
ಕಲಬುರಗಿ: ನಗರವು ಸೇರಿದಂತೆ ಜಿಲ್ಲೆಯಾದ್ಯಂತ ನರಕ ಚತುದರ್ಶಿ, ಅಮಾವಾಸ್ಯೆಯ ಲಕ್ಷ್ಮಿಪೂಜೆ ಹಾಗೂ ಬಲಿಪಾಡ್ಯಮಿ ಆಚರಣೆಯೊಂದಿಗೆ ಮೂರು ದಿನಗಳ ಹಬ್ಬಕ್ಕೆ ಬುಧವಾರ ತೆರೆಬಿತ್ತು.
ನರಕ ಚತುರ್ದಶಿ ಹಿಂದಿನ ದಿನ ಸಂಜೆ ನೀರು ತುಂಬಲಾಗಿತ್ತು. ಸೋಮವಾರ ನರಕಚತುರ್ದಶಿ ಆಚರಿಸಲಾಯಿತು. ‘ಮನೆಯ ಲಕ್ಷ್ಮಿ’ಯಿಂದ ಗಂಡುಮಕ್ಕಳೆಲ್ಲ ಆರತಿ ಬೆಳಗಿಕೊಂಡು ಹಬ್ಬ ಆಚರಿಸಿದ್ದರು. ಹೊಸ ಬಟ್ಟೆ ಧರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ದೀಪಾವಳಿ ಅಮಾವಾಸ್ಯೆಗೆ ಮನೆಗಳಲ್ಲಿ ಲಕ್ಷ್ಮಿ ಪೂಜೆ ಸಡಗರ ಕಂಡುಬಂದಿತ್ತು. ಬಲಿಪಾಡ್ಯಮಿ ದಿನ ಮತ್ತೊಂದು ಸುತ್ತು ಆರತಿ ಬೆಳಗುವ ಸಡಗರ ಕಂಡು ಬಂತು. ಜೊತೆಗೆ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಕಲಬುರಗಿಯ ಬಡಾರೋಜಾ ಪ್ರದೇಶದಲ್ಲಿ ಗೌಳಿಗರು ಸಂಪ್ರದಾಯಬದ್ಧವಾಗಿ ಎಮ್ಮೆಗಳನ್ನು ಸಿಂಗರಿಸಿ ಪೂಜಿಸಿದರು. ಕೋಡುಗಳಿಗೆ ನವಿಲುಗರಿ ಕಟ್ಟಿ, ದೊಡ್ಡ ಧ್ವನಿವರ್ಧಕಗಳ ಸದ್ದಿನೊಂದಿಗೆ ಓಡಿಸಿ ಖುಷಿ ಪಟ್ಟರು.
ಮಾರುಕಟ್ಟೆಯಲ್ಲಿ ಕಸದ ರಾಶಿ: ದೀಪವಾಳಿ ಹಬ್ಬದ ಅಂಗವಾಗಿ ಖರೀದಿ ಭರಾಟೆ ಕಂಡು ಬಂದಿದ್ದ ಮಾರುಕಟ್ಟೆಯಲ್ಲಿ ಗುರುವಾರ ಕಸದ ಗುಡ್ಡೆಗಳು ಬಿದ್ದಿದ್ದು ಕಂಡು ಬಂತು.
ಸೂಪರ್ ಮಾರ್ಕೆಟ್, ಚಪ್ಪಲ್ ಬಜಾರ್ ಸೇರಿದಂತೆ ಹಲವೆಡೆ ತ್ಯಾಜ್ಯದ ಗುಡ್ಡೆಗಳು ಬಿದ್ದಿದ್ದವು. ಪೂಜೆಗೆ ಬಳಸಿದ್ದ ಕಬ್ಬಿನ ಸಿಪ್ಪೆ–ದಂಟು, ಬಾಳೆಕಂದುಗಳು, ಪುಷ್ಪಗಳ ತ್ಯಾಜ್ಯ ಕಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.