ADVERTISEMENT

ಚಿತ್ತಾಪುರ: ಅತಿಯಾದ ಮಳೆಗೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:18 IST
Last Updated 26 ಜುಲೈ 2021, 3:18 IST
ಚಿತ್ತಾಪುರ ತಾಲ್ಲೂಕಿನ ಮರಗೋಳ ಗ್ರಾಮದ ಹೊಲದಲ್ಲಿನ ಹೆಸರು ಬೆಳೆ ಮಳೆ ನೀರಿಗೆ ಬಾಡುತ್ತಿದೆ
ಚಿತ್ತಾಪುರ ತಾಲ್ಲೂಕಿನ ಮರಗೋಳ ಗ್ರಾಮದ ಹೊಲದಲ್ಲಿನ ಹೆಸರು ಬೆಳೆ ಮಳೆ ನೀರಿಗೆ ಬಾಡುತ್ತಿದೆ   

ಚಿತ್ತಾಪುರ: ಸತತವಾಗಿ ಸುರಿದ ಮಳೆಗೆ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಹಾನಿಗೀಡಾಗಿದ್ದು, ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ಬಿಟ್ಟು ಬಿಡದೆ ಸುರಿದ ಮಳೆಗೆ ಜಮೀನುಗಳಲ್ಲಿ ನೀರು ಹರಿದಾಡಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತು ಬೆಳೆಗಳು ಒಣಗುತ್ತಿವೆ. ಶನಿವಾರದಿಂದ ಬಿಡುವು ನೀಡಿದೆ. ಸಮೃದ್ಧವಾಗಿ ಬೆಳೆದು ನಿಂತಿದ್ದ ಬೆಳೆಗಳನ್ನು ಕಂಡು ಹರ್ಷಗೊಂಡಿದ್ದ ರೈತರನ್ನು ನಿರಂತರ ಮಳೆ ನಿರಾಸೆಗೊಳಿಸಿದೆ.

ಮುಂಗಾರು ಹಂಗಾಮಿನಲ್ಲಿ ಯಥೇಚ್ಛವಾಗಿ ಹೆಸರು ಮತ್ತು ಉದ್ದು ಬಿತ್ತನೆ ಮಾಡಲಾಗಿದೆ. ಆರಂಭಿಕ ಮಳೆಗೆ ಬೆಳೆಗಳು ನಳನಳಿಸುತ್ತಿದ್ದವು. ಉತ್ತಮ ಬೆಳೆ ಕಂಡ ರೈತರು ಸಂತಸಗೊಂಡಿದ್ದರು. ಈ ತಿಂಗಳ ಮಧ್ಯದಲ್ಲಿ ಎಡಬಿಡದೆ ಬಿದ್ದ ಮಳೆಗೆ ಕೃಷಿಕರು
ಬೇಸರಪಡುತ್ತಿದ್ದಾರೆ.

ADVERTISEMENT

ಬಹುತೇಕ ನದಿ, ಹಳ್ಳಕೊಳ್ಳಗಳು ತುಂಬಿ ಪಕ್ಕದ ಹೊಲಗಳಿಗೆ ನೀರು ನುಗಿತು. ಇದರಿಂದ ನೂರಾರು ಎಕರೆಯಲ್ಲಿನ ಹೆಸರು, ಉದ್ದು, ತೊಗರಿ ಬೆಳೆಗಳಿಗೆ ಹಾನಿಯಾಯಿತು. ಮಳೆಯ ಹೊಡೆತಕ್ಕೆ ಸಿಲುಕಿದ ತೊಗರಿಯ ಬೆಳವಣಿಗೆ ಕುಂಠಿತಗೊಂಡಿದೆ. ಬಿತ್ತನೆಗೆ ಮಾಡಿದ್ದ ಖರ್ಚು ಮಣ್ಣು ಪಾಲಿಗಿದೆ.ಹೂ ಬೀಡುವ ವೇಳೆಯಲ್ಲೇ ಹೆಸರು ಮತ್ತು ಉದ್ದು ಬೆಳೆಗಳು ಹೆಚ್ಚಿದ ತೇವಾಂಶಕ್ಕೆ ಬಾಡುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂಬುದು ರೈತರ ಅಳಲು.

***
ಬೆಳೆ ಹಾನಿ ಸಮೀಕ್ಷೆ ನಡೆಸಲು ಜಿಲ್ಲಾಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಗ್ರಾಮವಾರು ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು.
-ಉಮಾಕಾಂತ ಹಳ್ಳೆ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.