ADVERTISEMENT

ಕಲಬುರಗಿ: ಏರುಗತಿಯಲ್ಲಿ ‘ಸೈಬರ್‌ ವಂಚನೆ’

ಜಿಲ್ಲೆಯಲ್ಲಿ 11 ತಿಂಗಳಲ್ಲಿ ₹10.80 ಕೋಟಿ ದೋಚಿದ ಸೈಬರ್‌ ವಂಚಕರು

ಬಸೀರ ಅಹ್ಮದ್ ನಗಾರಿ
Published 17 ಡಿಸೆಂಬರ್ 2025, 7:10 IST
Last Updated 17 ಡಿಸೆಂಬರ್ 2025, 7:10 IST
..
..   

ಕಲಬುರಗಿ: ಅವರೊಬ್ಬರು ನಿವೃತ್ತ ಸರ್ಕಾರಿ ಶಿಕ್ಷಕ. ಮಕ್ಕಳ ಮದುವೆಗೆ ಯೋಜಿಸಿದ್ದರು. ಚಿನ್ನ ಖರೀದಿಗಾಗಿ ಆನ್‌ಲೈನ್‌ನಲ್ಲಿ ದರ ಪರಿಶೀಲಿಸುತ್ತಿದ್ದರು. ಹೀಗೆ ಒಮ್ಮೆ ಪರಿಶೀಲಿಸುವಾಗ ಅವರಿಗೊಂದು ಕರೆ ಬಂತು. ಅದರಲ್ಲಿ ಮಹಿಳೆಯೊಬ್ಬರು ‘ತಾನು ಚಿನ್ನದ ಹೋಲ್‌ಸೇಲ್‌ ವ್ಯಾಪಾರಿ’ ಎಂದು ಪರಿಚಯಿಸಿಕೊಂಡರು. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಹಿವಾಟು ಕುದುರಿಸಿದರು. ನಿವೃತ್ತ ಶಿಕ್ಷಕ ಬ್ಯಾಂಕ್‌ಗೆ ಹೋಗಿ ಆರ್‌ಟಿಜಿಎಸ್‌ ಮೂಲಕ ₹31 ಲಕ್ಷ ಕಟ್ಟಿಯೂ ಬಂದರು. ಅಲ್ಲಿಗೆ ಆ ವಹಿವಾಟು ಪೂರ್ಣ; ವಂಚನೆಯೂ ಸಂಪನ್ನ...!

ಇದು ಸೈಬರ್‌ ವಂಚನೆ ಒಂದು ಬಗೆಯಷ್ಟೇ. ಆನ್‌ಲೈನ್‌ನಲ್ಲಿ ಪ್ರಾಡಕ್ಟ್‌ಗಳಿಗೆ ರಿವ್ಯೂ ನೀಡುವ ನೆಪದಲ್ಲಿ ವಂಚನೆ, ಎಪಿಕೆ ಫೈಲ್‌ ಕಳುಹಿಸಿ ಪಾಸ್‌ವರ್ಡ್‌ಗಳನ್ನು ಬೇಕಾದ ನಂಬರ್‌ಗೆ ಕಳುಹಿಸಿ ಬ್ಯಾಂಕ್‌ ಖಾತೆಯಿಂದ ಹಣ ಎಗರಿಸುವುದು, ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಬೆದರಿಸಿ ದೋಚುವುದು, ಷೇರುಪೇಟೆಯಲ್ಲಿ ಹೂಡಿಕೆಯಲ್ಲಿ ದಿಢೀರ್ ಲಾಭ ಗಳಿಕೆ ಆಮಿಷ, ಒಟಿಪಿ ಪಡೆದು ವಂಚನೆ, ಬ್ಯಾಂಕ್‌ ಅಧಿಕಾರಿಗಳ ಹೆಸರಲ್ಲಿ ಲಿಂಕ್‌ ಕಳಿಸಿ ‘ಬ್ಯಾಂಕ್‌’ ಖಾತೆ ಖಾಲಿ ಮಾಡುವುದೆಲ್ಲವೂ ಸೈಬರ್‌ ವಂಚನೆಗೆ ಭಿನ್ನ ಮುಖಗಳು.

