ADVERTISEMENT

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಸಚಿವಾಲಯ; ಆಗ್ರಹ

ಹೈದರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ; ಚರ್ಚಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 8:54 IST
Last Updated 6 ಆಗಸ್ಟ್ 2018, 8:54 IST
ಕಲಬುರ್ಗಿಯ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚರ್ಚಾಗೋಷ್ಠಿಯಲ್ಲಿ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿದರು
ಕಲಬುರ್ಗಿಯ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚರ್ಚಾಗೋಷ್ಠಿಯಲ್ಲಿ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿದರು   

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಎಚ್‌ಕೆಆರ್‌ಡಿ)ಪ್ರತ್ಯೇಕ ಸಚಿವಾಲಯ ಸ್ಥಾನ ನೀಡಬೇಕು. ಈ ಭಾಗದವನ್ನು ಸಚಿವರನ್ನಾಗಿ ನೇಮಕ ಮಾಡಬೇಕು’ ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಚ್‌ಕೆಸಿಸಿಐ) ಪದಾಧಿಕಾರಿಗಳು ಆಗ್ರಹಿಸಿದರು.

ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ‘ಹೈದರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಮತ್ತು ಎಚ್‌ಕೆಆರ್‌ಡಿಬಿ ಕಾರ್ಯ ನಿರ್ವಹಣೆಯಲ್ಲಿ ಲೋಪಗಳು’ ಕುರಿತು ಸೋಮವಾರ ಏರ್ಪಡಿಸಿದ್ದ ಚರ್ಚಾಗೋಷ್ಠಿಯಲ್ಲಿ ಅವರು ಈ ಬೇಡಿಕೆಯನ್ನು ಮಂಡಿಸಿದರು.

‘371 (ಜೆ) ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಹಿಂದಿನ ಸರ್ಕಾರದಲ್ಲಿ ಎಚ್.ಕೆ.ಪಾಟೀಲ ಅವರನ್ನು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷರನ್ನಾಗಿ ಹಾಗೂ ಕೆ.ಲೋಕನಾಥ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಅವರಿಂದ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಲಿಲ್ಲ. ಆದ್ದರಿಂದ ಪ್ರತ್ಯೇಕ ಸಚಿವಾಲಯ ಮಾಡಬೇಕು ಮತ್ತು ಈ ಭಾಗದವರನ್ನೇ ಸಚಿವರನ್ನಾಗಿ ನೇಮಕ ಮಾಡಬೇಕು’ ಎಂದು ಪುನರುಚ್ಚರಿಸಿದರು.

ADVERTISEMENT

‘ಮಂಡಳಿಗೆ ಪೂರ್ಣ ಪ್ರಮಾಣ ಸಿಬ್ಬಂದಿ ನೇಮಕ ಮಾಡಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಪ್ರತಿ ಜಿಲ್ಲೆಗೆ ಒಬ್ಬರು ಕಾರ್ಯನಿರ್ವಾಹಕ ಎಂಜಿನಿಯರುಗಳನ್ನು ನೇಮಕ ಮಾಡಬೇಕು. ಎಚ್‌ಕೆಸಿಸಿಐ ಅಧ್ಯಕ್ಷರನ್ನು ಎಚ್‌ಕೆಆರ್‌ಡಿಬಿ ಸದಸ್ಯರನ್ನಾಗಿ ನೇಮಕ ಮಾಡಬೇಕು. ಹಾಗೆಯೇ ಕೃಷಿ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಅರ್ಥಶಾಸ್ತ್ರಜ್ಞರನ್ನು ಸದಸ್ಯರನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಮಾತನಾಡಿ, ‘ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯನ್ನು ಯಥಾವತ್ತಾಗಿ ಮತ್ತು ತ್ವರಿತವಾಗಿ ಜಾರಿಗೊಳಿಸಬೇಕು. ಕೆಎಂಎಫ್‌, ಕೆಒಎಫ್ ಅಥವಾ ಕಾಫಿ ಮಂಡಳಿ ಮಾದರಿಯಲ್ಲಿ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯನ್ನು ಬಲಪಡಿಸಬೇಕು’ ಎಂದು ಹೇಳಿದರು.

