ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ರಚಿಸಿದ್ದ ‘ಶಿಕ್ಷಣ ತಜ್ಞರ ಸಮಿತಿ’ಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲು ಅಂತಿಮ ತಯಾರಿ ಮಾಡಿಕೊಳ್ಳುತ್ತಿದೆ.
ಕೆಕೆಆರ್‌ಡಿಬಿಯು 2025ರ ಫೆಬ್ರುವರಿ ತಿಂಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದ ಅರ್ಥಶಾಸ್ತ್ರಜ್ಞೆ ಛಾಯಾ ದೇಗಾಂವಕರ್ ನೇತೃತ್ವದಲ್ಲಿ ‘ಶಿಕ್ಷಣ ತಜ್ಞರ ಸಮಿತಿ’ಯನ್ನು ರಚಿಸಿತ್ತು. ಅಬ್ದುಲ್ ಖದೀರ್, ಮಲ್ಲಿಕಾರ್ಜುನ ಎಂ.ಎಸ್., ಫಾಂಸಿಸ್ ಬಾಷ್ಯಮ್, ಎನ್.ಬಿ. ಪಾಟೀಲ, ರುದ್ರೇಶ್ ಎಸ್., ಯಶವಂತ ಹರಸೂರ್ ಹಾಗೂ ನಾಗಾಬಾಯಿ ಬಿ.ಬುಳ್ಳಾ ಅವರನ್ನು ಸದಸ್ಯರನ್ನಾಗಿ ನಿಯೋಜಿಸಿತ್ತು.
ಈ ಸಮಿತಿಯು ಕಳೆದ ನಾಲ್ಕು ತಿಂಗಳಿಂದ ಅಕ್ಷರ ಆವಿಷ್ಕಾರ ಯೋಜನೆ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದೆ. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ, ಅಂಕಿಅಂಶಗಳನ್ನು ಪಡೆದುಕೊಂಡಿದ್ದು, ವರದಿ ಸಲ್ಲಿಕೆಗೂ ಮೊದಲು ಕಲೆಹಾಕಿದ ಅಂಕಿಅಂಶಗಳನ್ನು ಪರಿಶೀಲನೆಗೆ ಒಳಪಡಿಸಿದೆ.
‘ಮಧ್ಯಂತರ ವರದಿಯನ್ನು ಕೆಕೆಆರ್‌ಡಿಬಿ ಅಧ್ಯಕ್ಷರು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಕೆ ಮಾಡುತ್ತೇವೆ. ವರದಿಯು ಸಿದ್ಧತೆಯ ಕೊನೆಯ ಹಂತದಲ್ಲಿದ್ದು, ಕೆಲವು ಮಾಹಿತಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಮತ್ತೆ ಕೆಲವು ಮಾಹಿತಿಯನ್ನು ವಿಶ್ಲೇಷಣೆ ಮಾಡುತ್ತಿದ್ದೇವೆ. ಗರಿಷ್ಠ ಎಂದರೆ ಒಂದು ವಾರದಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡುವ ಚಿಂತನೆಯಲ್ಲಿದ್ದೇವೆ’ ಎಂದು ಸಮಿತಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಕಲ್ಯಾಣ ಕರ್ನಾಟಕದ ಭಾಗದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವಿಕೆಗೆ ಕಾರಣಗಳು, ಶಿಕ್ಷಕರ ವರ್ಗಾವಣೆ, ಅತಿಥಿ ಶಿಕ್ಷಕರಿಗೆ ಬೋಧನಾ ವಿಷಯಗಳ ಹಂಚಿಕೆ, ಡಿಡಿಪಿಐ, ಬಿಇಒ, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (ಡಯಟ್), ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ (ಬಿಆರ್‌ಪಿ) ಪ್ರಸ್ತುತ ಕಾರ್ಯ ವೈಖರಿಯ ವಿಧಾನಗಳನ್ನು ಅಧ್ಯಯನ ಮಾಡಲಾಗಿದೆ. ಡಯಟ್‌ನಲ್ಲಿನ ತರಬೇತಿಯ ವಾಸ್ತವತೆ, ಬಿಆರ್‌ಪಿ ಮತ್ತು ಸಿಆರ್‌ಪಿಗಳ ಕಲಿಕಾ ಸಾಧನಗಳನ್ನು ಮಕ್ಕಳಿಗೆ ಅರ್ಥ ಆಗುವಂತೆ ಸ್ಥಳೀಯತೆಗೆ ಹೊಂದಿಸಿಕೊಂಡ ಬಗೆಯನ್ನೂ ಅವಲೋಕನ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
‘ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಗಳನ್ನು (ಎಸ್‌ಒಪಿ) ಮಾಡಿಕೊಂಡಿಲ್ಲ. ಯಾರು ಯಾವ ವಿಷಯಗಳನ್ನು ತೆಗೆದುಕೊಳ್ಳಬೇಕು ಎಂಬುದಕ್ಕೆ ಸರಿಯಾದ ನಿಯಮಗಳಿಲ್ಲ. ಕನ್ನಡ ಓದಿದ ಅತಿಥಿ ಶಿಕ್ಷಕರಿಗೆ ಇಂಗ್ಲಿಷ್ ವಿಷಯ, ಗಣಿತ ಕೊಟ್ಟಿರುವುದು ಗಮನಕ್ಕೆ ಬಂದಿದೆ. ನೇಮಕ ಮಾಡಿಕೊಂಡ ಬಳಿಕ ಅತಿಥಿ ಶಿಕ್ಷಕರಿಗೆ ತರಬೇತಿ ನೀಡಬೇಕಿತ್ತು. ಅದು ಸಹ ಆಗಿಲ್ಲ. ಡಯಟ್ ಸಹ ತರಬೇತಿ ನೀಡಲು ಪ್ರಸ್ತಾವ ಸಲ್ಲಿಸುವ ಹೊಣೆಗಾರಿಕೆಯಿಂದ ಜಾರಿಕೊಂಡಿದೆ. ಇಂತಹ ಹಲವು ವಿಚಾರಗಳ ಬಗ್ಗೆ ಬಹು ಖಾರವಾಗಿ ಪ್ರಸ್ತಾಪ ಮಾಡಲಾಗಿದೆ’ ಎಂದು ಸಮಿತಿಯ ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.