ADVERTISEMENT

ಮನಗೆದ್ದ ‘ಸಾಂಸ್ಕೃತಿಕ ವೈಭವ’

2 ದಿನಗಳ ಕಾರ್ಯಕ್ರಮಕ್ಕೆ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 2:04 IST
Last Updated 1 ಆಗಸ್ಟ್ 2021, 2:04 IST
ಕಲಬುರ್ಗಿಯಲ್ಲಿ ಶನಿವಾರ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಜ್ಯೋತಿ ಬಂಜಾರ ಜಾನಪದ ತಂಡದ ಕಲಾವಿದೆಯರು ಕಂಡಿದ್ದು ಹೀಗೆ –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರ್ಗಿಯಲ್ಲಿ ಶನಿವಾರ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಜ್ಯೋತಿ ಬಂಜಾರ ಜಾನಪದ ತಂಡದ ಕಲಾವಿದೆಯರು ಕಂಡಿದ್ದು ಹೀಗೆ –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌   

ಕಲಬುರ್ಗಿ: ನೋಡುಗರ ಕಣ್ಮನ ತಣಿಸಿದ ಭರತನಾಟ್ಯ, ಕುಳಿತಲ್ಲಿಯೇ ಹೆಜ್ಜೆ ಹಾಕುವಂತೆ ಮಾಡಿದ ಡೊಳ್ಳು ಕುಣಿತ, ಲಂಬಾಣಿ ಸಮುದಾಯದ ಬದುಕು ಬಿಂಬಿಸಿದ ಬಂಜಾರ ಜಾನಪದ ನೃತ್ಯ, ಇಂಪಾದ ಅಲೆಯಲ್ಲಿ ತೇಲುವಂತೆ ಮಾಡಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ..

ಚಿತ್ತಾಪುರ ತಾಲ್ಲೂಕಿನ ಮತ್ತಿಮಡು ಗ್ರಾಮದ ‘ಲಲಿತಾ ಕಲಾ ಸೇವಾ ಸಂಸ್ಥೆ’ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ2 ದಿನಗಳ ಕಾಲ ನಡೆಯುತ್ತಿರುವ ‘ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಶನಿವಾರ ಕಂಡುಬಂದ ದೃಶ್ಯಗಳಿವು.

ಬೆಳಿಗ್ಗೆ 11ರಿಂದ ರಾತ್ರಿ 9 ಗಂಟೆವರೆಗೂ ವಿವಿಧ ಕಲಾ ತಂಡಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಳಿಸಿದವು. ಸಭಾಂಗಣದಲ್ಲಿ ತುಂಬಿದ್ದ ಕಲಾಸಕ್ತರು ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತ್ಸಾಹ ತುಂಬಿದರು.

ADVERTISEMENT

ವರ್ಷ ಡಿ.ಸಾಗನೂರ ಅವರಿಂದ ಭರತನಾಟ್ಯ ಏಕವ್ಯಕ್ತಿ ನೃತ್ಯ ಹಾಗೂ ನೃತ್ಯಪ್ರಿಯಾ ಕಲಾಕೇಂದ್ರದ ಐಶ್ವರ್ಯ ಕುಲಕರ್ಣಿ ಹಾಗೂ ತಂಡದಿಂದ ಸಾಮೂಹಿಕ ಭರತನಾಟ್ಯದ ಮೂಲಕ ‘ಸಾಂಸ್ಕೃತಿಕ ವೈಭವಕ್ಕೆ’ ಚಾಲನೆ ನೀಡಲಾಯಿತು.

ಕಲಾವಿದ ಕುಮಾರ್ ಮರಡೂರ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಕೇಳುಗರನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು. ಡಾ.ಪಂಚಾಕ್ಷರಿ ಹಿರೇಮಠ ಅವರು ಹಾರ್ಮೋನಿಯಂ ಹಾಗೂ ಡಾ.ರವಿಕಿರಣ ನಾಕೋಡ ತಬಲಾ ಸಾಥ್ ನೀಡಿದರು.

ಕಲಾವಿದರಾದ ಡಾ.ವಿಜಯಕುಮಾರ ಪಾಟೀಲ, ಬಸವರಾಜ ವಂದಲಿ, ವೀರೇಶ ಮಳಲಿ, ಡಾ.ಸಿದ್ರಾಮಪ್ಪ ಪಾಟೀಲ ಕುಕನೂರ, ಶಂಕರ ಬಿ.ಹೂಗಾರ ಅವರು ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಸಭಾಂಗಣದಲ್ಲಿ ಸಂಗೀತದ ಅಲೆ ಎಬ್ಬಿಸಿದವು.

ಜ್ಯೋತಿ ತಂಡದಿಂದ ಬಂಜಾರ ಜಾನಪದ ನೃತ್ಯ, ಭೀಮರಾಯ ಭಜಂತ್ರಿ ತಂಡದಿಂದ ಚಿಟ್ಟಿ ಹಲವಗಿ, ಸಂಜು ಬರಗಾಲಿ ಕುಸನೂರ ತಂಡದಿಂದ ಡೊಳ್ಳು ಕುಣಿತ, ಗುರುನಾಥ ಸುತಾರ ತಂಡದಿಂದ ಪುರವಂತಿಕೆ, ಬಲಭೀಮೆ ಮದ್ರೆ ತಂಡದಿಂದ ಗೊಂದಳಿ ನೃತ್ಯ, ಮಳೆಪ್ಪ ತಂಡದಿಂದ ಹೆಜ್ಜೆ ಮೇಳ ನಡೆದವು.

ಉದ್ಘಾಟನಾ ಕಾರ್ಯಕ್ರಮ: ಸಾಂಸ್ಕೃತಿಕ ಕಲರವಕ್ಕೂ ಮುನ್ನಶಾಸಕ ಬಸವರಾಜ ಮತ್ತಿಮೂಡ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಉದ್ಯಮಿ ಮಾರುತಿ ಐನಾಪೂರ ಮಲಕೂಡ ಅತಿಥಿಗಳಾಗಿ ಭಾಗವಹಿಸಿದ್ದರು. ಕಲಾವಿದ ಬಂಡಾಯಸ್ವಾಮಿ
ನಿರೂಪಿಸಿದರು.

ಆಗಸ್ಟ್ 1ರಂದು ನಡೆಯುವ ಕಾರ್ಯಕ್ರಮಗಳು

ಭಾವನಾ ಪಿ. ಅವರಾದ ಹಾಗೂ ಆಕಾಂಕ್ಷಾ ಪುರಾಣಿಕ ಅವರಿಂದ ಭರತನಾಟ್ಯ. ವಿದೂಷಿ ರೇಣುಕಾ ನಾಕೋಡ, ಪಂ.ರಘುನಾಥ ನಾಕೋಡ, ಡಾ.ರವಿಕಿರಣ ನಾಕೋಡ, ಡಾ.ಜಯದೇವಿ ಜಂಗಮಶೆಟ್ಟಿ, ಬಸವರಾಜ ಭಂಟನೂರು ಹಾಗೂ ಯಮುನೇಶ ಯಾಳಗಿ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ. ಜೊತೆಗೆ ವಿವಿಧ ಕಲಾವಿದರಿಂದ ಸುಗಮ ಸಂಗೀತ, ಕಥಾಕೀರ್ತನ, ಜಾನಪದ, ವಚನ ಗಾಯನ, ತತ್ವಪದ ಕಾರ್ಯಕ್ರಮಗಳು ಭಾನುವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.