ADVERTISEMENT

ಸುಸ್ಥಿರ ಅಭಿವೃದ್ಧಿಗೆ ಯೋಜನೆಗಳು ರೂಪಿಸಿ: ಬಿ.ಆರ್‌. ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:21 IST
Last Updated 23 ಜುಲೈ 2025, 4:21 IST
<div class="paragraphs"><p>ಕಲಬುರಗಿಯಲ್ಲಿ ಮಂಗಳವಾರ ನಡೆದ ಏಳು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; </p></div>

ಕಲಬುರಗಿಯಲ್ಲಿ ಮಂಗಳವಾರ ನಡೆದ ಏಳು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು            

   

  ಪ್ರಜಾವಾಣಿ ಚಿತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗವು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಬೇರೆ– ಬೇರೆ ಯೋಜನೆಗಳನ್ನು ಕ್ರೋಡೀಕರಣ ಮಾಡಿ ಅವುಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಅದರ ಜತೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ಕಲೆಹಾಕಿ, ಡಿಸೆಂಬರ್ 15ರ ಒಳಗೆ ಯೋಜನಾ ಆಯೋಗದ ವರದಿ ಸಲ್ಲಿಕೆಗೂ ಕೈಜೋಡಿಸಬೇಕು’ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.

ADVERTISEMENT

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ವಿವಿಧ ಹಂತಗಳ ಪ್ರಕ್ರಿಯೆ ಮುಗಿಸಿದ ಬಳಿಕ ಯೋಜನಾ ಆಯೋಗವು ರಾಜ್ಯ ಸರ್ಕಾರಕ್ಕೆ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ಮತ್ತು 2026–27ನೇ ಸಾಲಿನ ವಾರ್ಷಿಕ ಕರಡು ಯೋಜನೆ ವರದಿಯನ್ನು ಸಲ್ಲಿಸಬೇಕಿದೆ. ಇಲಾಖಾವಾರು ಮಾಹಿತಿ ಸಂಗ್ರಹಿಸಿ, ವಾಸ್ತವ ಸ್ಥಿತಿಯನ್ನು ವಿಶ್ಲೇಷಣೆ ಮಾಡಬೇಕು’ ಎಂದು ಸೂಚಿಸಿದರು.

‘ಡಿಸೆಂಬರ್ ಒಳಗೆ ಸರ್ಕಾರಕ್ಕೆ ಪಂಚ ವಾರ್ಷಿಕ ಯೋಜನೆಯ ವರದಿ‌ ಸಲ್ಲಿಸಿದಲ್ಲಿ ಮುಂದಿನ ವರ್ಷದ ಬಜೆಟ್‌ನಲ್ಲಿ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ. ಇದರ ಜತೆಗೆ ಕೆಕೆಆರ್‌ಡಿಬಿ ಇರುವುದರಿಂದ ನಮ್ಮ ಭಾಗಕ್ಕೆ ಬೇಕಾಗುವ ಅನುದಾನದ ಕೊರತೆಯೂ ಇಲ್ಲ. ಮಂಡಳಿಯ ನೆರವು ಪಡೆದು ನಿರ್ದಿಷ್ಟವಾದ ಯೋಜನೆಗಳಿಗೆ ಕಾರ್ಯಕ್ರಮಗಳು ರೂಪಿಸಬಹುದು’ ಎಂದರು.

‘ಅನಗತ್ಯವಾದ ಯೋಜನೆಗಳಿಗೆ ಅನುದಾನ ಮೀಸಲಿಡುವ ಬದಲು ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ ನಿವಾರಣೆಗೆ ವರ್ಗಾಯಿಸುವುದು ಒಳ್ಳೆಯದು. ಅಗತ್ಯ ಇದ್ದಲ್ಲಿ ಮಾತ್ರವೇ ಅನುದಾನವನ್ನು ಬಳಸಿಕೊಳ್ಳಬೇಕು. ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕೊಠಡಿಗಳು ನಿರ್ಮಿಸಿರುತ್ತೇವೆ. ಆದರೆ, ಅಲ್ಲಿ ಮಕ್ಕಳಿಲ್ಲದಿದ್ದರೆ ಅದು ಸದ್ಬಳಕೆ ಆಗಲ್ಲ’ ಎಂದು ಹೇಳಿದರು.

ಗ್ರಾಮ ಮಟ್ಟದಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದವರೆಗೆ 10 ಹಂತಗಳಲ್ಲಿ ಸಭೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಯಿತು. ಅದರಂತೆ ಸಭೆ ನಡೆಸುವುದು ಕಡ್ಡಾಯ ಎಂದು ಪಾಟೀಲ ಸೂಚಿಸಿದರು.

