ಕಲಬುರಗಿ: ‘ಹಕ್ಕಿಯು ಹಾರುತಿದೆ ನೋಡಿದಿರಾ?’ ಇದು ದ.ರಾ.ಬೇಂದ್ರೆಯವರ ‘ಗರಿ’ ಕವನ ಸಂಕಲನದಲ್ಲಿನ ಪದ್ಯದ ಜನಪ್ರಿಯ ಸಾಲುಗಳು...
ಕರಿನರೆ ಬಣ್ಣದ ಪುಚ್ಚಗಳುಂಟು, ಬಿಳಿ–ಹೊಳೆ ಬಣ್ಣದ ಗರಿ–ಗರಿಯುಂಟು, ರೆಕ್ಕೆಗಳೆರಡೂ ಪಕ್ಕದಲುಂಟು, ಹಕ್ಕಿ ಹಾರುತಿದೆ ನೋಡಿದಿರಾ... ಹೀಗೆ ಸಾಗುವ ಕವನ ನೂರಾರು ಪಕ್ಷಿಗಳನ್ನು ಕಣ್ಣ ಮುಂದೆ ಕಟ್ಟಿಕೊಡುತ್ತದೆ. ಆದರೆ, ನಗರೀಕರಣದ ಪ್ರಭಾವ, ಮೊಬೈಲ್ ಟವರ್ ರೇಡಿಯೇಷನ್‌ನಿಂದ ಇಂದಿನ ಮಕ್ಕಳಿಗೆ ಹಕ್ಕಿ ಇರಲಿ, ಅದರ ಪುಕ್ಕವೂ ನೋಡಲು ಸಿಗುತ್ತಿಲ್ಲ.
ಹಾಗಂತ ಕಲಬುರಗಿ ಜನತೆ ಪಕ್ಷಿಗಳನ್ನು ನೋಡಲು ಚಿಂತಿಸಬೇಕಿಲ್ಲ. ಗುಲಬರ್ಗಾ ವಿವಿ ಆವರಣಕ್ಕೆ ಹೋದರೆ ಸಾಕು ಹಕ್ಕಿಗಳ ಚಿಲಿಪಿಲಿ ನಿನಾದ ಕೇಳಬಹುದು, ಬಣ್ಣಬಣ್ಣದ ಪಕ್ಷಿಗಳನ್ನು ಕಾಣಬಹುದಾಗಿದೆ.
ಮನೆಯ ಮುಂದೆ ಮರವಿದ್ದರೂ ಕಾಣದ ಪಕ್ಷಿಗಳು.. ಅಲ್ಲೇಕೆ ಹೆಚ್ಚಿವೆ ಎಂದು ನೀವು ಯೋಚಿಸುತ್ತಿರಬಹುದು. ಅಲ್ಲಿ ಪಕ್ಷಿಗಳ ರಾಗ ಕೇವಲ ಮಳೆಗಾಲಕ್ಕೆ ಸೀಮಿತವಲ್ಲ. ಈ ಕಡುಬೇಸಿಗೆಯಲ್ಲೂ ಅಲ್ಲಿ ಪಕ್ಷಿಗಳು ಕಂಡುಬರುತ್ತವೆ. ಅದಕ್ಕೆ ಕಾರಣ ವಿಶ್ವವಿದ್ಯಾಲಯದ ಪ್ರಾಣಿವಿಜ್ಞಾನ ವಿಭಾಗದ ವಿದ್ಯಾರ್ಥಿಗಳು. ಅವರು ತಮ್ಮ ಕಾಲೇಜಿನ ಆವರಣದಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿ ಶುಲ್ಕದ ಜತೆಗೆ ಸ್ವಲ್ಪ ಹಣವನ್ನು ಪ್ರಾಣಿ, ಪಕ್ಷಿಗಳ ಸೇವೆಗಾಗಿಯೇ ನೀಡುತ್ತಾರೆ. ಅದರಲ್ಲಿ ಸುಮಾರು 200 ಟಿನ್ ಡಬ್ಬಿಗಳನ್ನು ತಂದು ಅವುಗಳಲ್ಲಿ ಧಾನ್ಯ ಹಾಕಿ ವಿವಿಯ ಪ್ರತಿಯೊಂದು ವಿಭಾಗಗಳ ಮುಂದೆ ಮತ್ತು ಆವರಣದಲ್ಲಿ ಗಿಡಗಳ ಟೊಂಗೆಗಳಿಗೆ ನೇತು ಹಾಕಿದ್ದಾರೆ. ತಿಂಗಳಿಗೆ 10 ಕೆಜಿ ಧಾನ್ಯ ಮಾರುಕಟ್ಟೆಯಿಂದ ತಂದು ಹಾಕುತ್ತಾರೆ. ಜತೆಗೆ ನೀರಿನ ವ್ಯವಸ್ಥೆ ಮಾಡುತ್ತಾರೆ.
ನಿತ್ಯ ಸಂಜೆ ಮತ್ತು ಬೆಳಿಗ್ಗೆ ನೀರಿನ ತೊಟ್ಟಿಗಳು, ಧಾನ್ಯಗಳ ಡಬ್ಬಿ ವೀಕ್ಷಣೆ ಮಾಡುತ್ತಾರೆ. ಖಾಲಿಯಾಗಿದ್ದರೆ ಮತ್ತೆ ಹಾಕುತ್ತಾರೆ. ಇದರಿಂದಾಗಿಯೇ ಗುಬ್ಬಚ್ಚಿ, ಮರಕುಟಿಗ, ಗೊರವಂಕ, ಪಾರಿವಾಳ, ಗಿಳಿವಿಂಡು, ಬುಲ್‌ಬುಲ್ ತರಹದ ವೈವಿಧ್ಯಮಯವಾದ ಪಕ್ಷಿ ಸಂಕುಲ ಇಲ್ಲಿ ಕಾಣಸಿಗುತ್ತವೆ. ಇನ್ನು ಅಳಿಲುಗಳಿಗಂತೂ ಲೆಕ್ಕವೇ ಇಲ್ಲ.
ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರೆ, ಸಿಮೆಂಟ್‌ನ ಸಣ್ಣ, ಸಣ್ಣ ಹೊಂಡಗಳನ್ನು ಮಾಡಿ ನೀರು ಇಂಗದಂತೆ ಮಾಡಿದರೆ ಇಲ್ಲಿನ ಜೀವಿಗಳಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಜನರೂ ಕೂಡ ಬೇಸಿಗೆ ಕಳೆಯುವವರೆಗೆ ತಮ್ಮ ಮಾಳಿಗೆ ಮೇಲೆ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳ ವ್ಯವಸ್ಥೆ ಮಾಡಿ ಪಕ್ಷಿ ಸಂಕುಲ ರಕ್ಷಿಸಬೇಕುಸಂತೋಷಕುಮಾರ ಎಸ್.ಪಿ ವಿದ್ಯಾರ್ಥಿ
ಮಳೆಗಾಲದಲ್ಲಿ ನಮ್ಮ ಕ್ಯಾಂಪಸ್ ಹಸಿರಿನಿಂದ ಕೂಡಿರುತ್ತದೆ. ಹಾಗೆಯೇ ಬಿಸಿಲಿನ ಬೇಗೆಯಲ್ಲಿಯೂ ಹಕ್ಕಿಗಳ ನಾದ ಕೇಳಬೇಕು ಎಂಬುದು ನಮ್ಮ ಆಶಯಮಲ್ಲಿಕಾರ್ಜುನ ಎಸ್.ಪಾಟೀಲ್ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.