ADVERTISEMENT

ಇವಿಎಂ ಬಳಿಕ ವಿ.ವಿ ಪ್ಯಾಟ್ ಮತ ಎಣಿಕೆ

‘ಗುಲಬರ್ಗಾ’ ಲೋಕಸಭೆ, ಚಿಂಚೋಳಿ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 11:46 IST
Last Updated 22 ಮೇ 2019, 11:46 IST
ಗುಲಬರ್ಗಾ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಚುನಾವಣಾ ಅಧಿಕಾರಿ ಆರ್.ವೆಂಕಟೇಶಕುಮಾರ್ ಸಿದ್ಧತೆಗಳನ್ನು ಪರಿಶೀಲಿಸಿದರು
ಗುಲಬರ್ಗಾ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಚುನಾವಣಾ ಅಧಿಕಾರಿ ಆರ್.ವೆಂಕಟೇಶಕುಮಾರ್ ಸಿದ್ಧತೆಗಳನ್ನು ಪರಿಶೀಲಿಸಿದರು   

ಕಲಬುರ್ಗಿ: ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮೇ 23ರಂದು ಗುಲಬರ್ಗಾ ಲೋಕಸಭೆ ಹಾಗೂ ಚಿಂಚೋಳಿ ಉಪ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಿಗ್ಗೆ 8 ಗಂಟೆಗೆ ಅಂಚೆಪತ್ರ, ಆ ಬಳಿಕ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿನ ಮತಗಳ ಎಣಿಕೆ ಮಾಡಲಾಗುವುದು. ನಂತರ ಒಂದು ವಿಧಾನಸಭಾ ಕ್ಷೇತ್ರದ ಐದು ಮತ ಖಾತರಿ ಯಂತ್ರ (ವಿ.ವಿ ಪ್ಯಾಟ್‌)ಗಳಲ್ಲಿನ ಮತಗಳನ್ನು ಎಣಿಕೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಚಿಂಚೋಳಿ ಉಪ ಚುನಾವಣೆಯ ಮತ ಎಣಿಕೆಯು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯಲಿದೆ. ‘ಗುಲಬರ್ಗಾ’ ಲೋಕಸಭೆ ಹಾಗೂ ಚಿಂಚೋಳಿ ಉಪ ಚುನಾವಣೆಯ ಮತ ಎಣಿಕೆ ಏಕಕಾಲಕ್ಕೆ ಆರಂಭಗೊಳ್ಳಲಿದೆ. ಈಗಾಗಲೇ ಅಣಕು ಮತ ಎಣಿಕೆ ಕೂಡ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮೂರು ಹಂತದ ಭದ್ರತೆ: ‘ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. 130 ಅರೆ ಸೇನಾ ಪಡೆ ಸಿಬ್ಬಂದಿ, 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 2 ಸಾವಿರ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮತ ಎಣಿಕೆ ಕೇಂದ್ರದ 100 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

ಮೆರವಣಿಗೆ ನಿಷೇಧ: ‘ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಮೆರವಣಿಗೆ, ವಿಜಯೋತ್ಸವವನ್ನು ನಿಷೇಧಿಸಲಾಗಿದೆ. ಸುವಿಧಾ ಆ್ಯಪ್‌ನಲ್ಲಿ ಮತ ಎಣಿಕೆಯ ಅಪ್‌ಡೇಟ್ ಸಿಗಲಿದ್ದು, ಪ್ರತಿ ಸುತ್ತಿನ ಮತ ಎಣಿಕೆ ಬಳಿಕ ಈ ಆ್ಯಪ್‌ನಿಂದ ಮಾಹಿತಿ ಪಡೆಯಬಹುದಾಗಿದೆ’ ಎಂದರು.

ಮತ ಎಣಿಕೆ ವೀಕ್ಷಕರಾದ ಬ್ರಿಟೀಷಚಂದ್ರ ಬರ್ಮನ್, ಸೋನಾಲಿ ಪಾಂಕ್ಷೆ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.