ADVERTISEMENT

ಕೇಂದ್ರೀಯ ವಿಶ್ವವಿದ್ಯಾಲಯ: ಅರ್ಜಿ ಸಲ್ಲಿಕೆ ಗೊಂದಲ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 14:27 IST
Last Updated 24 ಜೂನ್ 2019, 14:27 IST
ಪ್ರೊ.ಎಚ್.ಎಂ.ಮಹೇಶ್ವರಯ್ಯ
ಪ್ರೊ.ಎಚ್.ಎಂ.ಮಹೇಶ್ವರಯ್ಯ   

ಕಲಬುರ್ಗಿ: ‘ಕಡಗಂಚಿಯಲ್ಲಿರುವಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕರ ನೇಮಕಾತಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ನಿಗದಿತ ದಿನಾಂಕಕ್ಕಿಂತ ಮುನ್ನವೇ ಮುಕ್ತಾಯ ಮಾಡಿದ್ದಾರೆ’ ಎಂದು ಹಲವು ಅಭ್ಯರ್ಥಿಗಳು ಆರೋಪಿಸಿದರು.

ವಿಶ್ವವಿದ್ಯಾಲಯವು ವಿವಿಧ ವಿಭಾಗಗಳ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಆನ್‌ಲೈನ್‌ನಲ್ಲಿ ಜೂನ್‌ 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಮೂಲ ದಾಖಲೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಜೂನ್‌ 24ರವರೆಗೆ ಅವಕಾಶ ನೀಡಿತ್ತು.

‘ಮೂಲ ಅಧಿಸೂಚನೆಯಲ್ಲಿ ಪ್ರಕಟವಾದ ದಿನಾಂಕದಂತೆ ಸೋಮವಾರ ವಿಶ್ವವಿದ್ಯಾಲಯಕ್ಕೆ ತೆರಳಿದ ನಮಗೆ ಆಘಾತ ಕಾದಿತ್ತು. ದಾಖಲೆ ಸಲ್ಲಿಸುವ ಅವಧಿ ಜೂನ್‌ 20ಕ್ಕೇ ಮುಗಿದು ಹೋಗಿದೆ ಎಂದು ಸಿಬ್ಬಂದಿ ಉತ್ತರಿಸಿದರು. ಹೀಗಾಗಿ, ಮುಂದಿನ ಆಯ್ಕೆ ಪ್ರಕ್ರಿಯೆಗಳಿಂದ ಸುಮಾರು 40ಕ್ಕೂ ಅಧಿಕ ಅಭ್ಯರ್ಥಿಗಳು ದೂರ ಉಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅಂತಿಮ ದಿನಾಂಕವನ್ನು ಜೂನ್‌ 24ರ ಬದಲು ಜೂನ್‌ 20ಕ್ಕೆ ನಿಗದಿ ಮಾಡಿದ ಬಗ್ಗೆ ನಮಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ನಮ್ಮ ಮೊಬೈಲ್‌ ಸಂಖ್ಯೆ, ಇ–ಮೇಲ್‌ ವಿಳಾಸ, ಅಂಚೆ ವಿಳಾಸ ಎಲ್ಲವೂ ಅರ್ಜಿಯಲ್ಲಿತ್ತು. ಅದೆಲ್ಲ ಆಗದಿದ್ದರೂ ಪರವಾಗಿಲ್ಲ. ಪತ್ರಿಕೆಯಲ್ಲಾದರೂ ಪ್ರಕಟಣೆ ನೀಡಬಹುದಿತ್ತು. ಈ ಬಗ್ಗೆ ಪ್ರಶ್ನಿಸಿದರೆ ವೆಬ್‌ಸೈಟ್‌ ನೋಡಬೇಕಿತ್ತು ಎಂದು ಸಿಬ್ಬಂದಿ ಹೇಳಿದರು. ನಮ್ಮ ಅರ್ಜಿಗಳನ್ನೂ ಪರಿಗಣಿಸಬೇಕು’ ಎಂದು ಬಳ್ಳಾರಿ ಜಿಲ್ಲೆಯಿಂದ ಬಂದ ಅಭ್ಯರ್ಥಿಯೊಬ್ಬರು ಮನವಿ ಮಾಡಿದರು.

‘ನಾನು ಇಲ್ಲಿಯವರೆಗೆ ಏಳೆಂಟು ವಿಶ್ವವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಅಲ್ಲಿ ದಾಖಲೆ ಸಲ್ಲಿಸುವ ದಿನಾಂಕವನ್ನು ಮುಂದೂಡಿದ್ದಾರೆಯೇ ಹೊರತು, ಅವಧಿಗೆ ಮುನ್ನ ಅರ್ಜಿ ಪಡೆಯುವುದನ್ನು ಸ್ಥಗಿತಗೊಳಿಸಿರಲಿಲ್ಲ. ವಿ.ವಿ.ಯ ಈ ನಡೆ ಅಚ್ಚರಿ ಮೂಡಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.