ಎಲ್ಲರ ಕೈಗೂ ಮೊಬೈಲ್‌ ಫೋನ್‌ ಬಂದು ಡಿಜಿಟಲ್‌ ಕ್ರಾಂತಿಯಾಗುತ್ತಿರುವ ಹೊತ್ತಿನಲ್ಲಿ ಸೈಬರ್‌ ವಂಚನೆಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ದಿಢೀರ್‌ ಶ್ರೀಮಂತರಾಗುವ ಆಸೆ, ಅಧಿಕ ಲಾಭದ ಆಮಿಷಕ್ಕೆ ಖೆಡ್ಡಾಕ್ಕೆ ‘ವಂಚನೆ’ಯ ಗಾಳಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಬಹುತೇಕ ಅಕ್ಷರವಂತರೇ ತುಂಬಿರುವ ಕಲಬುರಗಿ ನಗರದಲ್ಲಿ ಒಂದೇ ತಿಂಗಳ ಅವಧಿಯಲ್ಲಿ ₹2.50 ಕೋಟಿಗಳಷ್ಟು ಸೈಬರ್‌ ವಂಚಕರು ದೋಚಿದ್ದಾರೆ.

ADVERTISEMENT

ಕಲಬುರಗಿ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2023ರಲ್ಲಿ 31 ಪ್ರಕರಣಗಳಲ್ಲಿ ವಂಚನೆಗೆ ಒಳಗಾಗಿದ್ದ ಸಂತ್ರಸ್ತರು ₹1.10 ಕೋಟಿ ಕಳೆದುಕೊಂಡಿದ್ದರು. 2024ರಲ್ಲಿ 33 ಪ್ರಕರಣಗಳಲ್ಲಿ ಕಲಬುರಗಿ ನಾಗರಿಕರು ₹4.89 ಕೋಟಿ ಕಳೆದುಕೊಂಡಿದ್ದಾರೆ. 2025ರಲ್ಲಿ ಡಿಸೆಂಬರ್‌ 15ರ ತನಕ 51 ಪ್ರಕರಣಗಳು ವರದಿಯಾಗಿದ್ದು, ಸೈಬರ್‌ ವಂಚಕರು ಬರೋಬ್ಬರಿ ₹10.80 ಕೋಟಿ ದೋಚಿದ್ದಾರೆ.

‘ಸೈಬರ್‌ ಕ್ರೈಂ ವಿಶ್ವ ವ್ಯಾಪಿಯಾಗಿದ್ದು, ಅದೊಂದು ಸಂಘಟಿತ ಅಪರಾಧವಾಗಿ ಬೆಳೆಯುತ್ತಿದೆ. ಬಹುತೇಕ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಕೆಳಹಂತದ ಆರೋಪಿಗಳಷ್ಟೇ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. 2ನೇ ಹಂತದ ಆರೋಪಿಗಳು ದುರ್ಲಬವಾಗಿ ಸಿಗುತ್ತಾರೆ. 3ನೇ ಹಂತದ ಆರೋಪಿಗಳಂತೂ ಅಗೋಚರವಾಗಿಯೇ ಉಳಿಯುತ್ತಿದ್ದಾರೆ’ ಎಂಬುದು ಹಿರಿಯ ಪೊಲೀಸ್‌ ಅಧಿಕಾರಿಗಳ ಅಂಬೋಣ.

