
ಕಲಬುರಗಿ: ‘ವಿದ್ಯಾರ್ಥಿಗಳ ಜೀವನ ಇತರರಿಗೆ ಮಾದರಿಯಾಗಲಿ. ನಿರಂತರವಾಗಿ ಕಲಿಯಿರಿ, ಅಹಂಕಾರವಿಲ್ಲದೇ ಬದುಕಿರಿ ಮತ್ತು ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸದಿರಿ’ ಎಂದು ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷರಾದ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅಭಿಪ್ರಾಯಪಟ್ಟರು.
ಜಿಲ್ಲೆಯ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಶನಿವಾರ ಆಯೋಜಿಸಿದ್ದ 9ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ‘ಡಿಜಿಟಲ್ ಯುಗದಲ್ಲಿ ಬದುಕುವ ನಿಮಗೆ ನಿಮ್ಮ ಪದವಿ ಶಕ್ತಿಶಾಲಿ ಸಾಧನವಲ್ಲ. ಹಂಚುವ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಏನು ಹಂಚಬೇಕು, ಎಷ್ಟು ಹಂಚಬೇಕು ಮತ್ತು ಯಾವಾಗ ಹಂಚಬೇಕು ಎಂಬುದನ್ನು ತಿಳಿಯುವ ನಿಖರ ವಿವೇಚನೆ ನಿಮ್ಮ ಶಕ್ತಿಶಾಲಿ ಸಾಧನವಾಗಿದೆ. ಪ್ರಶ್ನಿಸುವುದನ್ನು ತಡೆಯಬಾರದು ಎಂಬುದು ಬಹಳ ಮಹತ್ವದ ಸಂಗತಿ ಎಂದು ಆಲ್ಬರ್ಟ್ ಐನ್‌ಸ್ಟೀನ್ ಹೇಳಿದ್ದಾರೆ. ಇಂದಿನ ಪೀಳಿಗೆಗೆ ಎಲ್ಲವನ್ನೂ ತಕ್ಷಣವೇ ಸಂಗ್ರಹಿಸುವ ಅವಕಾಶ ಸಿಕ್ಕಿದೆ. ಆದರೆ, ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳ್ಳಲು ಮತ್ತು ಜೀರ್ಣಿಸಿಕೊಳ್ಳಲು ವರ್ಷಗಳ ಶ್ರಮ ಅಗತ್ಯವಾಗಿದೆ. ಆದ್ದರಿಂದ ವಿಮರ್ಶಾ ಚಿಂತನೆ ಕೇವಲ ಆಯ್ಕೆಯ ಕೌಶಲವಲ್ಲ; ಅದು ನಿಜವಾದ ಅಸ್ತಿತ್ವ’ ಎಂದರು.
ರಾಮಾಯಣದ ಭರತ ನೀಡಿದ ಆದರ್ಶ ಶಾಶ್ವತ ಸ್ತಂಭವಾಗಿದೆ. ಕೈಕೇಯಿ ತನ್ನ ಬುದ್ಧಿವಂತಿಕೆಯಿಂದ ರಾಮನ ವನವಾಸದ ವಾಗ್ದಾನ ಮತ್ತು ಭರತನ ಪಟ್ಟಾಭಿಷೇಕದ ಸೌಲಭ್ಯ ದೊರಕಿಸಿಕೊಂಡರೂ ಭರತ ಅಯೋಧ್ಯೆಯ ಸಿಂಹಾಸನವನ್ನು ಏರಲು ನಿರಾಕರಿಸಿದ. ಅವನು ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ, ತಾನು ಕೇವಲ ನಾಮಮಾತ್ರ ರಾಜನಾಗಿ ರಾಮನು ವನವಾಸದಿಂದ ಮರಳುವವರೆಗೆ ನಿಷ್ಠೆಯಿಂದ ರಾಜ್ಯಭಾರ ಮಾಡಿದ. ಹೀಗಾಗಿ ಭರತ ಎರಡು ಶಾಶ್ವತ ಮೌಲ್ಯಗಳನ್ನು ತೋರಿಸಿದ. ಅನ್ಯಾಯದಿಂದ ದೊರೆತ ಅಧಿಕಾರವನ್ನು ತ್ಯಜಿಸುವ ಧೈರ್ಯ ಮತ್ತು ತಾಂತ್ರಿಕ ನಿಯಮಗಳಿಗಿಂತ ಮೇಲಾಗಿ ಧರ್ಮದ ಅಂತರಾರ್ಥವನ್ನು ಗೌರವಿಸುವ ವಿವೇಕ. ಇವು ಜ್ಞಾನದಿಂದ ಅರಿವಿನೆಡೆಗೆ ಸಾಗುವ ನಿಜವಾದ ದಾರಿಗಳೂ ಅಂತರಂಗದ ದೀಪವನ್ನು ಬೆಳಗಿಸುವ ಪಥಗಳೂ ಆಗಿವೆ’ ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ‘ಹೊಸದಾಗಿ ಜೆನೆಟಿಕ್ಸ್ ಅಂಡ್ ಜಿನೋಮ್ಸ್, ಲೈಬ್ರರಿ ಸೈನ್ಸ್, ಆರ್ಟಿಫಿಶಿಯಲ್ ಟೆಕ್ನಾಲಜಿ, ಮಷಿನ್ ಲರ್ನಿಂಗ್ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ವಿ.ವಿ.ಯಲ್ಲಿ ಸಂಶೋಧನೆಗಾಗಿ ₹ 15 ಕೋಟಿ ವ್ಯಯ ಮಾಡಲಾಗುತ್ತಿದೆ. ಅನುಸಂಧಾನ್ ರಿಸರ್ಚ್ ಫೌಂಡೇಷನ್‌ದಿಂದಲೇ ಸಂಶೋಧನೆಗೆ ₹ 12.01 ಕೋಟಿ ವಿ.ವಿ.ಗೆ ಬಿಡುಗಡೆಯಾಗಿದೆ’ ಎಂದರು.
