ADVERTISEMENT

ಸಿಯುಕೆ ವಿವಾದ: ಫೆ. 10ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 5:14 IST
Last Updated 26 ಜನವರಿ 2021, 5:14 IST

ಕಲಬುರ್ಗಿ: ಕಡಗಂಚಿಯಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಪ್ರೊ. ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರು ಕರ್ನಾಟಕ ಹೈಕೋರ್ಟ್‌ ಕಲಬುರ್ಗಿ ಪೀಠಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ಫೆಬ್ರುವರಿ 10ಕ್ಕೆ ಮುಂದೂಡಿದೆ.

‘ನನ್ನ ಅವಧಿ ಮುಕ್ತಾಯವಾಗುವ ಮುನ್ನವೇ ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರು ತಮಗೆ ಅಧಿಕಾರ ಇಲ್ಲದಿದ್ದರೂ ಕರ್ತವ್ಯದಿಂದ ಬಿಡುಗಡೆ ಮಾಡಿ ಮಾತೃ ವಿ.ವಿ.ಗೆ ಹೋಗುವಂತೆ ಒತ್ತಡ ಹೇರಿದ್ದಾರೆ. ಇದು ಕಾನೂನು ಬಾಹಿರ. ಆದೇಶವನ್ನು ತಡೆ ಹಿಡಿಯುವಂತೆ ನಿರ್ದೇಶನ ನೀಡಬೇಕು’ ಎಂದು ಪ್ರೊ. ಪಟೇಲ್ ತಮ್ಮ ವಕೀಲ ಗುರುರಾಜ ಕಕ್ಕೇರಿ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು.

ಪ್ರೊ. ಅಳಗವಾಡಿ ಪರ ಹಾಜರಾದ ವಕೀಲ ಪಿ. ವಿಲಾಸಕುಮಾರ್ ಅವರಿಗೆ ಕುಲಸಚಿವರ ಬಿಡುಗಡೆ ಸಂಬಂಧ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಮುಂದಕ್ಕೆ ಹಾಕಿತು.

ADVERTISEMENT

‘ನನ್ನ ಕಕ್ಷಿದಾರ ಪ್ರೊ. ಮುಷ್ತಾಕ್ ಅಹ್ಮದ್ ಅವರ ಪ್ರಕರಣವನ್ನು ಆದ್ಯತೆ ಮೇರೆಗೆ ಆದಷ್ಟು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದೇವೆ’ ಎಂದು ಗುರುರಾಜ ಕಕ್ಕೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.