ADVERTISEMENT

ಇಎಸ್ಐಸಿ ಆಸ್ಪತ್ರೆಯ ಸಂಪೂರ್ಣ ಬಳಕೆಗೆ ಡಿಸಿಎಂ ಕಾರಜೋಳ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 6:00 IST
Last Updated 24 ಏಪ್ರಿಲ್ 2021, 6:00 IST
ವರ್ಚುವಲ್ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ
ವರ್ಚುವಲ್ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ   

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರು ಗತಿಯಲ್ಲಿ ಇರುವುದರಿಂದ ನಗರದಲ್ಲಿರುವ ಇಎಸ್ಐಸಿ ಆಸ್ಪತ್ರೆಯ ಸಂಪೂರ್ಣ ಉಪಯೋಗ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ‌ಕಾರಜೋಳ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಸೂಚನೆ ‌ನೀಡಿದರು.

ಕಲಬುರ್ಗಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೋವಿಡ್ ಹಾಗೂ ಕುಡಿಯುವ ನೀರಿ‌ನ ಪರಿಸ್ಥಿತಿ ಕುರಿತು ಶನಿವಾರ ಬೆಳಿಗ್ಗೆ ವರ್ಚುವಲ್ ಸಭೆ ನಡೆಸಿದ ಕಾರಜೋಳ, ಇಎಸ್ಐಸಿ, ಕಿದ್ವಾಯಿ ಸ್ಮಾರಕ ಗಂಥಿ, ಜಯದೇವ ‌ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಿ ಎಂದರು.

ಇಎಸ್ಐಸಿಯಲ್ಲಿ ಆಕ್ಸಿಜನ್ ಸಿಲಿಂಡರ್ ಘಟಕ ಇಲ್ಲದ್ದರಿಂದ ಆಕ್ಸಿಜನ್ ಮೇಲೆ ಅವಲಂಬಿತರಾದ ರೋಗಿಗಳನ್ನು ಉಳಿಸಲು ಸಮಸ್ಯೆಯಾಗುತ್ತದೆ‌ ಎಂದು ಜ್ಯೋತ್ಸ್ನಾ ಸಚಿವರ ಗಮನಕ್ಕೆ ‌ತಂದರು.

ADVERTISEMENT

ಹೆಚ್ಚು ಜಂಬೊ ಆಕ್ಸಿಜನ್ ಸಿಲಿಂಡರ್ ಗಳನ್ನು ಇಎಸ್ಐಸಿಗೆ ಕಳಿಸಿಕೊಡಿ ಎಂದು ‌ಸಚಿವರು ಸಲಹೆ ನೀಡಿದರು.

ಅಜೀಮ್ ಪ್ರೇಮ್ ಜಿ ಪ್ರತಿಷ್ಠಾನದಿಂದ ಮೂರು ವಾರಗಳಲ್ಲಿ ಇಎಸ್ಐಸಿಯಲ್ಲಿ ಸಿಲಿಂಡರ್ ಘಟಕ ಅಳವಡಿಕೆಯಾಗಲಿದ್ದು, ಅಲ್ಲಿಯವರೆಗೆ ಪೈಪ್ ಲೈನ್ ಬದಲು ಆಕ್ಸಿಜನ್ ಸಿಲಿಂಡರ್ ಮೇಲೆ ರೋಗಿಗಳಿಗೆ ಚಿಕಿತ್ಸೆ ‌ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕಳೆದ ಮಳೆಗಾಲದಲ್ಲಿ ಸಾಕಷ್ಟು ‌ಮಳೆಯಾಗಿರುವುದರಿಂದ ಬೋರ್ ವೆಲ್ ಕೊರೆಸುವ ಅಗತ್ಯವಿಲ್ಲ. ದುರಸ್ತಿಯನ್ನಷ್ಟೇ ಮಾಡಿ. ಅನಗತ್ಯವಾಗಿ ನೀರಿನ ಟ್ಯಾಂಕರ್ ಬಾಡಿಗೆಗೆ ಪಡೆಯಬೇಡಿ‌. ಹಳ್ಳಗಳ ಒತ್ತುವರಿ ತೆರವುಗೊಳಿಸಿ ಎಂದು ಕಾರಜೋಳ ಅವರು ಕಲಬುರ್ಗಿ ಹಾಗೂ ಬಾಗಲಕೋಟೆ ಸಿಇಓಗಳಿಗೆ ಸೂಚನೆ ನೀಡಿದರು.

ನೆರೆ ಪರಿಹಾರಕ್ಕೆ ಬಿಡುಗೆಯಾದ ಹಣವನ್ನು ಕೋವಿಡ್ ‌ಸಂಬಂಧಿ ಕೆಲಸಗಳಿಗೆ ಬಳಸಿಕೊಂಡು ನಂತರ ಸರ್ಕಾರಕ್ಕೆ ಮರುಹೊಂದಾಣಿಕೆ ಮಾಡಿರುವ ಕುರಿತು ವರದಿ ಕಳಿಸಿಕೊಡಿ ಎಂದು ಕಾರಜೋಳ ಅವರು ಜ್ಯೋತ್ಸ್ನಾ ಅವರಿಗೆ ‌ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.