ADVERTISEMENT

ಕಲಬುರಗಿ: ಈದ್‌ ಮಿಲಾದ್‌ಗೆ ವಿದ್ಯುದ್ದೀಪಗಳ ರಂಗು

ಸಾಮೂಹಿಕ ಜುಲೂಸ್‌ ನಿಷೇಧ, ಬಡಾವಣೆಗಳಲ್ಲಿ ಬಿಡಿಯಾಗಿ ಮೆರವಣಿಗೆ ಮಾಡಲು ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 4:05 IST
Last Updated 19 ಅಕ್ಟೋಬರ್ 2021, 4:05 IST
ಈದ್‌ ಮಿಲಾದ್‌ ಅಂಗವಾಗಿ ಕಲಬುರಗಿಯ ಮುಖ್ಯರಸ್ತೆಯಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಸೋಮವಾರ ರಾತ್ರಿ ಕಣ್ಣು– ಮನ ಸೆಳೆಯಿತು
ಈದ್‌ ಮಿಲಾದ್‌ ಅಂಗವಾಗಿ ಕಲಬುರಗಿಯ ಮುಖ್ಯರಸ್ತೆಯಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಸೋಮವಾರ ರಾತ್ರಿ ಕಣ್ಣು– ಮನ ಸೆಳೆಯಿತು   

ಕಲಬುರಗಿ: ಮಂಗಳವಾರ ಆಚರಿಸಲಾಗುವ ‘ಈದ್‌ ಮಿಲಾದ್‌ ಉನ್‌ ನಬಿ’ ಹಬ್ಬಕ್ಕೆ ನಗರದಲ್ಲಿ ಭರದ ಸಿದ್ಧತೆಗಳು ನಡೆದವು. ಮುಸ್ಲಿಮರ ಬೆಳಕಿನ ಹಬ್ಬದ ಅಂಗವಾಗಿ ಇಲ್ಲಿನ ಮುಖ್ಯರಸ್ತೆ, ಮಸೀದಿ, ದರ್ಗಾಗಳಿಗೆ ಅಲಂಕಾರ ಮಾಡಲಾಗಿದೆ. ವಿಶೇಷವಾಗಿ ಝಗಮಗಿಸುವ ಬಣ್ಣಬಣ್ಣದ ವಿದ್ಯುದ್ದೀಪಾಲಂಕಾರದಿಂದ ಸಂಭ್ರಮ ಮನೆ ಮಾಡಿದೆ.

ವೈರಾಣು ಉಪಟಳ ಹೆಚ್ಚಬಹುದು ಎಂಬ ಕಾರಣ ಸಾಮೂಹಿಕ ಜಲೂಸ್‌ (ಮೆರವಣಿಗೆ) ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಆದರೆ, ಸಮುದಾಯದವರು ಆಯ ಬಡಾವಣೆಗಳಲ್ಲಿ, ಮಸೀದಿ, ದರ್ಗಾಗಳಲ್ಲಿ ಹಬ್ಬ ಆಚರಿಸಲು ಅವಕಾಶವಿದೆ. ಇದಕ್ಕಾಗಿ ವಾರದ ಹಿಂದಿನಿಂದಲೂ ಸಿದ್ಧತೆ ಮಾಡಿಕೊಂಡಿರುವ ಮುಸ್ಲಿಮರು ಸೋಮವಾರ ಮಸೀದಿ, ದರ್ಗಾಗಳನ್ನು ಸ್ವಚ್ಛಗೊಳಿಸಿದರು. ಸುಣ್ಣ– ಬಣ್ಣ ಹೆಚ್ಚಿ ಅಲಂಕರಿಸಿದರು. ದೀಪಾಲಂಕಾರ ಮಾಡಿದರು.

ನಗರದ ದರ್ಗಾ ರಸ್ತೆ, ಹೊಸ ಜೇವರ್ಗಿ ರಸ್ತೆ, ಹಳೆ ಜೇವರ್ಗಿ ರಸ್ತೆ, ಕೋರ್ಟ್‌ ಕಾರ್ನರ್, ಶಹಾಬಜಾರ್‌, ಸಾತ್‌ ಗುಂಬಜ್‌, ಮುಸ್ಲಿಂ ಚೌಕ, ದರಿಯಾ ರೋಡ್, ಈದ್ಗಾ ಸರ್ಕಲ್‌, ಚುನ್ನಿ ಮಾರ್ಕೆಟ್‌, ಕಪಡಾ ಬಜಾರ್‌, ಸೂಪರ್‌ ಮಾರ್ಕೆಟ್‌, ಎಪಿಎಂಸಿ ರಸ್ತೆ,ಖೂನಿ ಹವಾಲಾ, ಇಸ್ಲಾಂ ಕಾಲೊನಿ, ಗಾಜಿ ಮೊಹಲ್ಲ, ಕೆಬಿಎನ್‌ ದರ್ಗಾ, ಎಂಎಸ್‌ಕೆ ಮಿಲ್‌ ಪ್ರದೇಶ, ಅಂತ್ರಾಸವಾಡಿ, ಗಂಜ್‌ ಪ್ರದೇಶದ ಕೊನೆಯವರೆಗೂ ಸಾಲುಸಾಲು ಸರಗಳ ದೀಪಾಲಂಕಾರ ಕಣ್ಣು ಕೋರೈಸುವಂತಿದೆ.