ಜಿ.ಎಸ್. ಗಣೇಶ ಪ್ರಸಾದ್, ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸಂಸ್ಥೆಯ ಮೀರಜ್ ಆಯೋಗದ ವರದಿಗೆ ಸಂಬಂಧಿಸಿದ ವಿಷಯಗಳನ್ನು ಮಂಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಗಳಾದ ಭಂವರ್ ಸಿಂಗ್ ಮೀನಾ, ಲವೀಶ್ ಒರಡಿಯಾ, ವರ್ನಿತ್ ನೇಗಿ, ಎಂ.ಡಿ.ಹ್ಯಾರಿಸ್ ಸುಮೈರ್ ಸೇರಿದಂತೆ ಏಳು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿಗಳು (ಸಿಪಿಒ), ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿಯುಡಿಸಿ ಯೋಜನಾ ನಿರ್ದೇಶಕರು ಪಾಲ್ಗೊಂಡಿದ್ದರು.

‘ಕಲಬುರಗಿ ಕೊಪ್ಪಳ ರಾಯಚೂರು ಯಾದಗಿರಿಗೆ ಕೊನೆ ಸ್ಥಾನ’

‘1999ರಿಂದ 2022ರ ವರೆಗಿನ ಮಾನವ ಅಭಿವೃದ್ಧಿ ಸೂಚ್ಯಂಕದ (ಎಚ್‌ಡಿಆರ್‌) ನಾಲ್ಕು ವರದಿಗಳಲ್ಲಿ ಕಲ್ಯಾಣ ಕರ್ನಾಟಕದ ಒಂದೂ ಜಿಲ್ಲೆಯೂ ಅಗ್ರ 5ರಲ್ಲಿ ಸ್ಥಾನ ಪಡೆದಿಲ್ಲ. ಬಳ್ಳಾರಿ ಮತ್ತು ಬೀದರ್ ಜಿಲ್ಲೆಗಳು ಮಧ್ಯದಲ್ಲಿ ಸ್ಥಾನ ಗಳಿಸಿದ್ದು ಉಳಿದವು ಕೆಳ ಹಂತದ ಅಗ್ರ ಐದು ಜಿಲ್ಲೆಗಳಲ್ಲಿ ಗುರುತಿಸಿಕೊಂಡಿವೆ’ ಎಂದು ಯೋಜನಾ ಇಲಾಖೆಯ ಹಿರಿಯ ನಿರ್ದೇಶಕ ಬಸವರಾಜ ಬೇಸರ ವ್ಯಕ್ತಪಡಿಸಿದರು.

‘ಸಾಕಷ್ಟು ಅನುದಾನ ಖರ್ಚು ಮಾಡಿದ್ದರೂ ಎಚ್‌ಡಿಆರ್‌ ಅಂಶಗಳಲ್ಲಿ ಬೆಳವಣಿಗೆ ಕಾಣುತ್ತಿಲ್ಲ. ಶಿಕ್ಷಣ ಆರೋಗ್ಯ ತಲಾ ಆದಾಯಗಳಲ್ಲಿ ಸುಧಾರಣೆಯೂ ಕಾಣಿಸುತ್ತಿಲ್ಲ. ಎಚ್‌ಡಿಆರ್‌ನ ಪೂರಕ ಬೆಳವಣಿಗೆಯೂ ಮಂದಗತಿಯಲ್ಲಿದೆ. ಕಲಬುರಗಿ ಕೊಪ್ಪಳ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡಿವೆ’ ಎಂದರು.

‘ತಾಲ್ಲೂಕು ವಾರು ಜಿಲ್ಲಾ ಮಟ್ಟದಲ್ಲಿ ವಸ್ತುಸ್ಥಿತಿ ಅಳೆಯಬೇಕು. ಜನರ ಜೀವನ ಮಟ್ಟದಲ್ಲಿ ಸುಧಾರಣೆ ಆಗದೆ ಇದ್ದರೆ ಯೋಜನೆಗಳಲ್ಲಿ ಏನೋ ಕೊರತೆ ಇದೆ ಎಂಬುದು ಕಾಣಿಸುತ್ತದೆ’ ಎಂದು ಹೇಳಿದರು.

