ADVERTISEMENT

ಕಲಬುರಗಿ: ನಗರದೆಲ್ಲೆಡೆ ಸಂಭ್ರಮ, ಸಹಬಾಳ್ವೆ ಸಾರಿದ ಈದ್‌ ಉಲ್ ಫಿತ್ರ್‌

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:46 IST
Last Updated 3 ಮೇ 2022, 5:46 IST
ಕಲಬುರಗಿ ಈದ್ಗಾ ಮೈದಾನದಲ್ಲಿ ಮಂಗಳವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಕಲಬುರಗಿ ಈದ್ಗಾ ಮೈದಾನದಲ್ಲಿ ಮಂಗಳವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಕಲಬುರಗಿ: ನಗರದಾದ್ಯಂತ ಮಂಗಳವಾರ ಈದ್‌ ಉಲ್‌ ಫಿತ್ರ್‌ ಹಬ್ಬದ ಸಂಭ್ರಮ ಕಳೆಗಟ್ಟಿತು. ಒಂದು ತಿಂಗಳ ರಂಜಾನ್‌ ಉಪವಾಸದ ಬಳಿಕ ಮುಸ್ಲಿಮರು ಹಬ್ಬದ ಕೊನೆಯ ದಿನದ ಸಂಭ್ರಮ ಅನುಭವಿಸಿದರು.

ಹೊಸ ಬಟ್ಟೆ ತೊಟ್ಟ ಮುಸ್ಲಿಂ ಸಮುದಾಯದವರು ತಮ್ಮ ಮಕ್ಕಳನ್ನು ಕರೆದುಕೊಂಡು ಸಮೀಪದ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಚುರುಗುಟ್ಟುವ ಬಿಸಿಲಿನ ಮಧ್ಯೆಯೂ ಮೈದಾನದಲ್ಲಿ ಸಾಲಾಗಿ ಕುಳಿತು ಅಲ್ಲಾಹ್‌ ನನ್ನು ಸ್ಮರಿಸಿದರು. ಎಲ್ಲರ ಬದುಕಿನಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದ ಮೂಡಿಸುವಂತೆ ಪ್ರಾರ್ಥಿಸಿದೆವು ಈದ್ಗಾ ಸಮಿತಿ ಮುಖಂಡರು ತಿಳಿಸಿದರು.

ಸೇಡಂ ರಸ್ತೆ ಹಾಗೂ ಹುಮನಾಬಾದ್‌ ರಸ್ತೆಯಲ್ಲಿರುವ ಈದ್ಗಾ ಮೈದಾನ ತಲುಪಲು ಬೆಳಿಗ್ಗೆಯೇ ಜನಸಂದಣಿ ಆರಂಭವಾಯಿತು. ಮೌಲ್ವಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಪರಸ್ಪರ ಅಪ್ಪಿಕೊಂಡು ಈದ್‌ ಹಬ್ಬದ ಶುಭಾಶಯ ಕೋರಿದರು.

ADVERTISEMENT

ಹಬ್ಬದ ಪ್ರಯುಕ್ತ ಚಿಣ್ಣರ ಉತ್ಸಾಹವೂ ಇಮ್ಮಡಿಯಾಗಿತ್ತು. ನಾಲ್ಕೈದು ದಿನಗಳಿಂದ ಗ್ರಾಹಕರಿಂದ ಗಿಜಿಗುಡುತ್ತಿದ್ದ ಸೂಪರ್‌ ಮಾರ್ಕೆಟ್‌ನಲ್ಲಿ ಹಬ್ಬದ ದಿನವೂ ಖರೀದಿ ಭರಾಟೆ ಕಂಡುಬಂತು.

ವಿವಿಧ ರಾಜಕೀಯ ಪಕ್ಷಗಳ ನಾಯಕರು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು.

ದಕ್ಷಿಣ ಭಾರತದ ಪ‍್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಇಲ್ಲಿನ ಖಾಜಾ ಬಂದಾ ನವಾಜ್‌ ದರ್ಗಾದಲ್ಲಿ ಕೂಡ ತಿಂಗಳ ಕಾಲ ಹಬ್ಬದ ಸಾಂಪ್ರದಾಯಿಕ ಆಚರಣೆ ನೆರವೇರಿಸಲಾಯಿತು. ದರ್ಗಾದ ಮುಖ್ಯಸ್ಥರಾದ ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ ಸಜ್ಜಾದಾ ನಶೀನ್‌ ಅವರ ನೇತೃತ್ವದಲ್ಲಿ ಈದ್‌ನ ಆಚರಣೆಗಳು ಸಾಂಗವಾಗಿ ನೆರವೇರಿದವು.

ಉಳಿದಂತೆ ಮುಸ್ಲಿಂ ಚೌಕ್‌, ದರ್ಗಾ ರಸ್ತೆ, ಸಾತ್‌ ಗುಂಬಜ್‌, ಕಪಡಾ ಬಜಾರ್‌, ಎಪಿಎಂಸಿ ರಸ್ತೆ, ಗಂಜ್‌, ಹಳೆ ಜೇವರ್ಗಿ ರಸ್ತೆ, ರೈಲು ನಿಲ್ದಾಣದ ಮಾರ್ಗ, ಎಪಿಎಂಸಿ ಸರ್ಕಲ್‌, ಹುಮನಾಬಾದ್‌ ರಿಂಗ್‌ ರಸ್ತೆ, ಸಂತ್ರಾಸವಾಡಿ, ಖೂನಿ ಹವಾಲಾ, ಇಸ್ಲಾಂ ಕಾಲೊನಿ, ಗಾಜಿ ಮೊಹಲ್ಲ, ಎಂಎಸ್‌ಕೆ ಮಿಲ್‌ ಪ್ರದೇಶದಲ್ಲಿರುವ ಮಸೀದಿಗಳಲ್ಲೂ ಖುರಾನ್‌ ಪಠಣ, ನಮಾಜ್‌ ನಿರಂತರ ನಡೆಯಿತು.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದಾಗಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲಾಗಿಲ್ಲ. ಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಸಂಭ್ರಮದ ಕ್ಷಣಗಳು ಈಗ ಮತ್ತೆ ಮರಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.