ಕಲಬುರಗಿ: ಇಲ್ಲಿನ ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅವರ ಇಬ್ಬರು ಪುತ್ರರ ಹೆಸರಿನಲ್ಲಿನ ಎರಡು ಸ್ಥಿರ ಹಾಗೂ ಹಲವು ಚರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಪಿಎಂಎಲ್‌ಎ ನಿಬಂಧನೆಗಳ ಅಡಿಯಲ್ಲಿ ಜಪ್ತಿ ಮಾಡಿದೆ.
ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಆರೋಪದಡಿ ನಗರದ ‘ಸೆನ್’ ಠಾಣೆಯಲ್ಲಿ ಭೀಮಾಶಂಕರ ಬಿಲಗುಂದಿ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ. ಪಾಟೀಲ, ಕಾಲೇಜಿನ ಅಕೌಂಟೆಂಟ್ ಸುಭಾಷ ಜಗನ್ನಾಥ ಮತ್ತು ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು, ಹಲವೆಡೆ ಶೋಧಕಾರ್ಯ ನಡೆಸಿದ್ದರು. ಆರೋಪಿಗಳ ವಿಚಾರಣೆ ಸಹ ಮಾಡಲಾಗಿತ್ತು. ನಾಲ್ವರು ಆರೋಪಿಗಳು 2018ರಿಂದ 2024ರವರೆಗೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಸಹಿ ಪಡೆದುಕೊಂಡು, ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ₹ 33.34 ಕೋಟಿ ಸ್ಟೈಫಂಡ್ ಹಣವನ್ನು ತಾವೇ ಪಡೆದು ವಂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಇಡಿ ಹೇಳಿದೆ.
ಅದೇ ಅವಧಿಯಲ್ಲಿ ಭೀಮಾಶಂಕರ ತಮ್ಮ ಪುತ್ರರಾದ ರಾಜಕುಮಾರ ಬಿಲಗುಂದಿ ಹಾಗೂ ಸಂತೋಷ ಹೆಸರಿನಲ್ಲಿ ಎರಡು ಸ್ಥಿರ ಆಸ್ತಿಗಳನ್ನು ಖರೀದಿಸಿದ್ದರು. ಶಾಂತಪ್ಪ ಪಾಟೀಲ ಎಂಬ ಮಧ್ಯವರ್ತಿಯ ಮೂಲಕ ಮಧುಸೂದನ್ ಮಾಲು ಅವರಿಗೆ ಯಾವುದೇ ಕಾನೂನುಬದ್ಧ ಆದಾಯದ ಮೂಲ ಇಲ್ಲದೆ ₹ 5.87 ಕೋಟಿ ನಗದು ಪಾವತಿ ಮಾಡಿದ್ದರು. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.