
ಕಲಬುರಗಿ ಎಂಆರ್‌ಎಂಸಿ ಸಭಾಂಗಣದಲ್ಲಿ ಶನಿವಾರ ನಡೆದ ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಠರೋಗ ತಜ್ಞರ ಸಂಘ (ಐಎಡಿವಿಎಲ್) ಕರ್ನಾಟಕ ಶಾಖೆಯ 16ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ‘ಕ್ಯೂಟಿಕಾನ್ ಕರ್ನಾಟಕ–2025’ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಪ್ರಜಾವಾಣಿ ಚಿತ್ರ
ಕಲಬುರಗಿ: ಸುಮಾರು ಎರಡು, ಮೂರು ದಶಕಗಳ ಹಿಂದೆ ಚರ್ಮರೋಗ ತಜ್ಞರಿಗೆ ಅಂತಹ ಬೇಡಿಕೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಕೋರ್ಸ್ ಪೂರೈಸಿದವರಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿರುವುದು ಶ್ಲಾಘನೀಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅಭಿಪ್ರಾಯಪಟ್ಟರು.
ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜು ಹಾಗೂ ಕಲಬುರಗಿ ಡೆರ್ಮಟಾಲಜಿಕಲ್ ಸೊಸೈಟಿ ಜಂಟಿಯಾಗಿ ನಗರದ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ 16ನೇ ವಾರ್ಷಿಕ ಸಮ್ಮೇಳನ ‘ಕುಟಿಕಾನ್’ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
‘1992ರಲ್ಲಿ ನಾನು ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಡೆರ್ಮಟಾಲಜಿಯಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಿದ್ದೆ. ಆಗ ಇದಕ್ಕೆ ಅಂತಹ ಬೇಡಿಕೆ ಇರಲಿಲ್ಲ. ಇಂದು ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಈ ವಿಭಾಗ ಇನ್ನಷ್ಟು ಬೆಳೆಯಬೇಕು. ಹೆಚ್ಚಿನ ತಜ್ಞರು ಚರ್ಮರೋಗ ವಿಭಾಗದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಜನರ ಆರೋಗ್ಯ ಸುಧಾರಿಸುತ್ತಿದೆ. ಇಲಾಖೆಯಿಂದ ಈ ಕ್ಷೇತ್ರಕ್ಕೆ ಅಗತ್ಯವಿರುವ ನೆರವು ನೀಡಲು ಸಿದ್ಧ’ ಎಂದು ಭರವಸೆ ನೀಡಿದರು.
‘1992ರಲ್ಲಿ ನಾನು ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾಗ ಇಲ್ಲಿ ವಾರ್ಷಿಕ ಸಮ್ಮೇಳನ ನಡೆದಿತ್ತು. ಮೂರು ದಶಕಗಳ ಬಳಿಕ ಮತ್ತೆ ಸಚಿವನಾಗಿ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ಖುಷಿ ಎನಿಸುತ್ತದೆ’ ಎಂದು ಹೇಳಿದರು.
‘ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಹಾಗೂ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಕಲಬುರಗಿಯಲ್ಲಿ ಬಹುತೇಕ ಎಲ್ಲ ವೈದ್ಯಕೀಯ ಸೇವೆಗಳನ್ನು ಸರ್ಕಾರ ಒದಗಿಸಿದ್ದರಿಂದ 600 ಕಿ.ಮೀ. ದೂರದ ಬೆಂಗಳೂರಿಗೆ ತೆರಳುವುದು ತಪ್ಪಿದೆ’ ಎಂದರು.
‘ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಠರೋಗ ತಜ್ಞರ ಸಂಘ’ದ (ಐಎಡಿವಿಎಲ್) ರಾಷ್ಟ್ರೀಯ ಗೌರವ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಭೂಮೇಶ್ ಕುಮಾರ್ ಕೆ. ಮಾತನಾಡಿ, ‘ನಮ್ಮ ಸಂಘವು 18,767 ಸದಸ್ಯತ್ವವನ್ನು ಹೊಂದುವ ಮೂಲಕ ವಾಯವ್ಯ ಏಷ್ಯಾದಲ್ಲೇ ಅತಿ ದೊಡ್ಡದಾಗ ಹಾಗೂ ಜಾಗತಿಕವಾಗಿ ಎರಡನೇ ಅತಿ ಬೃಹತ್ ಸಂಘವಾಗಿದೆ. ಕರ್ನಾಟಕದಲ್ಲಿ 2,287 ಸದಸ್ಯರನ್ನು ಹೊಂದಿದೆ. ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕ ಮೂಲದ ಹಲವು ಚರ್ಮರೋಗ ತಜ್ಞರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ’ ಎಂದರು.
