ಸೈಬರ್ ಅಪರಾಧ
ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಇ–ಆಸ್ತಿ ತಂತ್ರಾಂಶದ ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡು 87 ಆಸ್ತಿಗಳ ಖಾತೆಯನ್ನು ಅಕ್ರಮವಾಗಿ ಸೃಜಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರು ಹಾಗೂ ಇತರರ ವಿರುದ್ಧ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಪ್ರಭಾರ ಉಪಆಯುಕ್ತ ರಾಜೇಂದ್ರ ಭಾಲ್ಕೆ ಅವರು ನಗರದ ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಪಾಲಿಕೆಯ 1, 2, 3ನೇ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಒಟ್ಟು 87 ಆಸ್ತಿಗಳನ್ನು ಪಾಲಿಕೆಯ ಒಟ್ಟು 52 ಸಿಬ್ಬಂದಿ/ಅಧಿಕಾರಿಗಳ ಲಾಗಿನ್‌ಗಳ ಮೊಬೈಲ್ ನಂಬರ್ ಬದಲಾವಣೆ ಮಾಡಿ, ಬೇರೆ ಸಂಖ್ಯೆ ಸೇರ್ಪಡೆ ಮಾಡಿ ಮತ್ತು ಅನುಮೋದನೆ ನೀಡಿ ಖಾತೆ ಸೃಜಿಸಿರುವುದು ಕಂಡು ಬಂದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೊದಲಿಗೆ ಪಾಲಿಕೆಯ ವಲಯ ಕಚೇರಿ–2ರಲ್ಲಿ 2025ರ ಏಪ್ರಿಲ್ 24ರಿಂದ ಮೇ 5ರ ಅವಧಿಯಲ್ಲಿ ಈ ಅಕ್ರಮ ಸೇರ್ಪಡೆ ಪತ್ತೆಯಾಗಿತ್ತು. ಬಳಿಕ ವಲಯ ಕಚೇರಿ–1 ಹಾಗೂ ವಲಯ ಕಚೇರಿ–3ರಲ್ಲೂ ಇಂಥ ಅಕ್ರಮ ಪತ್ತೆಯಾಗಿತ್ತು. ಈ ಬಗೆಗೆ ವಲಯ ಆಯುಕ್ತರು, ಅಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಮೌಖಿಕ ದೂರು ನೀಡಿದ್ದರು.
ಬಳಿಕ ಪಾಲಿಕೆ ಆಯುಕ್ತರ ಇ–ಆಸ್ತಿ ತಂತ್ರಾಂಶದ ಲಾಗಿನ್‌ಗೆ ಈ ಹಿಂದೆ ಪಾಲಿಕೆಯಲ್ಲಿ ಸೀನಿಯರ್ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರ ಅಬ್ದುಲ್ ರೆಹಮಾನ್ ಮೊಬೈಲ್ ಸಂಖ್ಯೆ 2025ರ ಜುಲೈ 2ರವರೆಗೆ ತಂತ್ರಾಂಶದಲ್ಲಿ ಜೋಡಣೆಯಿತ್ತು. ಅಂತಿಮವಾಗಿ 2025ರ ಜೂನ್ 29ರಿಂದ ಜುಲೈ 1ರ ಅವಧಿಯಲ್ಲಿ 87 ಖಾತೆಗಳು ಸೃಜನೆಯಾಗಿವೆ. ಈ ಅಕ್ರಮದಲ್ಲಿ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೂನಿಯರ್ ಪ್ರೊಗ್ರಾಮರ್ ನಾಗಣ್ಣ ಗೌಡ, ಪಾಲಿಕೆ ಕಂದಾಯ ಶಾಖೆಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ 2025ರ ಏಪ್ರಿಲ್ 25ರಿಂದ ಸಂಜೆ 7ರಿಂದ ಏಪ್ರಿಲ್ 27ರತನಕ ಇ–ಆಸ್ತಿ ಸರ್ವರ್ ಡೌನ್ ಇರುವುದಾಗಿ ಏಪ್ರಿಲ್ 25ರಂದು ಮೆಸೇಜ್ ಕಳುಹಿಸಿರುವುದು ಕಂಡು ಬಂದಿದೆ. ಆದರೆ, ಸರ್ವರ್ ಡೌನ್ ಬಗೆಗೆ ಸಂಬಂಧಪಟ್ಟ ಮೇಲಿನ ಇಲಾಖೆಯಿಂದ ಆಗಲಿ ಅಥವಾ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸೂಚನೆ ಬಂದಿರಲಿಲ್ಲ. ಈ ಪ್ರಕರಣದಲ್ಲಿ ಪಾಲಿಕೆಯ ಮಾಜಿ ಸೀನಿಯರ್ ಪ್ರೋಗ್ರಾಮರ್ ಅಬ್ದುಲ್ ರೆಹಮಾನ್, ಜೂನಿಯರ್ ಪ್ರೊಗ್ರಾಮರ್ ನಾಗಣ್ಣಗೌಡ ಮತ್ತು ಇತರರು ಭಾಗಿಯಾಗಿ ಪಾಲಿಕೆ ಮತ್ತು ಸರ್ಕಾರವನ್ನು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.