ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಈಶಾನ್ಯ ಹಾಗೂ ಬಳ್ಳಾರಿ ಪೊಲೀಸ್ ವಲಯಗಳಲ್ಲಿ ಹಂಚಿ ಹೋಗಿರುವ ಈ ಭಾಗದ ಏಳು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 2023ರಿಂದ 2025ರ ಮಾರ್ಚ್‌ವರೆಗೂ ಒಟ್ಟು 1,318 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ 30 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2023ರಲ್ಲಿ 576 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ 602 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಮಾರ್ಚ್ ಅಂತ್ಯಕ್ಕೆ 140 ಪ್ರಕರಣಗಳು ದಾಖಲಾಗಿವೆ.
ಸಾಮಾಜಿಕ ಹಾಗೂ ಲಿಂಗ ಸಮಾನತೆಯನ್ನು ಸಾರಿದ ಕಲ್ಯಾಣ ಕ್ರಾಂತಿಯ ನೆಲ ಬೀದರ್ ಜಿಲ್ಲೆಯಲ್ಲಿ ಹೆಚ್ಚು ಅಂದರೆ 259 ಪ್ರಕರಣಗಳು ದಾಖಲಾಗಿದ್ದು, ಐವರು ಮಹಿಳೆಯರು ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಚೂರಿನಲ್ಲಿ 245 ಪ್ರಕರಣಗಳು ದಾಖಲಾಗಿವೆ.
ಬಳ್ಳಾರಿಯಲ್ಲಿ 232, ಕಲಬುರಗಿ 187, ಕೊಪ್ಪಳ 149, ವಿಜಯನಗರದಲ್ಲಿ 151, ಯಾದಗಿರಿ ಜಿಲ್ಲೆಯಲ್ಲಿ 95 ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆ ಕಿರುಕುಳದಿಂದಾಗಿ 2023 ಹಾಗೂ 2024ರಲ್ಲಿ ತಲಾ 13 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2024ರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 4 ಜನ, ಬೀದರ್‌ನಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರು, ಕೊಪ್ಪಳದಲ್ಲಿ ಇಬ್ಬರು, ರಾಯಚೂರಿನಲ್ಲಿ ಇಬ್ಬರು ಹಾಗೂ ವಿಜಯನಗರ ಜಿಲ್ಲೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2025ರಲ್ಲಿ ಮಾರ್ಚ್‌ವರೆಗೂ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಹುತೇಕ ಪ್ರಕರಣಗಳಲ್ಲಿ ಪತಿಯನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಪತಿಯೇ ಕಿರುಕುಳದ ಮೂಲ ಎಂದು ಪತ್ನಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತಿಯ ಕುಟುಂಬದವರೂ ಕಿರುಕುಳದ ಭಾಗವಾಗಿದ್ದಾರೆ ಎಂದು ತಿಳಿಸಿದ್ದಾರೆ.
‘ಯಾವ ಸ್ಥಳವೂ ಸುರಕ್ಷಿತವಲ್ಲ’ ‘ಸಮಾಜದಲ್ಲಿ ಮಹಿಳೆಗೆ ಕುಟುಂಬ ಸೇರಿದಂತೆ ಯಾವ ಸ್ಥಳವೂ ಸುರಕ್ಷಿತವಲ್ಲ ಎನ್ನುವಂಥ ಸ್ಥಿತಿ ನಿರ್ಮಾಣ ಆಗಿದೆ. ವಿಕೃತಿ ಹೆಚ್ಚುತ್ತಿದೆ. ಇದೆಲ್ಲವನ್ನೂ ತಡೆಯಬೇಕಾದ ಸರ್ಕಾರಗಳು ಸಹ ಸುಮ್ಮನೆ ಕುಳಿತಿವೆ’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಬೇಸರ ವ್ಯಕ್ತಪಡಿಸಿದರು. ‘ಆರ್ಥಿಕ ಕಾರಣಗಳು ದೌರ್ಜನ್ಯ ಹೆಚ್ಚುವಂತೆ ಮಾಡಿವೆ. ಆರ್ಥಿಕತೆ ಮನುಷ್ಯನ ಮನಸ್ಥಿತಿ ನಿರ್ಧರಿಸುತ್ತದೆ. ನಿರುದ್ಯೋಗ ಹೆಚ್ಚುತ್ತಿರುವ ಕಾರಣ ಎಲ್ಲರೂ ಮನೆಯಲ್ಲಿಯೇ ಉಳಿಯಬೇಕಾದ ಸ್ಥಿತಿ ಇದೆ. ಆದ್ದರಿಂದ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರಗಳು ನರೇಗಾದಡಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.