸಮಗ್ರ ವರದಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುತ್ತದೆಎಂ. ಕುಮಾರಸ್ವಾಮಿ, ತಹಶೀಲ್ದಾರ್, ಕಾರಟಗಿ
ಹೆಚ್ಚು ಭತ್ತ, ಮೆಕ್ಕೆಜೋಳ, ತೊಗರಿ ಬೆಳೆಯಲಾಗಿದೆ. ಭತ್ತ ಹಾನಿ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಸರ್ವೆ ಮಾಡಿ ಮೇಲಧಿಕಾರಿಗಳಿಗೆ ವರದಿ ಕಳಿಸಲಾಗಿದೆಎಂ. ಕುಮಾರಸ್ವಾಮಿ, ತಹಶೀಲ್ದಾರ್, ಕಾರಟಗಿ
ಎಕರೆಗೆ ಸುಮಾರು 10 ಚೀಲದಷ್ಟು ಭತ್ತದ ಬೆಳೆ ನೆಲದ ಪಾಲಾಗಿದೆ. ಎಕರೆಗೆ ₹50 ಸಾವಿರ ಖರ್ಚು ಮಾಡಿದ್ದೇವೆ. ಎರಡು ಬಾರಿ ಬೆಳೆ ಹಾನಿಯಾಗಿದ್ದರೂರಿಹಾರ ನೀಡಲು ಸರ್ಕಾರ ಮೀನಮೇಷ ಮಾಡುತ್ತಿದೆನಾರಾಯಣ ಪ ಈಡಿಗೇರ ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ
ರೈತರು ಭಾರಿ ಸಂಕಷ್ಟ ಎದುರಿಸಿ ಬೆಳೆ ಪಡೆಯಬೇಕಿದೆ. ಎಕರೆಗೆ ಅರ್ಧ ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಸರ್ಕಾರ ಎಕರೆಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡಿದರೆ ರೈತರು ಉಳಿಯುತ್ತಾರೆ. ಕಾಟಾಚಾರದ ಪರಿಹಾರದಿಂದ ಪ್ರಯೋಜನವಿಲ್ಲಬಿ. ಮಲ್ಲಿಕಾರ್ಜುನಸ್ವಾಮಿ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.