ADVERTISEMENT

ವಾಡಿ | ಬರ: ಸೀತಾಫಲ ಇಳುವರಿ ಕುಸಿತ

ಸಿದ್ದರಾಜ ಎಸ್.ಮಲಕಂಡಿ
Published 8 ನವೆಂಬರ್ 2023, 4:51 IST
Last Updated 8 ನವೆಂಬರ್ 2023, 4:51 IST
ಸೀತಾಫಲ ಹಣ್ಣು ಮಾರಾಟ ಮಾಡುತ್ತಿರುವ ಮಹಿಳೆ
ಸೀತಾಫಲ ಹಣ್ಣು ಮಾರಾಟ ಮಾಡುತ್ತಿರುವ ಮಹಿಳೆ   

ವಾಡಿ: ಈ ವರ್ಷ ಬರ ನಾನಾ ಸಮಸ್ಯೆಗಳನ್ನು ಸೃಷ್ಟಿಸಿದ್ದು, ಅತಿವೃಷ್ಟಿಯ ಹೊಡೆತಕ್ಕೆ ಮುಂಗಾರು ಹಿಂಗಾರು ಬೆಳೆಗಳು ಕಮರಿ ಹೋಗುತ್ತಿವೆ. ಮಳೆಯಿಲ್ಲದೆ ಹಿಂಗಾರು ಬೆಳೆಗಳು ಬಿತ್ತನೆಯಾಗಿಲ್ಲ. ಬೆಟ್ಟ, ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿವಾಗಿ ಬೆಳೆಯುವ ಸೀತಾಫಲ ಹಣ್ಣುಗಳು ಕಡಿಮೆಯಾಗಿವೆ. ಮಳೆಯ ಕೊರತೆಯಿಂದಾಗಿ ಈ ವರ್ಷ ತಾಲ್ಲೂಕಿನಲ್ಲಿ ಸೀತಾಫಲ ಇಳುವರಿ ತೀವ್ರವಾಗಿ ಕುಸಿದಿದೆ.

ತಾಲ್ಲೂಕಿನ ಹಲವೆಡೆ ಹರಡಿಕೊಂಡಿರುವ ಬೆಟ್ಟ–ಗುಡ್ಡಗಳು ಸೀತಾಫಲ ಗಿಡಗಳಿಗೆ ಆಶ್ರಯ ನೀಡಿದ್ದು ಪ್ರಕೃತಿದತ್ತವಾಗಿ ಗಿಡಗಳು ಬೆಳೆದು ನಿಂತು ಸ್ವಾದಿಷ್ಟ ಹಣ್ಣುಗಳ ಕೊಡುಗೆ ನೀಡುತ್ತಿವೆ. ಆದರೆ ಬರದ ಬೇಗೆಗೆ ಸಿಲುಕಿ ಗಿಡಗಳು ಹಾಳಾಗಿದ್ದು ಸೀತಾಫಲಪ್ರಿಯರ ನಿರಾಶೆಗೆ ಕಾರಣವಾಗಿದೆ.

ಪ್ರತಿವರ್ಷ ಜುಲೈ ಅಂತ್ಯದಿಂದ ನಾಲ್ಕು ತಿಂಗಳ ಕಾಲ ಹಣ್ಣಿನ ಕೊಯ್ಲು ಇರುತ್ತದೆ. ಜೂನ್‌ ಅವಧಿಯಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಜುಲೈ ಅಂತ್ಯದಿಂದ ಹಣ್ಣು ಬಿಡಲು ಆರಂಭವಾಗಿತ್ತು. ನಂತರ ಮಳೆ ಕೈಕೊಟ್ಟ ಕಾರಣ, ಬಿಸಿಲಿನ ಝಳಕ್ಕೆ ಗಿಡ ಹಾಗೂ ಗಿಡದಲ್ಲಿದ್ದ ಎಳೆಯ ಕಾಯಿಗಳು ಬಾಡಲು ಆರಂಭಿಸಿದವು. ಕಾಯಿಯ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದರಿಂದ ಅವು ಗಾತ್ರ ಹಾಗೂ ರುಚಿ ಕಳೆದುಕೊಂಡು ನಿಸ್ತೇಜವಾಗಿವೆ.