‘ರಕ್ಷಣೆಗೆ ಜಾಗೃತಿಯ ಮದ್ದು’

‘ಸಂತ್ರಸ್ತರ ಪಾಲ್ಗೊಳ್ಳುವಿಕೆ ಇಲ್ಲದೇ ಸೈಬರ್‌ ಅಪರಾಧ ಸಂಭವಿಸಲ್ಲ. ಹೀಗಾಗಿ ಎಪಿಕೆ ಫೈಲ್‌ ಓಪನ್ ಮಾಡುವುದು ಅನುಮಾನಾಸ್ಪದ ಲಿಂಕ್‌ ಒತ್ತುವುದು ಒಟಿಪಿ ಹಂಚಿಕೊಳ್ಳುವುದು ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭದ ಆಮಿಷಕ್ಕೆ ಒಳಗಾಗುವುದನ್ನು ಬಿಟ್ಟರೆ ನಾಗರಿಕರು ಸೈಬರ್‌ ವಂಚನೆಯಿಂದ ಪಾರಾಗಬಹುದು. ಜೊತೆಗೆ ಸಂದೇಹಾಸ್ಪದ ಕರೆಗಳು ಬಂದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕು’ ಎನ್ನುತ್ತಾರೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ‘ಸೈಬರ್‌ ವಂಚನೆ ಪ್ರಕರಣಗಳಲ್ಲೂ ಗೋಲ್ಡನ್‌ ಅವರ್‌ ಮುಖ್ಯವಾದದ್ದು. ಒಂದೊಮ್ಮೆ ನಾಗರಿಕರು ಸೈಬರ್‌ ವಂಚನೆಯ ಸಂತ್ರಸ್ತರಾದರೆ ಕೂಡಲೇ 1930ಗೆ ಕರೆ ಮಾಡಿ ಮಾಹಿತಿ ಕೊಡಬೇಕು. ತ್ವರಿತವಾಗಿ ಮಾಹಿತಿ ಕೊಟ್ಟರೆ ಕಳೆದುಕೊಂಡ ದುಡ್ಡು ಜಪ್ತಿಯ ಸಾಧ್ಯತೆಗಳು ಅಧಿಕ’ ಎಂದರು.

ಭೇದಿಸಿದ್ದು ಹತ್ತೇ ಪ್ರಕರಣ

ನವನವೀನ ತಂತ್ರಗಳು ವೈವಿಧ್ಯಮಯ ವಿಧಾನಗಳ ಆಮಿಷಗಳ ಮೂಲಕ ನಾಗರಿಕರಿಂದ ದೋಚುವಲ್ಲಿ ಸೈಬರ್‌ ವಂಚಕರು ನಿಷ್ಣಾತರು. ನಾಗರಿಕರು ಎಡವಿದ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್‌ ಖಾತೆಯೇ ಬರಿದಾಗಿರುತ್ತದೆ. ಇಂಥ ವಂಚಕರಿಂದ ಜನರು ಕಳೆದುಕೊಂಡ ದುಡ್ಡು ಜಪ್ತಿ ಮಾಡಿಕೊಳ್ಳುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸೈಬರ್‌ ವಂಚನೆಯ 115 ಪ್ರಕರಣಗಳು ಕಲಬುರಗಿಯ ಸೆನ್‌ (ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ) ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇವುಗಳಲ್ಲಿ 10 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಒಟ್ಟು ₹2.86 ಕೋಟಿ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2023ರಲ್ಲಿ ದಾಖಲಾದ ಒಟ್ಟು 31 ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಭೇದಿಸಿ ₹20.86 ಲಕ್ಷ ಜಪ್ತಿ ಮಾಡಿಕೊಂಡಿದ್ದರು. 2024ರಲ್ಲಿ 33 ಪ್ರಕರಣಗಳಲ್ಲಿ ಒಂದೇ ಪ್ರಕರಣ ಭೇದಿಸಿ ₹89.38 ಲಕ್ಷ ವಶಕ್ಕೆ ಪಡೆಯಲಾಗಿತ್ತು. ಪ್ರಸಕ್ತ 2025ರಲ್ಲಿ 51 ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ಮಾತ್ರವೇ ₹1.76 ಕೋಟಿ ಜಪ್ತಿ ಮಾಡಲು ಸಾಧ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.