‘ಜಿಲ್ಲಾ ಯೋಜನಾ ಸಮಿತಿ ಸಭೆಗಳೇ ನಡೆದಿಲ್ಲ’

‘ಸಂವಿಧಾನ 73 74ನೇ ತಿದ್ದುಪಡಿ ಅನ್ವಯ ಜಿಲ್ಲಾ ಯೋಜನಾ ಸಮಿತಿಯು ಸಭೆ ಮಾಡುವುದು ಕಡ್ಡಾಯ. ಆದರೆ ಇಲ್ಲಿಯವರೆಗೆ ಸಭೆಗಳೆ ನಡೆದಿಲ್ಲ’ ಎಂದು ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅವರು ಸಭೆ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಚ್ಚರಿ ವ್ಯಕ್ತಪಡಿಸಿದರು.

‘ಅಂಕಿಅಂಶ ಅಧಿಕಾರಿಗಳು ಪ್ರತಿ ವರ್ಷ ಶೇ 15ರಷ್ಟು ಅನುದಾನ ಹೆಚ್ಚಿಸಿಕೊಂಡು ಬಜೆಟ್ ತಂದು ಸಭೆಯಲ್ಲಿ ಇರಿಸಿ ಅನುಮೋದನೆ ಪಡೆದುಕೊಳ್ಳುತ್ತಾರೆ. ಆದರೆ ಯೋಜನಾ ಸಮಿತಿಯ ಸಭೆಗಳು ನಡೆಯುತ್ತಿಲ್ಲ. ಮುಂದೆ ಇದು ಮರುಕಳಿಸಬಾರದು. ಕಡ್ಡಾಯವಾಗಿ ಸಭೆ ನಡೆಸಿ ಯೋಜನೆಗಳ ಬಗ್ಗೆ ಚರ್ಚಿಸಬೇಕು. ಚುನಾವಣೆಗಳು ನಡೆಯದೆ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ಅಧ್ಯಕ್ಷರು ಅದರ ಅಧ್ಯಕ್ಷರಾಗಿರುತ್ತಾರೆ. ಆ ಕೆಲಸವನ್ನು ಅವರೇ ಮಾಡಬೇಕು’ ಎಂದರು.

‘ನಾವು ಸಾಕಷ್ಟು ದುಡ್ಡು ಖರ್ಚು ಮಾಡಿದ್ದೇವೆ. ಅವುಗಳು ಎಷ್ಟರಮಟ್ಟಿಗೆ ಬಳಕೆಯಾಗಿವೆ ಎಂಬುದರ ಮೌಲ್ಯಮಾಪನವು ಇಲ್ಲಿಯವರೆಗೂ ಆಗಿಲ್ಲ. ಪ್ರತಿ ಇಲಾಖೆಯಲ್ಲಿಯೂ ಮೌಲ್ಯಮಾಪನ ಮಾಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅಧಿಕಾರಿಗಳು ನೀತಿ ಕಾರ್ಯಕ್ರಮಗಳು ಹಾಗೂ ಅನುಷ್ಠಾನದ ಸಮನ್ವಯತೆಯೊಂದಿಗೆ ಯೋಜನೆಗಳನ್ನು ರೂಪಿಸಿ ಸುಸ್ಥಿರ ಅಭಿವೃದ್ಧಿಯ ಕಾರ್ಯಾನುಷ್ಠಾನಕ್ಕೆ ಮುಂದಾಗಬೇಕು
ಬಿ.ಆರ್.ಪಾಟೀಲ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ
ಕೆಕೆಆರ್‌ಡಿಬಿ ಆರೋಗ್ಯ ಶಿಕ್ಷಣದಂತಹ ಮೂಸೌಕರ್ಯ ಕಲ್ಪಿಸುವಲ್ಲಿ ನಿರತವಾಗಿದೆ. ಶಾಲೆಗಳ ಸ್ವಚ್ಛತೆ ಶೌಚಾಲಯ ವಿದ್ಯುತ್ ನಿರ್ವಹಣೆಗೆ ಶಿಕ್ಷಣ ಇಲಾಖೆ ಅನುದಾನ ನೀಡಬೇಕು
- ನಲಿನ್ ಅತುಲ್, ಕೆಕೆಆರ್‌ಡಿಬಿ ಕಾರ್ಯದರ್ಶಿ
ಗ್ರಾಮೀಣ ಭಾಗದಲ್ಲಿ ಕೆಲವು ಸಂಸ್ಥೆಗಳಿಗೆ ಚುನಾವಣೆಗಳು ನಡೆದಿಲ್ಲ. ಜಿಲ್ಲಾ ಯೋಜನಾ ಸಮಿತಿ ರಚನೆಯ ಬಗ್ಗೆ ಆಯೋಗವು ಸ್ಪಷ್ಟತೆ ನೀಡಬೇಕು
- ಡಾ. ಗಿರೀಶ್ ಡಿ. ಬದೋಲೆ, ಬೀದರ್ ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.