ADVERTISEMENT
ತಾಲ್ಲೂಕಿನಲ್ಲಿ ಪ್ರತಿವರ್ಷ ಸೀತಾಫಲ ಗಿಡಗಳ ಸಂಖ್ಯೆಯನ್ನು ಹೆಚ್ಚಿಸುವ ಯತ್ನವನ್ನು ಇಲಾಖೆ ಮಾಡುತ್ತಿದೆ. ಮಳೆ ಕೊರತೆಯಿಂದ ಗಿಡಗಳು ಬೆಳವಣಿಗೆ ಕಾಣುತ್ತಿಲ್ಲ.
ವಿಜಯಕುಮಾರ ಬಡಿಗೇರ, ಚಿತ್ತಾಪುರ ಅರಣ್ಯ ವಲಯಧಿಕಾರಿ

2-3 ತಿಂಗಳ ಕಾಲ ಉತ್ತಮ ವಹಿವಾಟು ನಡೆಯುತ್ತಿತ್ತು. ಯರಗೋಳ, ಅಲ್ಲೂರು(ಬಿ) ಅಲ್ಲೂರು(ಕೆ) ಸಂಕನೂರು, ಅಳ್ಳೊಳ್ಳಿ, ದಂಡಗುಂಡ ಸಹಿತ ಮತ್ತಿತರ ಭಾಗಗಳ 200ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಹಣ್ಣು ಕಿತ್ತು ತಂದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಈ ವರ್ಷ ಇದಕ್ಕೆ ಬರೆ ಬಿದ್ದಿದೆ.

‘ಪ್ರತಿ ಋತುವಿಗೆ ಹೋಲಿಸಿದರೆ, ಈ ಬಾರಿ ಶೇ 30ರಿಂದ ಶೇ 40ರಷ್ಟು ಇಳುವರಿ ಮಾತ್ರ ಕೈಗೆ ಸಿಗಬಹುದು. ಒಂದು ತಿಂಗಳಿನಿಂದ ಕಾಯಿ ಮಾರಾಟ ಮಾಡಲಾಗುತ್ತಿದೆ. ಈಗ ಗಿಡಗಳಲ್ಲಿ ಕಾಯಿಗಳೆಲ್ಲಾ ಖಾಲಿಯಾಗಿವೆ. ಬಿಸಿಲಿನ ಝಳಕ್ಕೆ ಕಾಯಿ ಕಪ್ಪಾಗುತ್ತಿದ್ದು, ಅವು ಹಣ್ಣಾಗುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ರಾಮಾನಾಯಕ ತಾಂಡಾದ ಹಣ್ಣು ಹೊತ್ತು ಮಾಡುವ ಸೀತಾಬಾಯಿ ಪವಾರ.

ವಾಡಿ ಪಟ್ಟಣದ ಅಂಬೇಡ್ಕರ್‌ ವೃತ್ತ, ಮೌಲಾನ ಅಬುಲ್ ಕಲಾಂ ಚೌಕ್, ಕಾಕಾ ಚೌಕ್ ಸಹಿತ ವಿವಿಧ ಹಳ್ಳಿಗಳ ಬಸ್ ನಿಲ್ದಾಣ ವೃತ್ತಗಳಲ್ಲಿ ಸಾಲು ಸಾಲಾಗಿ ಕುಳಿತು ವ್ಯಾಪಾರ ಮಾಡುತ್ತಿದ್ದ ಮಹಿಳಾ ವ್ಯಾಪಾರಿಗಳು ಈಗ ಕಣ್ಮರೆಯಾಗುತ್ತಿದ್ದಾರೆ.

ಗುಡ್ಡಗಾಡು ಪ್ರದೇಶಗಳಲ್ಲಿ ಹಣ್ಣುಗಳನ್ನು ಹುಡುಕಿ ತಂದು ಮಾರಾಟ ಮಾಡಿ ಅದರಿಂದಲೇ ಬದುಕು ಕಟ್ಟಿಕೊಂಡಿದ್ದ ನಮಗೆ ಈ ವರ್ಷ ಸೀತಾಫಲ ಹಣ್ಣುಗಳ ಕೊರತೆಯಿಂದ ವ್ಯಾಪಾರ ಅಷ್ಟಕ್ಕಷ್ಟೇ ಇದೆ ಎನ್ನುತ್ತಾರೆ ವ್ಯಾಪಾರಿಗಳಾದ ಶರಣಮ್ಮ ಮಾನೆಗಾರ, ಅಯ್ಯಮ್ಮ ಜಂಗಮ ಹಾಗೂ ಪಾರ್ವತಿ ಯರಗೋಳ.

ಬೆಳವಣಿಗೆಯಾಗದ ಸೀತಾಫಲ ಹಣ್ಣು
ಸೀತಾಫಲ ಹಣ್ಣು ಮಹಿಳಾ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.