ADVERTISEMENT

ಕಲಬುರಗಿ: ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ವೃದ್ಧ ದಂಪತಿಗೆ ₹1.30 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:31 IST
Last Updated 16 ಡಿಸೆಂಬರ್ 2025, 6:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ಅಕ್ರಮ ಹಣ ವರ್ಗಾವಣೆಯ ಹೆಸರಿನಲ್ಲಿ ‘ಡಿಜಿಟಲ್‌ ಅರೆಸ್ಟ್‌’ ಮಾಡುವುದಾಗಿ ಬೆದರಿಸಿದ ಸೈಬರ್‌ ವಂಚಕರು ನಗರದ ವೃದ್ಧ ದಂಪತಿಯಿಂದ ಹಂತ ಹಂತವಾಗಿ ಬರೋಬರಿ ₹1.30 ಕೋಟಿ ದೋಚಿದ್ದಾರೆ.

ನಗರದ ಹುಮನಾಬಾದ್‌ ರಿಂಗ್‌ ರಸ್ತೆ ಸಮೀಪದ ಭಾರತ ಪ್ರೈಡ್‌ ಪಾರ್ಕ್‌ ನಿವಾಸಿ ಉಷಾ ಬಿರಾದಾರ ಹಾಗೂ ನಿವೃತ್ತ ವೈದ್ಯ ಶಿವಶರಣಪ್ಪ ಬಿರಾದಾರ ವಂಚನೆಗೊಳಗಾದ ವೃದ್ಧ ದಂಪತಿ. 

‘ಮುಂಬೈನ ಕ್ರೈಂ ಬ್ರ್ಯಾಂಚ್‌ ಅಧಿಕಾರಿಗಳ ಹೆಸರಿನಲ್ಲಿ ಪತಿಗೆ ನವೆಂಬರ್ 8ರಂದು ಕರೆ ಮಾಡಿದ ವಂಚಕರು, ನಿಮ್ಮ ಹೆಸರಿನಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಖಾತೆಯಿದೆ. ಅದು ನರೇಶ್‌ ಗೋಯಲ್‌ ಹಣ ಲೇವಾದೇವಿ ಪ್ರಕರಣದಲ್ಲಿ ಭಾಗಿಯಾಗಿದೆ. ನಿಮ್ಮ ಹೆಸರಿನ ಖಾತೆಗೆ ₹2 ಕೋಟಿ ವರ್ಗಾವಣೆಯಾಗಿದೆ. ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದರು’ ಎಂದು ದೂರಿನಲ್ಲಿ ಉಷಾ ಬಿರಾದಾರ ತಿಳಿಸಿದ್ದಾರೆ.

ADVERTISEMENT

‘ನಮ್ಮ ಮೇಲೆ ನಿರಂತರವಾಗಿ 25 ದಿನಗಳ ಕಾಲ ನಿಗಾಯಿಟ್ಟರು. ನನ್ನ ಮತ್ತು ಪತಿ ಜಂಟಿ ಹೆಸರಿನಲ್ಲಿರುವ ಎರಡು ಬ್ಯಾಂಕ್‌ ಖಾತೆ, ನನ್ನ ಹೆಸರಿನಲ್ಲಿರುವ ಒಂದು ಖಾತೆ, ನನ್ನ ಪತಿಯ ಹೆಸರಿನಲ್ಲಿರುವ ಖಾತೆಯಲ್ಲಿ ಇರುವ ಹಣದ ಮಾಹಿತಿ ಪಡೆದರು. ನಿಮ್ಮ ಹಣದ ಮೂಲದ ಬಗೆಗೆ ಪರಿಶೀಲಿಸಬೇಕಿದ್ದು, ನಾವು ಹೇಳುವ ಖಾತೆಗೆ ವರ್ಗಾಯಿಸಿ ನಾವು 48 ಗಂಟೆಯಲ್ಲಿ ಮರಳಿಸುತ್ತೇವೆ ಎಂದರು. ಅದರಂತೆ ಡಿಸೆಂಬರ್‌ 2ರಿಂದ 9ರತನಕ ಆರ್‌ಟಿಜಿಎಸ್‌ ಮೂಲಕ ₹1.30 ಕೋಟಿ ವರ್ಗಾಯಿಸಿದೆವು’ ಎಂದು ಉಷಾ ವಿವರಿಸಿದ್ದಾರೆ.

ಈ ಕುರಿತು ಐಟಿ ಕಾಯ್ದೆ–2008ರ ಕಲಂ 66(ಡಿ), 66(ಸಿ), ಭಾರತೀಯ ನ್ಯಾಯ ಸಂಹಿತೆಯ ಕಲಂ 319(2), 318(4),318(2),308ರಡಿ ಕಲಬುರಗಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.