
ಕಲಬುರಗಿ: ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬೇರೆ ಮತಪತ್ರ ನೀಡಿದ್ದು, ಮತದಾನ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿದ್ದರಿಂದ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ನಗರದ ವಿಶ್ವಾರಾಧ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಚುನಾವಣೆಯಲ್ಲಿ 14 ಸದಸ್ಯರ ಸ್ಥಾನಕ್ಕೆ 28 ಜನ ಸ್ಪರ್ಧಿಸಿದ್ದು, 6 ಬೂತ್‌ಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮತದಾನ ನಡೆಯುತ್ತಿತ್ತು. ಮಧ್ಯಾಹ್ನ 2ಗಂಟೆ ಸುಮಾರಿಗೆ ಒಂದನೇ ಬೂತ್‌ನಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಮತಪತ್ರಕ್ಕೆ ಬದಲಾಗಿ, ಈಚೆಗೆ ಜರುಗಿದ ಜನತಾ ಬಜಾರ್ ಚುನಾವಣೆಯ ಮತಪತ್ರ ನೀಡಲಾಗಿದೆ. ಇದಕ್ಕೆ ರೈತರು ವಿರೋಧ ಪಡಿಸಿದ್ದಾರೆ.
ಮತಪತ್ರ ಬದಲಾಯಿಸುತ್ತೇವೆ, ಲೋಪ ಸರಿಪಡಿಸುತ್ತೇವೆ ಎಂದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಒಪ್ಪದ ರೈತರು ಚುನಾವಣೆಯೇ ಅಕ್ರಮವಾಗಿ ನಡೆದಿದ್ದು, ಪುನಃ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ ನೇತೃತ್ವದಲ್ಲಿ ನೂರಾರು ರೈತರು ಕಲಬುರಗಿ–ಆಳಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
‘ಸಕ್ಕರೆ ಕಾರ್ಖಾನೆಯ ಚುನಾವಣೆ ಗೊಂದಲದ ಗೂಡಾಗಿದೆ. ಚುನಾವಣಾ ಅಧಿಕಾರಿಗಳು ಪಕ್ಷದ ಪ್ರತಿನಿಧಿಯಂತೆ ನಡೆದುಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಒಂದು ಗುಂಪಿಗೆ ಸಹಾಯ ಮಾಡಲು ಚುನಾವಣಾ ಅಕ್ರಮ ಮಾಡಲು ಪ್ರಯತ್ನಿಸಿದ್ದಾರೆ. ಬೂತ್ ಸಂಖ್ಯೆ 1ರಲ್ಲಿ ಚುನಾವಣಾ ಅಧಿಕಾರಿ ಉದ್ದೇಶ ಪೂರ್ವಕವಾಗಿ ನಕಲಿ ಮತಪತ್ರಗಳು ಹಂಚುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಶಾಸಕರ ಒತ್ತಡದಿಂದ ಚುನಾವಣಾ ಅಧಿಕಾರಿ ಅಕ್ರಮ ಮಾಡಿದ್ದಾರೆ’ ಎಂದು ದೂರಿದರು.
‘ಮತದಾರ ಪಟ್ಟಿಯಲ್ಲಿಯೂ ಅಕ್ರಮ ನಡೆದಿದ್ದು, ಇದರಲ್ಲಿ ಕಾರ್ಖಾನೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಉದ್ದೇಶಪೂರ್ವಕವಾಗಿ ಜನತಾ ಬಜಾರ ಚುನಾವಣೆಯ ಬ್ಯಾಲೆಟ್ ಪೇಪರ್ ಬಳಸಿದ್ದಾರೆ’ ಎಂದರು.
‘ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಚುನಾವಣೆ ನಡೆಸಬೇಕು. ಮತದಾರರ ಪಟ್ಟಿ ಮರು ಪರಿಶೀಲನೆ ಆಗಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ಕೊಡಬೇಕು. ರೈತರು ತಮ್ಮ ಷೇರು ಮೌಲ್ಯದ ವ್ಯತ್ಯಾಸ ಹಣ ಭರಿಸಿದ್ದು ಅಂತಹ ರೈತರಿಗೆ ಮತದಾನದ ಹಕ್ಕನ್ನು ಕೊಡಬೇಕು. ಚುನಾವಣೆ ಪ್ರಕ್ರಿಯೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೀರಣ್ಣ ಮಂಗಾಣಿ, ಬಾಬುಗೌಡ ಎಸ್.ಪಾಟೀಲ ಭೂಸನೂರ, ಮಲ್ಲಿಕಾರ್ಜುನ ಕಂದಗೋಳೆ, ಕಲ್ಯಾಣರಾವ ಪಾಟೀಲ, ಶಿವಾನಂದ ಪಾಟೀಲ ಕೋರಳ್ಳಿ, ಪ್ರಕಾಶ ಸಣಮನಿ, ಅಶೋಕ ಹತರಕ್ಕಿ, ಅಶೋಕ ಗುತ್ತೇದಾರ, ಮಹೇಶ ಗೌಳಿ, ಶರಣಗೌಡ ಪಾಟೀಲ, ಮೈನೋದ್ದಿನ ಜವಳಿ, ಸಲಿಂ ಜಮಾದಾರ, ಶಿವಪುತ್ರ ನಡಗೇರಿ, ಹಣಮಂತರಾವ ಮಾಲಾಜಿ, ಬಸವರಾಜ ಬಿರಾದಾರ ಸೇರಿ ಇತರರು ಇದ್ದರು.
‘ಬಿಜೆಪಿ ಮುಖಂಡರಿಂದ ಗೂಂಡಾಗಿರಿ’
‘ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಗೆ ಶಾಂತಿಯುತವಾಗಿ ಮತದಾನ ಆರಂಭವಾಗಿತ್ತು. ಬಳಿಕ ಕೆಲ ಗೊಂದಲ ಸೃಷ್ಟಿಯಾದಾಗ ಬಿಜೆಪಿ ಮುಖಂಡರು ಮತದಾನ ಕೇಂದ್ರಕ್ಕೆ ನುಗ್ಗಿ ಮತದಾರರ ಪಟ್ಟಿಯನ್ನು ಹರಿದು ಬ್ಯಾಲೆಟ್ ಪೇಪರ್‌ಗಳನ್ನು ಕಸಿದುಕೊಂಡು ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಆಪಾದಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದಬ್ಬಾಳಿಕೆ ಗೂಂಡಾಗಿರಿ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಬೆಂಬಲಿತರು ಸಂಚು ಮಾಡಿದ್ದಾರೆ. ಅದನ್ನು ನಡೆಯಲು ಬಿಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ನಿರ್ಧಾರ ಅವರು ಏನು ತೆಗೆದುಕೊಳ್ಳುತ್ತಾರೆ ನೋಡಬೇಕು’ ಎಂದರು. ‘ಚುನಾವಣೆಯಲ್ಲಿ ಲೋಪದೋಷಗಳು ಕಂಡು ಬಂದರೆ ದೂರು ದಾಖಲಿಸಲು ಕಾನೂನು ಬದ್ಧವಾದ ಅವಕಾಶಗಳಿವೆ. ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಯಾರಿಗೂ ಅಧಿಕಾರ ಇಲ್ಲ. ಚುನಾವಣೆಯಲ್ಲಿ ಅಧಿಕಾರಿ ತಪ್ಪು ಮಾಡಿದ್ದರೆ ತನಿಖೆಯಾಗಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.