‘ಚಿತ್ತಾಪುರದಲ್ಲಿ ರಾಷ್ಟ್ರೀಯ ಬಂಡವಾಳ ಮತ್ತು ಉತ್ಪಾದನಾ ವಲಯವನ್ನು (ನಿಮ್ಜ್‌)ಪ್ರಾರಂಭಿಸಬೇಕು. ರಾಜ್ಯ ಸರ್ಕಾರ ಇದಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, 12,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ₹15ಸಾವಿರ ಕೋಟಿ ವೆಚ್ಚದ ತಾಂತ್ರಿಕ ವರದಿಯೂ ಸಿದ್ಧವಾಗಿದೆ. ಕೂಡಲೇ ಇದನ್ನು ಆರಂಭಿಸಬೇಕು. ವಿಮಾನ ನಿಲ್ದಾಣವನ್ನು ಉಡಾನ್ ವ್ಯಾಪ್ತಿಗೆ ತಂದು, ಶೀಘ್ರ ವಿಮಾನ ಹಾರಾಟ ಆರಂಭಿಸಬೇಕು’ ಎಂದರು.

ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ, ಉಪಾಧ್ಯಕ್ಷ ಶರಣು ಪಪ್ಪಾ, ಯಾದಗಿರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಅಕ್ಕಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಶಾಸ್ತ್ರಿ ರವೀಂದ್ರ, ಕೊಪ್ಪಳ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ಇದ್ದರು.

***

ಯಾರು, ಏನೆಂದರು?

ಬೀದರ್‌ನಲ್ಲಿರುವ ಭಾರತೀಯ ವಾಯುಸೇನೆಯ ವಿಮಾನ ನಿಲ್ದಾಣವನ್ನು ನಾಗರಿಕ ವಾಯುಯಾನ ಸಂಚಾರಕ್ಕೆ ಮುಕ್ತಗೊಳಿಸಿ, ಈ ಭಾಗದ ಪ್ರಗತಿಗೆ ನಾಂದಿ ಹಾಡಬೇಕು.
ಅಮರನಾಥ ಪಾಟೀಲ, ಅಧ್ಯಕ್ಷ, ಎಚ್‌ಕೆಸಿಸಿಐ

***

ನಿಮ್ಜ್‌ ಸ್ಥಾಪನೆಯಿಂದ 1 ಲಕ್ಷ ನೇರ ಮತ್ತು 1.50 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅದರಿಂದ ಈ ಭಾಗದ ಆರ್ಥಿನ ಚೈತನ್ಯ ವೃದ್ಧಿಯಾಗುತ್ತದೆ.
ಶ್ರೀನಿವಾಸ ಸಿರನೂರಕರ್, ಹಿರಿಯ ಪತ್ರಕರ್ತ

***
ಎಚ್‌ಕೆಆರ್‌ಡಿಬಿ ಕಚೇರಿ ಸ್ಥಾಪಿಸಿ ಕಾರ್ಯದರ್ಶಿಯನ್ನು ನೇಮಕ ಮಾಡಿರುವುದನ್ನು ಬಿಟ್ಟರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗದಿರುವುದು ಬೇಸರದ ಸಂಗತಿ.
ಬಸವರಾಜ ಇಂಗಿನ, ಅಧ್ಯಕ್ಷ, ತೊಗರಿ ಬೆಳೆಗಾರರ ಸಂಘ

***

ರೈಲ್ವೆ ವಿಭಾಗೀಯ ಕಚೇರಿಯನ್ನು ಕೂಡಲೇ ಪ್ರಾರಂಭಿಸಬೇಕು. ಮಾನವ ಸೂಚ್ಯಂಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಉಮಾಕಾಂತ ನಿಗ್ಗುಡಗಿ, ಮಾಜಿ ಅಧ್ಯಕ್ಷ, ಎಚ್‌ಕೆಸಿಸಿಐ

***

ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಭಾಗದವರಿಗೆ ವಯೋಮಿತಿ ಸಡಿಲಿಕೆ ಮತ್ತು 10ರಿಂದ 15 ಕೃಪಾಂಕ ನೀಡಬೇಕು.
ಬಸವರಾಜ ಕುಮನೂರ್, ಅರ್ಥಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.