ADVERTISEMENT

ಧರ್ಮಸ್ಥಳ: 'ಅಸಹಜ ಸಾವುಗಳ ಸಮಗ್ರ ತನಿಖೆ ಆಗಲಿ’

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 2:38 IST
Last Updated 29 ಸೆಪ್ಟೆಂಬರ್ 2025, 2:38 IST
ಕಲಬುರಗಿಯ ಕನ್ನಡ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪತ್ರಕರ್ತ ನವೀನ ಸೂರಿಂಜೆ ಮಾತನಾಡಿದರು
ಕಲಬುರಗಿಯ ಕನ್ನಡ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪತ್ರಕರ್ತ ನವೀನ ಸೂರಿಂಜೆ ಮಾತನಾಡಿದರು   

ಕಲಬುರಗಿ: ‘ಪದ್ಮಲತಾ, ವೇದವಲ್ಲಿ, ಸೌಜನ್ಯರ ಸಾವಿಗೆ ಕಾರಣರಾದವರನ್ನು ಕಂಡುಹಿಡಿಯಲು ಆಗಲಿಲ್ಲ. ಈ ಸಾವುಗಳ ಹಿಂದೆ ಪಟ್ಟಭದ್ರರ ಕೈವಾಡವಿದೆ. ಧರ್ಮಸ್ಥಳದಲ್ಲಿ ಆದ ನೂರಾರು ಅಸಹಜ ಸಾವುಗಳ ಸಮಗ್ರ ತನಿಖೆ ಆಗಬೇಕು’ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ‌ ಆಗ್ರಹಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ‘ಧರ್ಮಸ್ಥಳದಲ್ಲಿ ನಡೆದಿದ್ದೇನು? ‘ನ್ಯಾಯಕ್ಕಾಗಿ ನಾವು’ ಸೇರೋಣ ಬನ್ನಿ ಘೋಷಣೆಯಡಿ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ‘ನೇತ್ರಾವತಿ ನದಿಯಲ್ಲಿ ಅಮಾಯಕ ಜನರ ನೆತ್ತರು ಸೇರಿದೆ. ಸಾವುಗಳ ತನಿಖೆ ಆಗಿ ಇವುಗಳ ಹಿಂದಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದರು.

ಪತ್ರಕರ್ತ ನವೀನ ಸೂರಿಂಜೆ ಮಾತನಾಡಿ, ‘ಅಲ್ಲಿನ ಪಂಚಾಯಿತಿಯವರು ಬೆಳಿಗ್ಗೆ ಸಿಕ್ಕ ಅನಾಮಿಕ ಶವಗಳನ್ನು ಅರ್ಧ ಅಥವಾ ಒಂದೇ ದಿನದಲ್ಲಿ ಸುಟ್ಟುಹಾಕಿದ್ದಾರೆ ಏಕೆ? ಅನಾಮಿಕವಾಗಿ ಸಿಕ್ಕ ಶವಗಳನ್ನು ಕಾನೂನು ಪ್ರಕಾರ ಹದಿನೈದು ದಿನಗಳ ಕಾಲ ಕಾಯ್ದಿಡಬೇಕು. ಆದರೆ ಏಕೆ ಅದೇ ದಿನ ಶವಸಂಸ್ಕಾರ ಮಾಡಿರುವರು? ಅದರ ಹಿಂದೆ ಏನು ಹುನ್ನಾರಗಳಿವೆ ಎಂದು ಪ್ರಶ್ನಿಸಿದರು.

ADVERTISEMENT

‘ಕಾರ್ಯಕ್ರಮದಲ್ಲಿ ಧರ್ಮಸ್ಥಳ ಹೆಸರು ಬರಬಾರದೆಂದು ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಆದರೆ ಇದೂ ಸಹ ಕೋರ್ಟ್‌ ನೀಡಿದ ತೀರ್ಪಿನ ನಿಂದನೆ ಆಗುತ್ತದೆ. ನಾವು ಇಲ್ಲಿ ಮಾತಾಡುವ ಎಲ್ಲ ವಿಷಯಗಳ ಬಗ್ಗೆ ನ್ಯಾಯಾಲಯದಲ್ಲಿ ಮಾತನಾಡಿ ಅನುಮತಿ ಪಡೆದಿದ್ದೇವೆ’ ಎಂದರು.

ಇದೇ ವೇಳೆ ಪೊಲೀಸರು ಕೊಟ್ಟ ನೋಟಿಸ್‌ಅನ್ನು ಕಾರ್ಯಕ್ರಮವು ಒಕ್ಕೊರಲಿನಿಂದ ಖಂಡಿಸಿ ವಾಪಸ್‌ಗೆ ಆಗ್ರಹಿಸಲಾಯಿತು.

ಸುಮಾರು ಎರಡು ತಾಸುಗಳ ಕಾಲ ಚರ್ಚೆ, ಸಂವಾದ ನಡೆಯಿತು. ಪ್ರೊ.ಆರ್.ಕೆ.ಹುಡಗಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಕಾವ್ಯಾ ಅಚ್ಯುತ್, ಅರ್ಜುನ ಭದ್ರೆ, ಪದ್ಮಿನಿ ಕಿರಣಗಿ, ಪದ್ಮಾ ಎನ್. ಪಾಟೀಲ, ಶ್ರೀಮಂತ ಬಿರಾದಾರ, ಚಂದಮ್ಮ ಗೋಳಾ ಉಪಸ್ಥಿತರಿದ್ದರು. ಮೇಘಾ ಮತ್ತು ಲವಿತ್ರ ಕ್ರಾಂತಿ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.