ಯಡ್ರಾಮಿ: ಯಡ್ರಾಮಿ ತಾಲ್ಲೂಕು ನಿರ್ಮಾಣವಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಆದರೆ ಈವರೆಗೂ ತಹಶೀಲ್ದಾರ್ ಕಚೇರಿಗಾಗಿ ಹೊಸ ಕಟ್ಟಡ ಮಂಜೂರಾಗಿಲ್ಲ ಹಾಗೂ ಕಚೇರಿಗೆ ತೆರಳಲು ಉತ್ತಮ ರಸ್ತೆಯಿಲ್ಲ. ಹೀಗಾಗಿ ಹೊಸ ಕಟ್ಟಡ ಹಾಗೂ ರಸ್ತೆ ಮಂಜೂರುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಕಚೇರಿಗೆ ಬರುವ ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಪ್ರಮಾಣ ಪತ್ರಗಳಿಗಾಗಿ ಬರುವ ಸಾರ್ವಜನಿಕರು ಕೆಸರಿನಲ್ಲೇ ನಡೆದುಕೊಂಡು ಬರಬೇಕಿದೆ. ಮಳೆ ಬಂದರೆ ತಹಶೀಲ್ದಾರ್ ಕಚೇರಿಗೆ ಹೋಗಿಬರುವುದಕ್ಕೆ ಹರಸಾಹಸ ಪಡುವಂತಾಗಿದೆ.
ಕಟ್ಟ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆ ಬಂದರೆ ಕೆಲವು ಕೊಠಡಿಗಳು ಸೋರುತ್ತವೆ. ಇಂತಹ ಶಿಥಲಾವಸ್ಥೆಯಲ್ಲಿರುವ ಕಚೇರಿಯಲ್ಲಿಯೇ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಾರೆ. ಇಲ್ಲಿನ ತಹಶೀಲ್ದಾರ್ ಸರ್ಕಾರಕ್ಕೆ ಹೊಸ ಕಟ್ಟಡಕ್ಕೆ ಮಂಜೂರಾತಿಗೆ ಪತ್ರ ಬರೆಯಲಾಗಿದೆ. ಆದರೆ ಈವರೆಗೂ ಮಂಜೂರಾಗಿಲ್ಲ. ಇದು ಸಾರ್ವಜನಿಕರ ಜೀವ ನುಂಗುವ ಕಟ್ಟಡವಾಗಿ ಬದಲಾಗುತ್ತಿದೆ. ಒಂದು ವೇಳೆ ಕಟ್ಟಡ ಶಿಥಲಾವಸ್ಥೆಯಿಂದ ಬಿದ್ದರೆ ಅಮಾಯಕರ ಜೀವ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಯಡ್ರಾಮಿ ತಾಲ್ಲೂಕು ನಿರ್ಮಾಣವಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಆದರೆ ತಹಶೀಲ್ದಾರ್ ಕಚೇರಿ ಕಟ್ಟಡ ಇಲ್ಲದಿರುವುದು ಬೇಸರ ಸಂಗತಿಯಾಗಿದೆ. ನಾವು ಶಾಸಕರ ಗಮನಕ್ಕೆ ತಂದಿದ್ದೇವೆ. ಸರಿಯಾದ ಕಚೇರಿಗಳಿಲ್ಲ. ಎಲ್ಲದಕ್ಕೂ ಇನ್ನೂ ಜೇವರ್ಗಿಗೆ ತೆರಳಬೇಕಾಗಿದೆ ಎಂದು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.