‘ಚರ್ಮದ ಆರೋಗ್ಯ ಸರಿಯಾಗಿಲ್ಲದಿದ್ದರೆ ಇಡೀ ದೇಹದ ಆರೋಗ್ಯ ಹದಗೆಟ್ಟಂತೆಯೇ. ಬಹುತೇಕ ಸಂದರ್ಭಗಳಲ್ಲಿ ಚರ್ಮರೋಗದಿಂದ ಬಳಲುತ್ತಿರುವವರು ಬೇರೆ ವಿಭಾಗದಲ್ಲಿ ಚಿಕಿತ್ಸೆ ಪಡೆಯುವ ರೂಢಿ ಇದೆ. ಇದು ತಪ್ಪಬೇಕು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಬೇಕು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರು ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದರು.
ದೇಶದ 757 ಸ್ಥಳಗಳಲ್ಲಿ ಎಂಟು ಗಂಟೆಗಳ ಅವಧಿಯಲ್ಲಿ ಚರ್ಮರೋಗ ತಪಾಸಣಾ ಶಿಬಿರ ನಡೆಸುವ ಮೂಲಕ ಗಿನ್ನೆಸ್ ದಾಖಲೆಯಾಗಿ ಮಾಡಿದ್ದೇವೆ ಎಂದರು.
ಐಎವಿಡಿಎಲ್ ಕರ್ನಾಟಕ ಘಟಕದ ಗೌರವ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಸಿ. ಅವರು ವರದಿ ವಾಚನ ಮಾಡಿದರು.
ಎಚ್‌ಕೆಇ ಸೊಸೈಟಿ ಉಪಾಧ್ಯಕ್ಷ ರಾಜಾ ಭೀಮಳ್ಳಿ ಮಾತನಾಡಿದರು.
ಐಎಡಿವಿಎಲ್ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಹುಲಮನಿ, ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಡಾ.ಸವಿತಾ ಎ.ಎಸ್, ಡಾ.ಮಿತಾಕ್ಷರಿ ಎಂ. ಹೂಗಾರ, ಡಾ.ವೀರೇಶ ಡಿ, ಡಾ.ಸಂಜನಾ ಎ.ಎಸ್. ಇತರರು ಭಾಗವಹಿಸಿದ್ದರು.
ವಿವಿಧ ಪ್ರಶಸ್ತಿ ಪ್ರದಾನ
ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳನ್ನು ಸಚಿವ ಡಾ.ಶರಣಪ್ರಕಾಶ್ ಪಾಟೀಲ ಪ್ರದಾನ ಮಾಡಿದರು. ರಾಜ್ಯದ ಅತ್ಯುತ್ತಮ ಚರ್ಮರೋಗ ವಿಭಾಗವಾಗಿ ಆಯ್ಕೆಯಾದ ಮಂಗಳೂರಿನ ಯೇನಪೋಯ ವೈದ್ಯಕೀಯ ಕಾಲೇಜಿಗೆ ಪ್ರಶಸ್ತಿ ನೀಡಲಾಯಿತು. ಕಲಬುರಗಿಯ ಡಾ.ಸುಜಲಾ ಆರಾಧ್ಯ ಅವರಿಗೆ ಯುವ ಚರ್ಮರೋಗ ತಜ್ಞೆ ಪ್ರಶಸ್ತಿ ನೀಡಲಾಯಿತು. ಬೆಂಗಳೂರು ಡೆರ್ಮಟಾಲಜಿ ಸೊಸೈಟಿ ಸೇರಿದಂತೆ ವಿವಿಧ ಸೊಸೈಟಿಗಳಿಗೆ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿಧ ರಾಜ್ಯಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.