
ಕಲಬುರಗಿ: ‘ವಿದ್ಯೆ ಕಲಿಸುವವನಿಗೆ ಜಗತ್ತು ತಲೆಬಾಗುತ್ತದೆ. ಗುರು ದೇವರಿಗೆ ಸಮ. ಜ್ಞಾನಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ’ ಎಂದು ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಿಣಿ ಎಸ್. ಅಪ್ಪಾ ಹೇಳಿದರು.
ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದಿಂದ ಶನಿವಾರ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಅವರ 195ನೇ ಜನ್ಮದಿನೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಆದರ್ಶ ವಿದ್ಯಾದಾತ್ರಿ, ರಾಜ್ಯಮಟ್ಟದ ಆದರ್ಶ ಉಪಾಧ್ಯಾಯರು ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ, ದೇಶ, ಸಮಾಜ ಕಟ್ಟುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ವಿಜಯಪುರ ಜ್ಞಾನಯೋಗಾಶ್ರಮದ ಶ್ರದ್ಧಾನಂದ ಸ್ವಾಮೀಜಿ ಮಾತನಾಡಿ, ‘ಜೀವನದಲ್ಲಿ ವಿದ್ಯೆಗಾಗಿ ಶ್ರಮಿಸುವವರು ದೇವರಾಗುತ್ತಾರೆ. ಜ್ಞಾನದ ಬೀಜ ಬಿತ್ತಿದವರು ಸದಾ ಸ್ಮರಣೀಯರು. ಬುದ್ಧಿ ಖರ್ಚು ಮಾಡಿದಷ್ಟೂ ವಿದ್ಯೆ ಬೆಳೆಯುತ್ತದೆ. ಮುಳ್ಳು ಇದ್ದರಷ್ಟೇ ಹೂವಿಗೆ ಶೋಭೆ. ನಿದ್ದೆ ಕೆಡಿಸುವುದು ನಿಜವಾದ ಕನಸು. ವಿದ್ಯೆ ಕೊಟ್ಟ ಗುರು ಎಲ್ಲರಿಗಿಂತ ದೊಡ್ಡವರು’ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ,‘ಶಿಕ್ಷಕರು ದೇಶದ ಶಿಲ್ಪಿಗಳು. ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಸದಾ ಸ್ಮರಣೀಯರಾಗಿದ್ದಾರೆ. ಶರಣಬಸವಪ್ಪ ಅಪ್ಪ ಕೂಡ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು. ಮನೆ, ಮನೆಗೆ ಟಾಂಗಾ ಕಳಿಸಿಕೊಟ್ಟರು’ ಎಂದು ಸ್ಮರಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ, ‘ಕೈ ಮಾಡಿದರೆ ಕೈಲಾಸ ಅನ್ನೋದು ಕಲ್ಯಾಣ ಕರ್ನಾಟಕ. ಕಲಬುರಗಿ ಸಂಪದ್ಭರಿತ ಜಿಲ್ಲೆ. ನಲಿಕಲಿ ಯೋಜನೆಯಿಂದ ಬಡಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ನಲಿಕಲಿ ಯೋಜನೆ ಬದಲಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಫಾದರ್ ಜೋಸೆಫ್ ಪ್ರವೀಣ, ಅಮರೇಶ್ವರಿ ಬಿ. ಚಿಂಚನಸೂರ, ಡಾ.ರವಿಕಾಂತಿ ಎಸ್. ಖ್ಯಾತನಾಳ, ಜಯಶೀಲಾ ಬಿರಾದಾರ, ಶರಣಮ್ಮ ಜಮಾದಾರ, ಸುರೇಖಾ ಎಂ. ಜೇವರ್ಗಿ ಸೇರಿದಂತೆ ಹಲವರು ಹಾಜರಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ತ್ರಿವಿಧ ದಾಸೋಹ ಶ್ರದ್ಧಾನಂದ ಸ್ವಾಮೀಜಿಗೆ ಜ್ಞಾನಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. 14 ಜನರಿಗೆ ವಿಶೇಷ ಪ್ರಶಸ್ತಿ 53 ಜನರಿಗೆ ಆದರ್ಶ ಉಪಾಧ್ಯಾಯರುಗಳು ಪ್ರಶಸ್ತಿ ಹಾಗೂ ಜಿಲ್ಲೆಯ 42 ಶಿಕ್ಷಕಿಯರಿಗೆ ಆದರ್ಶ ವಿದ್ಯಾದಾತ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.