ADVERTISEMENT

‌ಭರ್ಜರಿ ಖಾದ್ಯಗಳು ಸಿದ್ಧ: ಹಬ್ಬದ ಅಂಗವಾಗಿ ಸೋಮವಾರ ರಾತ್ರಿ ಮಸೀದಿ, ದರ್ಗಾ ಹಾಗೂ ಮದರಸಾಗಳಲ್ಲಿ ಗಡಿಬಿಡಿಯ ಸಿದ್ಧತೆಗಳು ನಡೆದವು. ಪ್ರವಾದಿ ಅವರು ಹುಟ್ಟಿದ ಖುಷಿ ಸಂದರ್ಭಕ್ಕಾಗಿ ಬಡವರಿಗೆ ಅನ್ನದಾನ ಮಾಡುವುದು ಹಬ್ಬದ ವಿಶೇಷ. ಇದಕ್ಕಾಗಿ ವಿವಿಧೆಡೆ ಹಲವು ಸಿಹಿ ಖಾದ್ಯ, ಬಿರಿಯಾನಿಗಳು ಸಿದ್ಧಗೊಂಡವು. ಮಂಗಳವಾರ ನಸುಕಿನ 5 ಗಂಟೆಗೇ ಊಟ ನೀಡುವ ಪ್ರಕ್ರಿಯೆ ಆರಂಭಿಸಲು ಮಸೀದಿಗಳ ಮುಖಂಡರು ನಿರ್ಧರಿಸಿದ್ದಾರೆ.

*

ಮೆರವಣಿಗೆ ನಿಷೇಧ: ಬೇಸರ

‘ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅದೇ ರೀತಿ ಈದ್‌ ಮಿಲಾದ್‌ಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಯೇ ಮೆರವಣಿಗೆ ಮಾಡುತ್ತೇವೆ ಎಂದು ಹೇಳಿದ್ದರೂ ಸರ್ಕಾರ ನಿಷೇಧ ಮಾಡಿದ್ದು ಬೇಸರ ತಂದಿದೆ’ ಎಂದು ಜುಲೂಸ್‌ ಕಮಿಟಿ ಮುಖಂಡ ಮಹಮದ್‌ ನಜರುದ್ದೀನ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಕಲಬುರಗಿಯಲ್ಲಿ ನಡೆಯುವ ಜುಲೂಸ್‌ ದಕ್ಷಿಣ ಭಾರತದಲ್ಲೇ ಶ್ರೇಷ್ಠವಾದದ್ದು. ನೂರಕ್ಕೂ ಹೆಚ್ಚು ಸ್ತಬ್ದಚಿತ್ರಗಳ ಮೆರವಣಿಗೆಯನ್ನು ನೋಡಲು ಬೇರೆಬೇರೆ ರಾಜ್ಯಗಳಿಂದಲೂ ಜನ ಬರುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಹಬ್ಬವನ್ನೇ ಮಾಡಿಲ್ಲ. ಈ ಬಾರಿಯಾದರೂ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಇತ್ತು’ ಎಂದು ಮರ್ಕಜ್‌ ಇ ಸೀರತ್ ಸಮಿತಿಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮೊಹಮ್ಮದ್ ಅಸಗರ್ ಚುಲಬುಲ್ ಪ್ರತಿಕ್ರಿಯಿಸಿದರು.

‘ಮೆರವಣಿಗೆ ಹಾಗೂ ಸಾಮೂಹಿಕ ಸಮಾರಂಭಕ್ಕೆ ಮನವಿ ನೀಡಿದ್ದೇವೆ. ಪ್ರತಿಭಟನೆ ಕೂಡ ಮಾಡಿದ್ದೇವೆ. ಆದರೂ ರಾಜ್ಯ ಸರ್ಕಾರ ಕಿವಿಗೊಟ್ಟಿಲ್ಲ. ಇದರಿಂದ ಹಬ್ಬದ ಸಡಗರವೇ ಇಲ್ಲವಾಗಿದೆ. ಈದ್‌ ಮಿಲಾದ್‌ ಮುಸ್ಲಿಮರ ಅತಿಶ್ರೇಷ್ಠ ಹಬ್ಬ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದು ಮೌಲಾನಾ ಜಾವೀದ್‌ ಅಖ್ತರ್‌ ಮಿಸ್ಬಾಹಿ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.