ADVERTISEMENT

ಸೈಬರ್‌ ಅಪರಾಧ ವಿಚಾರಸಂಕಿರಣ

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತ್ಯೇಕ ಸೈಬರ್‌ ಕೇಂದ್ರ ನಿರ್ಮಾಣಕ್ಕೆ ಅಡಿಗಲ್ಲು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 12:14 IST
Last Updated 6 ಸೆಪ್ಟೆಂಬರ್ 2019, 12:14 IST
ಡಾ.ಭೀಮಾಶಂಕರ ಬಿಲಗುಂದಿ
ಡಾ.ಭೀಮಾಶಂಕರ ಬಿಲಗುಂದಿ   

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯು ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರತ್ಯೇಕ ‘ಸೈಬರ್‌ ಸುರಕ್ಷತೆ ಮತ್ತು ವಿಧಿವಿಜ್ಞಾನ ಕೇಂದ್ರ’ ತೆರೆಯಲು ಮುಂದಾಗಿದ್ದು, ಸೆ. 7ರಂದು ಬೆಳಿಗ್ಗೆ 9.30ಕ್ಕೆ ಇದರ ಅಡಿಗಲ್ಲು ಸಮಾರಂಭ ನಡೆಯಲಿದೆ.

‘ಸೈಬರ್‌ ಲೋಕದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ನಮ್ಮ ಭವಿಷ್ಯದ ದಿನಗಳು ಆನ್‌ಲೈನ್‌ನಲ್ಲೆ ಹೆಚ್ಚು ಅವಲಂಬಿತವಾಗಲಿವೆ. ದೈನಂದಿನ ಚಿಲ್ಲರೆ ವ್ಯವಹಾರಗಳಿಂದ ಹಿಡಿದು ಬ್ಯಾಂಕಿಂಗ್‌ ವ್ಯವಹಾರಗಳಿಗೂ ಸೈಬರ್‌ ಅನಿವಾರ್ಯವಾಗಲಿದೆ. ಈ ಅವಶ್ಯಕತೆ ಮನಗಂಡು ಎಚ್‌ಕೆಇ ಸಂಸ್ಥೆ ಈಗಿನಿಂದಲೇ ಸೈಬರ್ ಲೋಕದ ಬಗ್ಗೆ ಶಿಕ್ಷಣ ಹಾಗೂ ಅರಿವು ನೀಡಲು ಮುಂದಾಗಿದೆ. ಈ ಕೇಂದ್ರದಿಂದಲೇ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನೂ ಆರಂಭಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ತಿಳಿಸಿದ್ದಾರೆ.

‘ಈ ವಿಷಯವಾಗಿ ಅರಿವು ಮೂಡಿಸಲು ಸೆ. 7ರಂದು ಒಂದು ದಿನದ ವಿಚಾರ ಸಂಕಿರಣ ಕೂಡ ಆಯೋಜಿಸಲಾಗಿದೆ. ಬೆಂಗಳೂರಿನ ಹೆಚ್ಚುವರಿ ಪೋಲಿಸ್‌ ಉಪ ಜನರಲ್ ಸಂಜಯ್ ಸಹಾಯ ಹಾಗೂ ಬೆಂಗಳೂರಿನ ಫೆಲ್ಕ್ಸಿಟ್ರಾನ್‌ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಹಿರೇಮಠ ಅತಿಥಿಗಳಾಗಿ ಆಗಮಿಸುತ್ತಿದ್ದು, ಸೈಬರ್ ಅಪರಾಧ ಕುರಿತು ಭಾಷಣವನ್ನು ಮಂಡಿಸಲಿದ್ದಾರೆ. ಸುಮಾರು 700 ಜನರು ಭಾಗವಹಿಸುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ಡಾ.ಶಿವಾನಂದ ಎಸ್. ದೇವರಮನಿ, ಕಾರ್ಯದರ್ಶಿ ಡಾ.ನಾಗೇಂದ್ರ ಮಂಠಾಳೆ, ಜಂಟಿ ಕಾರ್ಯದರ್ಶಿ ಗಂಗಾಧರ ಡಿ. ಎಲಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆ ವಿವಿಧ ಅಂಗ ಸಂಸ್ಥೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡ ಭಾಗವಹಿಸಲಿದ್ದಾರೆ. ನಗರದ ವೈದ್ಯರು, ವಕೀಲರು, ನ್ಯಾಯಾಧೀಶರು, ಪೊಲೀಸರು, ಕೈಗಾರಿಕೋದ್ಯಮಿಗಳು ಹಾಗೂ ವ್ಯವಹಾರಸ್ಥರನ್ನು ಕೂಡ ಆಹ್ವಾನಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ಪ್ರಾಚಾರ್ಯ ಡಾ. ಎಸ್. ಎಸ್. ಹೆಬ್ಬಾಳ, ಡಾ.ಸುವರ್ಣಾ ನಂದ್ಯಾಳ, ಡಾ.ಭಾರತಿ ಹರಸುರ ಅವರು ಕೇಂದ್ರದ ಸಂಯೋಜಕರಾಗಿ ಕೆಲಸ ಮಾಡುವರು. ಸಂಚಾಲಕರಾಗಿ ಡಾ. ವಿಶ್ವನಾಥ ಬುರಕಪಳ್ಳಿ, ಡಾ.ಸುಜಾತಾ ತರದಾಳ, ಡಾ.ಶ್ರೀದೇವಿ ಸೋಮಾ ಅವರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.