ಕಲಬುರಗಿ: ಈ ಭಾಗದ ಆರಾಧ್ಯ ದೈವ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ಭಕ್ತಸಾಗರವೇ ಹರಿದು ಬರುತ್ತಿದೆ.
ಪಾದಯಾತ್ರೆ ಸೇರಿದಂತೆ ವಿವಿಧ ವಾಹನಗಳ ಮೂಲಕ ಬರುತ್ತಿರುವ ಭಕ್ತರು, ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಬಿಲ್ವಪತ್ರೆ, ತೆಂಗಿನಕಾಯಿ, ಕರ್ಪೂರ, ಪುಷ್ಪಗಳನ್ನು ಅರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ.
ಶರಣ ಬಸವೇಶ್ವರರು, ಶರಣ ಬಸವೇಶ್ವರ ಮಹಾ ದಾಸೋಹ ಸಂಸ್ಥಾನ ಈ ಭಾಗದಲ್ಲಿ ದಾಸೋಹಕ್ಕೆ ಹೆಸರುವಾಸಿ. ನಿತ್ಯವೂ ದಾಸೋಹ ವ್ಯವಸ್ಥೆ ಇಲ್ಲಿನ ಪದ್ಧತಿ. ಆದರೆ, ಶ್ರಾವಣ ಮಾಸದ ಮೂರನೇ ಸೋಮವಾರ ಭಕ್ತರಿಂದಲೂ ದಾಸೋಹ ಸೇವೆ ಮಾಡಲು ಪೈಪೋಟಿ ಕಂಡು ಬಂತು.
ದೇವಸ್ಥಾನಕ್ಕೆ ಬಂದ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ತಮ್ಮ ಶಕ್ತ್ಯಾನುಸಾರ ಭಕ್ತರನ್ನು ಕರೆದು ಕರೆದು ಊಟ ಉಣಬಡಿಸುತ್ತಿರುವ ದೃಶ್ಯ ಕಂಡು ಬಂತು.
ಕಲಬುರಗಿಯಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ಭಕ್ತರಿಗೆ ಸಾರ್ವಜನಿಕರು ಅನ್ನಸಂತರ್ಪಣೆ ಏರ್ಪಡಿಸಿದ್ದರು
ಬೆಳಿಗ್ಗೆ ಶಿರಾ, ಉಪ್ಪಿಟ್ಟು, ಪುಲಾವ ಉಣಬಡಿಸಿದ ಭಕ್ತರು, ಮಧ್ಯಾಹ್ನ ಶಿರಾ, ಗೋದಿ ಹುಗ್ಗಿ, ಮಸಾಲೆ ಅನ್ನ-ಸಾರು, ಮೊಸರಣ್ಣ ಉಣ ಬಡಿಸಿದರು.
ಕಣ್ಣಿ ಮಾರ್ಕೆಟ್ ರೈತ ವ್ಯಾಪಾರಿಗಳ ಸಂಘ, ಶರಣ ಬಸವೇಶ್ವರರ ತರುಣ ಸಂಘ, ನವ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘ, ಶಿವಭಕ್ತ ತಿಪ್ಪಣ್ಣಗೌಡರ ಬೋಧನ, ಶಾಹಬಜಾರನ ಭಾವಗಿ ಪಬ್ಲಿಸಿಟಿಸಿ ಟೆಂಟ್ ಹೌಸ್ ಕಡೆಯಿಂದ ಇಡೀದಿನ ಅನ್ನಸಂತರ್ಪಣೆ ಜರುಗಿತು.
ಇದಲ್ಲದೇ ಭಕ್ತರು ತಮ್ಮ ಆರ್ಥಿಕ ಸಾಮರ್ಥ್ಯದ ಅನುಸಾರ ಮೊಬೈಕ್ ವಾಹನಗಳು, ಡಬ್ಬಿಗಳು, ದೊಡ್ಡ ಬೋಗಣಿಗಳಲ್ಲಿ ಸಿದ್ಧಪಡಿಸಿ ತಂದಿದ್ದ ಆಹಾರ ಭಕ್ತರನ್ನು ಕರೆ ಕರೆದು ಉಣಬಡಿಸಿದರು. ಹಲವು ಜನರು ನೀರಿನ ಪ್ಯಾಕೆಟ್ಗಳನ್ನು ಹಂಚಿದ್ದು ಕಂಡು ಬಂತು.
ಬಿಲ್ವಪತ್ರೆ, ಹೂವು-ಹಣ್ಣುಗಳ ಮಾರಾಟವೂ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.