756 ಜನರಿಗೆ ಪದವಿ ಪ್ರದಾನ: ಘಟಿಕೋತ್ಸವದ ಭಾಗವಾಗಿ ವಿವಿಧ 27 ವಿಭಾಗದ 737 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ, 18 ಅಭ್ಯರ್ಥಿಗಳಿಗೆ ಪಿಎಚ್.ಡಿ, ಒಬ್ಬರಿಗೆ ಎಂ.ಫಿಲ್ ಪದವಿ ಸೇರಿದಂತೆ ಒಟ್ಟು 756 ಅಭ್ಯರ್ಥಿಗಳಿಗೆ ನ್ಯಾ. ದಿನೇಶ ಮಹೇಶ್ವರಿ ಅವರು ಪದವಿ ಪ್ರದಾನ ಮಾಡಿದರು.
ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ ಭಾಗವಹಿಸಿದ್ದರು. ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ವಂದಿಸಿದರು. ರೋಹಿಣಾಕ್ಷ ಶಿರ್ಲಾಲು, ಅಂಕಿತ ಸತ್ಪತಿ, ಸ್ವಪ್ನಿಲ್ ಚಾಪೇಕರ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ವಿಶ್ವವಿದ್ಯಾಲಯದ ಆಡಳಿತ ಕಚೇರಿಯಿಂದ ಘಟಿಕೋತ್ಸವ ನಡೆದ ವಿವಿಧೋದ್ದೇಶ ಸಭಾಂಗಣದವರೆಗೆ ಮೆರವಣಿಗೆ ಮೂಲಕ ಮುಖ್ಯ ಅತಿಥಿಗಳು, ಕುಲಪತಿ, ಕುಲಸಚಿವರು, ಆಡಳಿತ ಮಂಡಳಿ ಸದಸ್ಯರು, ಡೀನರ್, ವಿಭಾಗ ಮುಖ್ಯಸ್ಥರು ಬಂದರು.
ಘಟಿಕೋತ್ಸವಕ್ಕೂ ಮುನ್ನ ಆಡಳಿತ ಕಚೇರಿಯಿಂದ ವಿವಿಧೋದ್ದೇಶ ಸಭಾಂಗಣದವರೆಗೆ ವಿಶ್ವವಿದ್ಯಾಲಯದ ಕುಲಪತಿ ಕುಲಸಚಿವರು ಆಡಳಿತ ಮಂಡಳಿ ಸದಸ್ಯರು ಡೀನರು ವಿಭಾಗದ ಮುಖ್ಯಸ್ಥರು ಮೆರವಣಿಗೆಯಲ್ಲಿ ತೆರಳಿದರು
ಸಿಯುಕೆಯಲ್ಲಿ ದೇಶದ ವಿವಿಧ ಮೂಲೆಯಿಂದ ಬಂದಿರುವ ಸುಮಾರು 3 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷ 5 ವರ್ಷದ ಬಿಎ (ಎಲ್‌ಎಲ್‌ಬಿ) ಕೋರ್ಸ್ ಆರಂಭಿಸಲಾಗಿದೆಪ್ರೊ.ಬಟ್ಟು ಸತ್ಯನಾರಾಯಣ ಸಿಯುಕೆ ಕುಲಪತಿ
ಕರ್ನಾಟಕದ ಸಾಧನೆ ಸ್ಮರಿಸಿದ ನ್ಯಾಯಮೂರ್ತಿ
ನ್ಯಾ.ದಿನೇಶ್ ಮಾಹೇಶ್ವರಿ ಅವರು ತಮ್ಮ ಘಟಿಕೋತ್ಸವ ಭಾಷಣದಲ್ಲಿ ಕರ್ನಾಟಕದ ಸಾಧನೆಯನ್ನು ಮುಕ್ತಕಂಠದಿಂದ ಸ್ಮರಿಸಿದರು. ಕರ್ನಾಟಕವು ಪ್ರಪಂಚಕ್ಕೆ ಶೂನ್ಯ ಎಂಬ ಅಂಕಿಯನ್ನು ನೀಡಿದೆ. ಈಗ ಕೃತಕ ಬುದ್ಧಿಮತ್ತೆ ಎಂಜಿನಿಯರ್‌ಗಳನ್ನು ನೀಡುತ್ತಿದೆ. ದಾಸಸಾಹಿತ್ಯದ ಮೂಲಕ ಭಕ್ತಿಯ ಮರ್ಮವನ್ನು ಬೋಧಿಸಿದೆ. ಈಗ ಜಾಗತಿಕ ತರಗತಿಗಳಲ್ಲಿ ವಿನ್ಯಾಸ ಚಿಂತನೆಯ ಪಾಠಗಳನ್ನು ಕಲಿಸುತ್ತಿದೆ. ಮರತೂರಿನಲ್ಲಿ ನ್ಯಾಯಶಾಸ್ತ್ರದ ಬೆಳವಣಿಗೆಯಿಂದ ಆರಂಭಿಸಿ ವೈಟ್‌ಫೀಲ್ಡ್‌ನಲ್ಲಿ ತಂತ್ರಜ್ಞಾನ ಕ್ರಾಂತಿಯವರೆಗೆ ಬೆಳೆದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.