ADVERTISEMENT

ಕಲಬುರಗಿ: ಮಠದ ದಾರಿಯಲ್ಲಿ ಒಳಚರಂಡಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:17 IST
Last Updated 11 ಮೇ 2025, 16:17 IST
ಕಲಬುರಗಿಯ ಬ್ರಹ್ಮಪುರ ಬಡಾವಣೆಯ ಶಾಸ್ತ್ರಿ ಚೌಕ್‍ನಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದ ಆವರಣದ ಪ್ರವೇಶದ್ವಾರದ ಮುಂದೆ ಒಳಚರಂಡಿ ಪೈಪ್‍ಲೈನ್ ಒಡೆದು ಗಲೀಜು ನೀರು ನಿಂತಿದೆ
ಕಲಬುರಗಿಯ ಬ್ರಹ್ಮಪುರ ಬಡಾವಣೆಯ ಶಾಸ್ತ್ರಿ ಚೌಕ್‍ನಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದ ಆವರಣದ ಪ್ರವೇಶದ್ವಾರದ ಮುಂದೆ ಒಳಚರಂಡಿ ಪೈಪ್‍ಲೈನ್ ಒಡೆದು ಗಲೀಜು ನೀರು ನಿಂತಿದೆ   

ಕಲಬುರಗಿ: ಇಲ್ಲಿನ ವಾರ್ಡ್ ನಂ.38ರ ವ್ಯಾಪ್ತಿಯ ಶರಣಬಸವೇಶ್ವರ ದೇವಸ್ಥಾನ ಹಿಂಭಾಗದ ಬ್ರಹ್ಮಪುರ ಬಡಾವಣೆಯ ಶಾಸ್ತ್ರಿ ಚೌಕ್‍ನಲ್ಲಿರುವ ವಿಶ್ವಕರ್ಮ ಏಕದಂಡಗಿ ಮಠದ ಆವರಣದ ಪ್ರವೇಶದ್ವಾರದ ಮುಂದೆ ಒಂದು ತಿಂಗಳಿನಿಂದ ಒಳಚರಂಡಿ ಪೈಪ್‍ಲೈನ್ ಒಡೆದಿದ್ದರಿಂದ ಭಕ್ತರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

ಒಳಚರಂಡಿಯ ಗಲೀಜು ಗಬ್ಬೆದ್ದು ದುರ್ವಾಸನೆ ಬೀರುತ್ತಿದೆ. ಮಠಕ್ಕೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿತ್ಯ ಬರುವ ನೂರಾರು ಭಕ್ತರಿಗೆ ಸಮಸ್ಯೆ ಎದುರಾಗಿದೆ. ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆಯ ಸ್ಥಳೀಯ ಸದಸ್ಯ ಸಹ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಭಕ್ತರು ದೂರುತ್ತಾರೆ.

ಮಠದಿಂದ ಕೈಗೊಳ್ಳುವ ಧಾರ್ಮಿಕ ಕಾರ್ಯಗಳಿಗೂ ಅಡ್ಡಿ ಉಂಟಾಗಿದೆ. ಕೆಲ ವರ್ಷಗಳ ಹಿಂದೆ ಬಡಾವಣೆಯಲ್ಲಿ ನಡೆದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಒಳಚರಂಡಿ ವ್ಯವಸ್ಥೆ ದುರಸ್ತಿ ಸರಿಯಾಗಿ ನಡೆದಿಲ್ಲ ಎನ್ನುವುದು ಸ್ಥಳೀಯ ನಾಗರಿಕರ ಆರೋಪವಾಗಿದೆ. ಮಠ– ಮಂದಿರಗಳ ಸುತ್ತಮುತ್ತ ಸ್ವಚ್ಛತೆ, ಶುಚಿತ್ವ ಕಾಪಾಡಬೇಕಾದ ಜವಾಬ್ದಾರಿಯನ್ನು ಪಾಲಿಕೆಯವರು ಮರೆತಿದ್ದಾರೆ. ಶೀಘ್ರದಲ್ಲಿ ಒಳಚರಂಡಿ ದುರಸ್ತಿ ಮಾಡಬೇಕು ಎಂದು ಶ್ರೀಮಠದ ಭಕ್ತ ರಾಜಕುಮಾರ ವಿಶ್ವಕರ್ಮ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.